ADVERTISEMENT

ಸೌಂಡ್ ರನಿಂಗ್ ಟ್ರ್ಯಾಕ್ ಫೆಸ್ಟ್‌: 1500 ಮೀ ಓಟದಲ್ಲಿ ದೀಕ್ಷಾ ದಾಖಲೆ

ಪಿಟಿಐ
Published 12 ಮೇ 2024, 13:56 IST
Last Updated 12 ಮೇ 2024, 13:56 IST
ಕೆ.ಎಂ.ದೀಕ್ಷಾ
ಕೆ.ಎಂ.ದೀಕ್ಷಾ    

ನವದೆಹಲಿ: ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಸೌಂಡ್ ರನಿಂಗ್ ಟ್ರ್ಯಾಕ್ ಫೆಸ್ಟ್‌ನಲ್ಲಿ ಮಹಿಳೆಯರ 1500 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್‌ ಕೆ.ಎಂ.ದೀಕ್ಷಾ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರೆ, ಪುರುಷರ 5000 ಮೀಟರ್‌ ಸ್ಪರ್ಧೆಯಲ್ಲಿ ಸ್ಟೀಪಲ್‌ಚೇಸರ್ ಅಥ್ಲೀಟ್‌ ಅವಿನಾಶ್ ಸಾಬ್ಳೆ ದ್ವಿತೀಯ ಸ್ಥಾನ ಪಡೆದರು.  

25 ವರ್ಷದ ದೀಕ್ಷಾ ಶನಿವಾರ ನಡೆದ ಫೈನಲ್‌ನಲ್ಲಿ 4 ನಿಮಿಷ 4.78 ಸೆಕೆಂಡ್‌ಗಳಲ್ಲಿ ಓಡಿ ಮೂರನೇ ಸ್ಥಾನ ಪಡೆದರು. ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 2021 ರಲ್ಲಿ ಹರ್‌ಮಿಲನ್‌ ಬೈನ್ಸ್‌ ಸ್ಥಾಪಿಸಿದ್ದ (4 ನಿಮಿಷ 5.39 ಸೆಕೆಂಡ್‌) ದಾಖಲೆಯನ್ನು ಮುರಿದರು.

2023ರಲ್ಲಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ದೀಕ್ಷಾ (4 ನಿಮಿಷ 6.07 ಸೆ.) ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿತ್ತು. ಅಲ್ಲಿ ಅವರು ಬೈನ್ಸ್ ಅವರನ್ನು ಸೋಲಿಸಿ ಚಿನ್ನ ಗೆದ್ದರು.

ADVERTISEMENT

ಉತ್ತರ ಪ್ರದೇಶದ ಅಮ್ರೋಹಾ ಮೂಲದ ದೀಕ್ಷಾ, ಐದು ವರ್ಷಗಳಿಂದ ಎಂಪಿ ಅಥ್ಲೆಟಿಕ್ಸ್ ಅಕಾಡೆಮಿಯ ಭಾಗವಾಗಿದ್ದು, ಕೋಚ್ ಎಸ್.ಕೆ.ಪ್ರಸಾದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ (15 ನಿಮಿಷ, 10.69 ಸೆ.) ಓಡಿ ಐದನೇ ಸ್ಥಾನ ಪಡೆದರು. ಪಾರುಲ್ ತಮ್ಮ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸುವಲ್ಲಿ ವಿಫಲರಾದರು, ಸಹ ಓಟಗಾರ್ತಿ ಅಂಕಿತಾ (15 ನಿಮಿಷ 28.88 ಸೆ.) 10 ನೇ ಸ್ಥಾನ ಪಡೆದರು.

ಪುರುಷರ 5000 ಮೀಟರ್ ಓಟದಲ್ಲಿ ಸಾಬ್ಳೆ 13 ನಿಮಿಷ 20.37 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಸಾಬ್ಳೆ ಅವರ 5000 ಮೀಟರ್ ರಾಷ್ಟ್ರೀಯ ದಾಖಲೆಯ ಸಮಯ 13 ನಿ.19.30 ಸೆ.

ಪುರುಷರ 10,000 ಮೀಟರ್ ಓಟದಲ್ಲಿ ಕಾರ್ತಿಕ್ ಕುಮಾರ್ 62 ಸೆಕೆಂಡುಗಳಲ್ಲಿ ಕೊನೆಯ ಲ್ಯಾಪ್‌ನಲ್ಲಿ ಎರಡನೇ ಸ್ಥಾನ ಪಡೆದರು. ಅವರು ಗುರಿ ತಲುಪಲು ತೆಗೆದುಕೊಂಡ ಕಾಲ (28ನಿ.07.66 ಸೆ). ಇದು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕಂಚಿನ ಮಟ್ಟದ ಸ್ಪರ್ಧೆಯಾಗಿದೆ.

ಅವಿನಾಶ್ ಸಾಬ್ಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.