ಪ್ಯಾರಿಸ್: ಭಾರತದ ಅನುಭವಿ ಆರ್ಚರಿ ಸ್ಪರ್ಧಿ ದೀಪಿಕಾ ಕುಮಾರಿ ನಿರಾಶೆ ಮೂಡಿಸಿದರು. ಅವರ ವೈಫಲ್ಯದಿಂದ ಮಹಿಳಾ ತಂಡ, ಭಾನುವಾರ ನಡೆದ ಒಲಿಂಪಿಕ್ಸ್ ಆರ್ಚರಿ ಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್ ತಂಡದೆದುರು 0–6 ಅಂತರದಲ್ಲಿ ಹೀನಾಯ ಸೋಲನುಭವಿಸಿತು.
ತಂಡದ ಅತಿ ಕಿರಿಯ ಸ್ಪರ್ಧಿ ಎನಿಸಿದ, 18 ವರ್ಷ ವಯಸ್ಸಿನ ಭಜನ್ ಕೌರ್ ಮಾತ್ರ ಬಾಣ ಪ್ರಯೋಗದಲ್ಲಿ ಅಮೋಘ ಪ್ರದರ್ಶನ ನೀಡಿ 60 ಪಾಯಿಂಟ್ಸ್‌ಗಳ ಪೈಕಿ 56 ಗಳಿಸಿದರು. ಆದರೆ ಅನುಭವಿಗಳಾದ ದೀಪಿಕಾ ಮತ್ತು ಅಂಕಿತಾ ಭಕತ್ ಅವರ ದುರ್ಬಲ ನಿರ್ವಹಣೆ ಸೋಲಿಗೆ ಕಾರಣವಾಯಿತು. ಭಾರತ 51–52, 49–54, 48–53ರಲ್ಲಿ ಸೋತಿತು.
ಮೂರು ಸೆಟ್‌ಗಳಲ್ಲಿ ಎರಡು ಬಾರಿಯ ಅವಕಾಶಗಳಲ್ಲಿ ಭಾರತ ಒಮ್ಮೆಯೂ 50ರ ಸ್ಕೋರ್ ತಲುಪಲಾಗದ್ದು ತಂಡದ ಕಳಪೆ ಪ್ರದರ್ಶನಕ್ಕೆ ಕನ್ನಡಿಯಾಯಿತು.
ನಾಲ್ಕು ಬಾರಿಯ ಒಲಿಂಪಿಯನ್ ದೀಪಿಕಾ ಒಟ್ಟು ಗಳಿಸಿದ್ದು 48 ಪಾಯಿಂಟ್ಸ್ ಮಾತ್ರ. ಅಂಕಿತಾ ಗರಿಷ್ಠ 60ರಲ್ಲಿ 46 ಗಳಿಸಿದರು. ಸ್ಪರ್ಧೆಯುದ್ದಕ್ಕೂ ಸಂಯಮ ವಹಿಸಿದ ಭಜನ್ ಇನ್ನೊಂದೆಡೆ 60ರಲ್ಲಿ ಕೇವಲ ನಾಲ್ಕು ಪಾಯಿಂಟ್ಸ್ ಮಾತ್ರ ಕಳೆದುಕೊಂಡರು.
ಭಾರತ ತಂಡ ಮತ್ತೊಮ್ಮೆ ಒಲಿಂಪಿಕ್ಸ್ ಕ್ವಾರ್ಟರ್‌ಫೈನಲ್ ತಡೆ ದಾಟಲು ವಿಫಲವಾದಂತೆ ಆಯಿತು. ತಂಡ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿತ್ತು.
ದೀಪಿಕಾ ಕೊನೆಯ ಬಾಣ ಪ್ರಯೋಗದಲ್ಲಿ ಮಾತ್ರ ‘10’ ಗಳಿಸಿದರು. ಆದರೆ ಅಷ್ಟರಲ್ಲಿ ಭಾರತದ ಸೋಲು ಖಚಿತವಾಗಿತ್ತು.
ಇನ್ನೊಂದೆಡೆ ಡಚ್ ಬಿಲ್ಗಾರ್ತಿಯರ ತಂಡ (ಕ್ವಿಂಟಿ ರೊಫೆನ್, ಲಾರಾ ವಾನ್‌ಡೆರ್ ವಿಂಕೆಲ್ ಮತ್ತು ಗ್ಯಾಬಿ ಶ್ಲೋಶೆರ್) ಸ್ಥಿರ ಪ್ರದರ್ಶನ ನೀಡಿತು.
‘ಇದನ್ನು (ಹಿನ್ನಡೆ) ನಾವು ನಿರೀಕ್ಷಿಸಿಯೇ ಇರಲಿಲ್ಲ. ಭಾರತದಲ್ಲಿ ನಡೆಸಿದ್ದ ಟ್ರಯಲ್ಸ್‌ನಲ್ಲಿ ದೀಪಿಕಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಅವರ ನಿರಾಶಾದಾಯಕ ಪ್ರದರ್ಶನವು ತಂಡ ಸೋಲಲು ಕಾರಣವಾಯಿತು’ ಎಂದು ಆರ್ಚರಿ ತಂಡದ ಹಿರಿಯ ಅಧಿಕಾರಿ ‘ಪಿಟಿಐ’ಗೆ ತಿಳಿಸಿದರು.
ಜೂನ್‌ನಲ್ಲಿ ಟರ್ಕಿಯ ಅಂಟ್ಯಾಲದಲ್ಲಿ ನಡೆದ ವಿಶ್ವಕಪ್‌ನಲ್ಲಿ ಇದೇ ಸ್ಪರ್ಧಿಗಳಿದ್ದ ಭಾರತ ತಂಡ 6–2 ರಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತ್ತು.
‘ನಿಜ, ಇದು ತಂಡದ ಸೋಲು. ದೀಪಿಕಾ ತಂಡದ ಮುಂಚೂಣಿಯಲ್ಲಿದ್ದು, ಜವಾಬ್ದಾರಿ ತೆಗೆದುಕೊಳ್ಳಬೇಕಾಗಿತ್ತು. ಆದರೆ ಪ್ರತಿ ಬಾರಿ ಒಲಿಂಪಿಕ್ಸ್‌ನಲ್ಲಿ ಅವರೇ ತಂಡವನ್ನು ಹಿನ್ನಡೆಗೆ ತಳ್ಳುತ್ತಾರೆ’ ಎಂದರು.
‘ಗಟ್ಟಿ ಮನೋಬಲದಿಂದ ಶೂಟ್ ಮಾಡುವಲ್ಲಿ ದೀಪಿಕಾ ವಿಫಲರಾದರು’ ಎಂದು ಮಹಿಳಾ ತಂಡದ ಕೋಚ್ ಪೂರ್ಣಿಮಾ ಮಹತೊ ಒಪ್ಪಿಕೊಂಡರು.
ಮಿಶ್ರ ತಂಡ:
ಕ್ವಾಲಿಫಿಕೇಷನ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದ ಅಂಕಿತಾ ಭಕತ್, ಧೀರಜ್ ಬೊಮ್ಮದೇವರ ಜೊತೆ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಈಗ ಎಲ್ಲರ ಕಣ್ಣು ಭಾರತ ಪುರುಷರ ತಂಡದ ಮೇಲಿದೆ. ಈ ತಂಡ ಸೋಮವಾರ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪರ್ಧಿಸಲಿದೆ.
ದಕ್ಷಿಣ ಕೊರಿಯಾಕ್ಕೆ ಸ್ವರ್ಣ ಪ್ಯಾರಿಸ್
ದಕ್ಷಿಣ ಕೊರಿಯಾ ಆರ್ಚರಿ ಸ್ಪರ್ಧೆಯ ಮಹಿಳಾ ತಂಡ ವಿಭಾಗದ ಫೈನಲ್‌ನಲ್ಲಿ 5–4 ರಿಂದ ಚೀನಾ ತಂಡವನ್ನು ಹಿಮ್ಮೆಟ್ಟಿಸಿ ಭಾನುವಾರ ಚಿನ್ನದ ಪದಕ ಗೆದ್ದುಕೊಂಡಿತು. ಆ ಮೂಲಕ ಸತತ 10ನೇ ಬಾರಿ ಈ ವಿಭಾಗದಲ್ಲಿ ಪಾರಮ್ಯ ಮೆರೆಯಿತು. 1988ರ ಸೋಲ್ ಒಲಿಂಪಿಕ್ಸ್‌ನಿಂದ ದಕ್ಷಿಣ ಕೊರಿಯಾ ಸೋತೇ ಇಲ್ಲ.ಮೊದಲ ಎರಡು ಸೆಟ್ ಗೆದ್ದ ನಂತರ ದಕ್ಷಿಣ ಕೊರಿಯಾ ಬಿಲ್ಗಾರ್ತಿಯರು ಪರದಾಡಿದರು. ಇದರಿಂದ ಚೀನಾ ಚೇತರಿಸಿ 2–2ರಲ್ಲಿ ಸಮಮಾಡಿಕೊಂಡಿತು. ಆದರೆ ಕೊರಿಯನ್ನರು ಸಕಾಲದಲ್ಲಿ ಮರಳಿ ಹಿಡಿತ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.