ಪ್ಯಾರಿಸ್: ಭಾರತದ ಅನುಭವಿ ಬಿಲ್ಗಾರ್ತಿ ದೀಪಿಕಾ ಕುಮಾರಿ ಅವರು ಬುಧವಾರ ಒಲಿಂಪಿಕ್ಸ್‌ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ದೀಪಿಕಾ ಅವರು ತಂಡ ವಿಭಾಗದ ಸ್ಪರ್ಧೆಯಲ್ಲಿ ನಿರಾಸೆ ಮೂಡಿಸಿದ್ದರು. ಆದರೆ, ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ, ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡರು.
ವಿಶ್ವದ ಮಾಜಿ ಅಗ್ರಮಾನ್ಯ ಬಿಲ್ಗಾರ್ತಿಯಾಗಿರುವ ದೀಪಿಕಾ 6-5ರಿಂದ ಎಸ್ಟೋನಿಯಾದ ರೀನಾ ಪರ್ನಾಟ್ ವಿರುದ್ಧ ಶುಭಾರಂಭ ಮಾಡಿದರು. ಎರಡನೇ ಪಂದ್ಯದಲ್ಲಿ ಅವರು 6–2ರಿಂದ ನೆದರ್ಲೆಂಡ್ಸ್‌ನ ಕ್ವಿಂಟಿ ರೋಫೆನ್ ಅವರನ್ನು ಮಣಿಸಿದರು.
ಶನಿವಾರ ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಅವರು ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು ಎದುರಿಸಲಿದ್ದಾರೆ.
ಮೊದಲ ಪಂದ್ಯದ ಶೂಟ್ ಆಫ್‌ನಲ್ಲಿ ಫಲಿತಾಂಶವನ್ನು ನಿರ್ಧರಿಸುವ ಉಭಯ ಬಿಲ್ಗಾರ್ತಿಯರ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ದೀಪಿಕಾ ಮೊದಲ ಸೆಟ್ ಗೆದ್ದರೂ ನಂತರ 3–5ರಿಂದ ಹಿನ್ನಡೆಗೆ ಜಾರಿದ್ದರು. ಬಳಿಕ ಚೇತರಿಸಿಕೊಂಡ ಅವರು, ನಿಖರ ಗುರಿಯೊಂದಿಗೆ ಬಾಣಗಳನ್ನು ಪ್ರಯೋಗಿಸಿ ಗೆಲುವು ಸಾಧಿಸಿದರು.
ಎರಡನೇ ಪಂದ್ಯವನ್ನು ದೀಪಿಕಾ ನಿರಾಯಾಸವಾಗಿ ಗೆದ್ದುಕೊಂಡರು. ಎದುರಾಳಿಯು ಬಾಣ ಪ್ರಯೋಗಿಸುವಲ್ಲಿ ಆಗಾಗ ಎಡವಿದ್ದು, ಭಾರತದ ಆಟಗಾರ್ತಿಯ ಗೆಲುವಿಗೆ ನೆರವಾಯಿತು.
ತರುಣ್‌ದೀಪ್‌ಗೆ ನಿರಾಸೆ
ಭಾರತದ ಆರ್ಚರಿಪಟು ತರುಣದೀಪ್ ರಾಯ್ ಅವರು ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದ 32ರ ಸುತ್ತಿನಲ್ಲಿ ಸೋತರು. ಬುಧವಾರ ನಡೆದ ಸ್ಪರ್ಧೆಯಲ್ಲಿ ತರುಣದೀಪ್ 4–6ರಿಂದ ಬ್ರಿಟನ್‌ನ ಟಾಮ್ ಹಾಲ್ ಅವರ ಎದುರು ಮಣಿದರು.
ನಿಕಟ ಪೈಪೋಟಿ ಇದ್ದ ಸ್ಪರ್ಧೆಯಲ್ಲಿ ಮೊದಲ ಸೆಟ್ 27 ಪಾಯಿಂಟ್‌ಗಳಿಂದ ಟೈ ಆಯಿತು. ಎರಡನೇ ಸೆಟ್‌ನಲ್ಲಿ ಟಾಮ್ ಹಾಲ್ ಅವರು ಒಂದು ಪಾಯಿಂಟ್ ಅಂತರದಿಂದ ಗೆಲುವು ಒಲಿಸಿಕೊಂಡರು.
ಮೂರನೇ ಸೆಟ್‌ನಲ್ಲಿ ಪುಟಿದೆದ್ದ ತರುಣದೀಪ್ 28–25ರ ಮುನ್ನಡೆ ಸಾಧಿ ಸಿದರು. ನಂತರದ ಸೆಟ್‌ನಲ್ಲಿ ಟಾಮ್ ಹಾಲ್ 29–28ರಿಂದ ಗೆದ್ದರು. ಐದನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಉಭಯ ಆರ್ಚರ್‌ಗಳು 29 ಅಂಕ ಗಳಿಸಿದರು. ಇದರೊಂದಿಗೆ ಹಾಲ್ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.