ನವದೆಹಲಿ : ಪ್ಯಾರಾಲಿಂಪಿಯನ್ ದೀಪಾ ಮಲಿಕ್ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
48ರ ಹರೆಯದ ದೀಪಾ, 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನ ಎಫ್–53 ವಿಭಾಗದ ಶಾಟ್‌ಪಟ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಪ್ಯಾರಾ ಅಥ್ಲೀಟ್ ಎಂಬ ಹಿರಿಮೆಗೂ ಭಾಜನರಾಗಿದ್ದರು.
2018ರಲ್ಲಿ ದುಬೈಯಲ್ಲಿ ಆಯೋಜನೆಯಾಗಿದ್ದ ಪ್ಯಾರಾ ಅಥ್ಲೆಟಿಕ್ ಗ್ರ್ಯಾನ್ ಪ್ರೀ ಕೂಟದ ಜಾವೆಲಿನ್ ಥ್ರೋ (ಎಫ್–53/54 ವಿಭಾಗ) ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ನಾಲ್ಕು ಪದಕ ಗೆದ್ದಿರುವ ದೀಪಾಗೆ 2012ರಲ್ಲಿ ಅರ್ಜುನ ಪ್ರಶಸ್ತಿ ಒಲಿದಿತ್ತು. 2017ರಲ್ಲಿ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಖೇಲ್ ರತ್ನ, ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾಗಿದೆ. ಈ ಪುರಸ್ಕಾರಕ್ಕೆ ಪಾತ್ರರಾದವರಿಗೆ ₹7.5 ಲಕ್ಷ ನಗದು, ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.
ಶನಿವಾರ ನಡೆದ ಸಭೆಯಲ್ಲಿ 12 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯು, ಕ್ರಿಕೆಟಿಗ ರವೀಂದ್ರ ಜಡೇಜ ಸೇರಿ ಒಟ್ಟು 19 ಮಂದಿಯನ್ನು ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ.
ದ್ರೋಣಾಚಾರ್ಯಕ್ಕೆ ವಿಮಲ್: ಕರ್ನಾಟಕದ ಬ್ಯಾಡ್ಮಿಂಟನ್ ಕೋಚ್ ವಿಮಲ್ ಕುಮಾರ್ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಅವರನ್ನು ಧ್ಯಾನ್‌ಚಂದ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ವಿವಿಧ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವರು: ರಾಜೀವ್ ಗಾಂಧಿ ಖೇಲ್ ರತ್ನ: ಬಜರಂಗ್ ಪೂನಿಯಾ (ಕುಸ್ತಿ) ಮತ್ತು ದೀಪಾ ಮಲಿಕ್ (ಪ್ಯಾರಾ ಅಥ್ಲೆಟಿಕ್ಸ್).
ಅರ್ಜುನ ಪ್ರಶಸ್ತಿ: ತಜಿಂದರ್ ಪಾಲ್ ಸಿಂಗ್ ತೂರ್ ಮತ್ತು ಮೊಹಮ್ಮದ್ ಅನಾಸ್ (ಇಬ್ಬರೂ ಅಥ್ಲೆಟಿಕ್ಸ್), ಎಸ್.ಭಾಸ್ಕರನ್ (ದೇಹದಾರ್ಢ್ಯ), ಸೋನಿಯಾ ಲಾಥರ್ (ಬಾಕ್ಸಿಂಗ್), ರವೀಂದ್ರ ಜಡೇಜ (ಕ್ರಿಕೆಟ್), ಚಿಂಗ್ಲೆನ್‌ಸನಾ ಸಿಂಗ್ (ಹಾಕಿ), ಅಜಯ್ ಠಾಕೂರ್ (ಕಬಡ್ಡಿ), ಗೌರವ್ ಸಿಂಗ್ ಗಿಲ್ (ಮೋಟರ್ ಸ್ಪೋರ್ಟ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಅಂಜುಮ್ ಮೌದ್ಗಿಲ್ (ಶೂಟಿಂಗ್), ಹರ್ಮೀತ್ ರಾಜುಲ್ ದೇಸಾಯಿ (ಟೇಬಲ್ ಟೆನಿಸ್), ಪೂಜಾ ದಂಢಾ (ಕುಸ್ತಿ), ಫವಾದ್ ಮಿರ್ಜಾ (ಈಕ್ವೆಸ್ಟ್ರಿಯನ್), ಗುರುಪ್ರೀತ್ ಸಿಂಗ್ ಸಂಧು (ಫುಟ್‌ಬಾಲ್), ಪೂನಮ್ ಯಾದವ್ (ಕ್ರಿಕೆಟ್), ಸ್ವಪ್ನಾ ಬರ್ಮನ್ (ಅಥ್ಲೆಟಿಕ್ಸ್), ಸುಂದರ್ ಸಿಂಗ್ ಗುರ್ಜರ್ (ಪ್ಯಾರಾ ಅಥ್ಲೆಟಿಕ್ಸ್), ಬಿ.ಸಾಯಿ ಪ್ರಣೀತ್ (ಬ್ಯಾಡ್ಮಿಂಟನ್) ಮತ್ತು ಸಿಮ್ರನ್ ಸಿಂಗ್ ಶೇರ್ಗಿಲ್ (ಪೊಲೊ).
ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ): ವಿಮಲ್ ಕುಮಾರ್ (ಬ್ಯಾಡ್ಮಿಂಟನ್), ಸಂದೀಪ್ ಗುಪ್ತಾ (ಟೇಬಲ್ ಟೆನಿಸ್), ಮೋಹಿಂದರ್ ಸಿಂಗ್ ಧಿಲ್ಲೋನ್ (ಅಥ್ಲೆಟಿಕ್ಸ್).
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ): ಮೇಜಬಾನ್ ಪಟೇಲ್ (ಹಾಕಿ), ರಾಮ್‌ವೀರ್ ಸಿಂಗ್ ಖೋಕರ್ (ಕಬಡ್ಡಿ), ಸಂಜಯ್ ಭಾರದ್ವಾಜ್ (ಕ್ರಿಕೆಟ್).
ಧ್ಯಾನ್‌ಚಂದ್ ಪ್ರಶಸ್ತಿ: ಮ್ಯಾನುಯೆಲ್ ಫ್ರೆಡ್ರಿಕ್ಸ್ (ಹಾಕಿ), ಅನೂಪ್ ಬಾಸಕ್ (ಟೇಬಲ್ ಟೆನಿಸ್), ಮನೋಜ್ ಕುಮಾರ್ (ಕುಸ್ತಿ), ನಿತೇನ್ ಕೀರ್ತನೆ (ಟೆನಿಸ್), ಸಿ.ಲಾಲ್ರೆಮ್‌ಸಂಗಾ (ಆರ್ಚರಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.