ADVERTISEMENT

ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಗೋಲುಮಳೆಗರೆದ ಭಾರತ

ದೀಪಿಕಾ ಐದು ಗೋಲು; ಥಾಯ್ಲೆಂಡ್ 13–0 ಸೋಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:38 IST
Last Updated 14 ನವೆಂಬರ್ 2024, 15:38 IST
ಥಾಯ್ಲೆಂಡ್ ವಿರುದ್ಧ ಪಂದ್ಯದಲ್ಲಿ ಗೋಲು ಗಳಿಸಿದ ನಂತರ ಭಾರತದ ಆಟಗಾರ್ತಿಯರು ಸಂಭ್ರಮ ಪಟ್ಟಿದ್ದು ಹೀಗೆ....
ಥಾಯ್ಲೆಂಡ್ ವಿರುದ್ಧ ಪಂದ್ಯದಲ್ಲಿ ಗೋಲು ಗಳಿಸಿದ ನಂತರ ಭಾರತದ ಆಟಗಾರ್ತಿಯರು ಸಂಭ್ರಮ ಪಟ್ಟಿದ್ದು ಹೀಗೆ....   

ರಾಜಗೀರ್ (ಬಿಹಾರ): ಯುವ ಆಟಗಾರ್ತಿ ದೀಪಿಕಾ ಗಳಿಸಿದ ಐದು ಗೋಲುಗಳ ನೆರವಿನಿಂದ ಭಾರತ ತಂಡ, ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಪಂದ್ಯದಲ್ಲಿ ಗುರುವಾರ ದುರ್ಬಲ ಥಾಯ್ಲೆಂಡ್ ತಂಡವನ್ನು 13–0 ಗೋಲುಗಳಿಂದ ಸದೆಬಡಿಯಿತು. ಜೊತೆಗೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಸ್ಕೋರ್ ಹೇಳುವಂತೆ ಇದು ಏಕಪಕ್ಷೀಯ ಪಂದ್ಯವಾಗಿದ್ದು, ಪ್ರಾಚೀನ ನಗರದ ನೂತನ ಹಾಕಿ ಕ್ರೀಡಾಂಗಣದಲ್ಲಿ ಭಾರತದ ಆಟಗಾರ್ತಿಯರು ಮನಬಂದಂತೆ ಎದುರಾಳಿ ಗೋಲಿನತ್ತ ನುಗ್ಗಿದರು. ಥಾಯ್ಲೆಂಡ್ ಆಟಗಾರ್ತಿಯರು ಒಂದೂ ಗೋಲು ಗಳಿಸಲಾಗಲಿಲ್ಲ.

ದೀಪಿಕಾ ಪಂದ್ಯದ ಮೂರನೇ, 19ನೇ, 43ನೇ, 45ನೇ ಮತ್ತು 46ನೇ ನಿಮಿಷ ಗೋಲುಗಳನ್ನು ಗಳಿಸಿದರು. ಪ್ರೀತಿ ದುಬೆ (9 ಮತ್ತು 40ನೇ ನಿಮಿಷ), ಲಾಲ್ರೆಮ್‌ಸಿಯಾಮಿ (12, 56ನೇ ನಿಮಿ) ಮತ್ತು ಮನಿಷಾ ಚೌಹಾನ್ (45 ಮತ್ತು 58ನೇ ನಿಮಿ) ತಲಾ ಎರಡು ಗೋಲುಗಳನ್ನು ತಂದಿತ್ತರು. ಬ್ಯೂಟಿ ಡಂಗ್‌ಡಂಗ್ (30ನೇ) ಮತ್ತು ನವನೀತ್ ಕೌರ್ (53ನೇ ನಿಮಿಷ) ಇನ್ನೆರಡು ಗೋಲುಗಳಿಗೆ ಕಾರಣರಾದರು.

ADVERTISEMENT

ಭಾರತದ ಮುಂಚೂಣಿ ಆಟಗಾರ್ತಿಯರ ನಿರಂತರ ದಾಳಿಯಿಂದಾಗಿ ಥಾಯ್ಲೆಂಡ್ ರಕ್ಷಣಾಕೋಟೆ ನುಚ್ಚುನೂರಾಯಿತು. ಭಾರತಕ್ಕೆ ದೊರಕಿದ 12 ಪೆನಾಲ್ಟಿ ಕಾರ್ನರ್‌ಗಳಲ್ಲಿ ಐದು ಗೋಲುಗಳಾಗಿ ಪರಿವರ್ತನೆಯಾದವು.

ಭಾರತ, ಇದಕ್ಕೆ ಮೊದಲು ಮಲೇಷ್ಯಾ ವಿರುದ್ಧ 4–0 ಯಿಂದ ಮತ್ತು ದಕ್ಷಿಣ ಕೊರಿಯಾ ವಿರುದ್ಧ 3–2 ಗೋಲುಗಳಿಂದ ಜಯಗಳಿಸಿತ್ತು.

ಭಾರತ ಶನಿವಾರ ನಡೆಯುವ ಪಂದ್ಯದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಚೀನಾ ತಂಡವನ್ನು ಎದುರಿಸಲಿದೆ.

ಭಾರತ ಮತ್ತು ಚೀನಾ ತಂಡಗಳು ರೌಂಡ್‌ ರಾಬಿನ್‌ ಹಂತ ಮೂರು ಪಂದ್ಯಗಳ ನಂತರ ತಲಾ 9 ಪಾಯಿಂಟ್ಸ್‌ ಕಲೆಹಾಕಿವೆ. ಚೀನಾದ ಗೋಲು ವ್ಯತ್ಯಾಸ (+21), ಆತಿಥೇಯರಿಂತ (+18) ಉತ್ತಮವಾಗಿದ್ದು ಅದು ಅಗ್ರಸ್ಥಾನದಲ್ಲಿದೆ.

ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಆರು ತಂಡಗಳಿದ್ದು, ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ನಲ್ಲಿ ಆಡುವ ಅರ್ಹತೆ ಸಂಪಾದಿಸುತ್ತವೆ.

ಮಲೇಷ್ಯಾಕ್ಕೆ ಜಯ:

ಮಲೇಷ್ಯಾ ಇನ್ನೊಂದು ಪಂದ್ಯದಲ್ಲಿ 2–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಚೀನಾ ಅಜೇಯ ಓಟ ಮುಂದುವರಿಸಿ ಇದೇ (2–1) ಅಂತರದಿಂದ ಜಪಾನ್ ತಂಡವನ್ನು ಪರಾಭವಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.