ಹಾಂಗ್‌ಝೌ: ಭಾರತದ ದೀಪಕ್ ಪೂನಿಯಾ ಅವರು ಏಷ್ಯನ್ ಕ್ರೀಡಾಕೂಟದ 86 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಶನಿವಾರ ನಡೆದ ಫೈನಲ್‌ನಲ್ಲಿ ಅವರು ಎಂಟು ಬಾರಿಯ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತ ಹಸನ್ ಯಾಝ್ದಾನಿ ಅವರಿಗೆ ಸಾಟಿಯಾಗಲಿಲ್ಲ.
ವಿಶೇಷ ಎಂದರೆ ದೀಪಕ್ ಅವರು ಬಾಲ್ಯದಲ್ಲಿ ಹಸನ್ ಅವರು ಅಚ್ಚುಮೆಚ್ಚಿನ ಕುಸ್ತಿಪಟುವಾಗಿದ್ದರು. ಹಸನ್ ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಕೂಡ.
ನೂರ್ ಸುಲ್ತಾನ್‌ನಲ್ಲಿ ನಡೆದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೀಪಕ್ ಫೈನಲ್ ತಲುಪಿದ್ದರು. ಆದರೆ ಇರಾನ್ ಈ ಪೈಲ್ವಾನ್ ಜೊತೆ ದೀಪಕ್ ಅವರಿಗೆ ಪಾದದ ನೋವಿನ ಕಾರಣ ಸೆಣಸಾಡಲು ಆಗಲಿಲ್ಲ. ಹೀಗಾಗಿ ರಜತಪದಕಕ್ಕೆ ಸೀಮಿತಗೊಂಡಿದ್ದರು.
‘ಕೇತ್ಲಿ ಪೈಲ್ವಾನ್’ ಎಂದು ಖ್ಯಾತರಾಗಿರುವ 24 ವರ್ಷದ ದೀಪಕ್ ಅವರಿಗೆ ಪಾಯಿಂಟ್ ತಂದುಕೊಡುವ ಒಂದೂ ಪಟ್ಟು ಹಾಕಲು ಆಗಲಿಲ್ಲ. ಮೊದಲ ಅವಧಿಯಲ್ಲೇ ಯಾಝ್ದಾನಿ ಅವರು 8–0 ಅಂತರದ ಅಧಿಕಾರಯುತ ಮುನ್ನಡೆ ಪಡೆದಿದ್ದರು. ಎರಡನೇ ಸುತ್ತಿನಲ್ಲಿ ಅವರು ಬೇಗನೇ ಗೆಲುವು ಖಚಿತಪಡಿಸಿಕೊಂಡು ಚಿನ್ನ ಉಳಿಸಿಕೊಂಡರು.
ಯಶ್ ತುನಿರ್ (74 ಕೆ.ಜಿ), ವಿಕಿ (97 ಕೆ.ಜಿ) ಮತ್ತು ಸುಮಿತ್ ಮಲಿಕ್ (125 ಕೆ.ಜಿ) ಅವರು ಪದಕ ಸುತ್ತು ತಲುಪುವ ಮೊದಲೇ ಹೊರಬಿದ್ದರು.
ಒಟ್ಟು 6 ಪದಕ: ಭಾರತ ಹಾಂಗ್‌ಝೌ ಕೂಟದ ಕುಸ್ತಿಯಲ್ಲಿ ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಂತೆ ಆಯಿತು. ಇದರಲ್ಲಿ ಒಂದೂ ಚಿನ್ನ ಇಲ್ಲ. ನಿರಾಶೆಯ ವಿಷಯವೆಂದರೆ ಭಜರಂಗ್ ಪೂನಿಯಾ ಅನುಭವಿಸಿದ ಹೀನಾಯ ಸೋಲು.
ಸುನೀಲ್ ಕುಮಾರ್ (87 ಕೆ.ಜಿ), ಅಂತಿಮ್ ಪಂಘಲ್ (53 ಕೆ.ಜಿ), ಸೋನಮ್ ಮಲಿಕ್ (62 ಕೆ.ಜಿ), ಅಮನ್ ಸೆಹ್ರಾವತ್ (57 ಕೆ.ಜಿ), ಕಿರಣ್ ಬಿಷ್ಣೋಯಿ (76 ಕೆ.ಜಿ) ಇತರ ಪದಕ ವಿಜೇತರು.
2018ರ ಜಕಾರ್ತಾ ಕ್ರೀಡೆಗಳಲ್ಲಿ ಭಾರತ ಎರಡು ಚಿನ್ನ (ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್) ಸೇರಿ ಒಟ್ಟು ಮೂರು ಪದಕ ಗಳಿಸಿತ್ತು.
ಯಶ್ ಅವರು ತಾಂತ್ರಿಕ ನೈಪುಣ್ಯದ ಹಿನ್ನಡೆಯಿಂದ ಮಗೊಮೆತ್ ಇವ್ಲೊವ್ (ತಾಜಿಕಿಸ್ತಾನ) ಅವರಿಗೆ ಮಣಿದರು. ವಿಕಿ, ಕಜಕಸ್ತಾನದ ಅಲಿಸ್ಟರ್ ಯರ್ಗಲಿ ಎದುರು ಸೋತರು. ಕಿರ್ಗಿಸ್ತಾನದ ಅಯಾಲ್ ಲಾಝರೆವ್ ಅವರು ಸುಮಿತ್ ಮಲಿಕ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.