ADVERTISEMENT

ಪ್ಯಾರಾ ಅಥ್ಲೆಟಿಕ್ಸ್: ತೆಲಂಗಾಣದ ಕೂಲಿ ಕಾರ್ಮಿಕ ಕುಟುಂಬದ ದೀಪ್ತಿ ವಿಶ್ವದಾಖಲೆ

ಪಿಟಿಐ
Published 20 ಮೇ 2024, 15:57 IST
Last Updated 20 ಮೇ 2024, 15:57 IST
ಭಾರತದ ದೀಪ್ತಿ ಜೀವಾಂಜಿ
ಭಾರತದ ದೀಪ್ತಿ ಜೀವಾಂಜಿ   

ಕೊಬೆ (ಜಪಾನ್): ಭಾರತದ ದೀಪ್ತಿ ಜೀವಾಂಜಿ ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀಟರ್‌ ಟಿ20 ವಿಭಾಗದ ಓಟದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು.

ಸೋಮವಾರ ನಡೆದ ಸ್ಪರ್ಧೆಯಲ್ಲಿ 21 ವರ್ಷದ ಪ್ಯಾರಾ ಓಟಗಾರ್ತಿ ದೀಪ್ತಿ 55.07 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅಮೆರಿಕದ ಬ್ರೆನ್ನಾ ಕ್ಲಾರ್ಕ್ (55.12 ಸೆಕೆಂಡು) ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ತೆಲಂಗಾಣದ ವಾರಂಗಲ್ ಜಿಲ್ಲೆಯ ಕಲ್ಲೆಡಾ ಗ್ರಾಮದ ಕೂಲಿ ಕಾರ್ಮಿಕ ಕುಟುಂಬದ ದೀಪ್ತಿ, ಕಳೆದ ವರ್ಷ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಟಿ20 400 ಮೀಟರ್ ಓಟದಲ್ಲಿ (56.69 ಸೆ) ಏಷ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಅವರು ಎಬಲ್ಡ್‌ ಬಾಡಿಡ್‌ ಅಥ್ಲೀಟ್‌ಗಳೊಂದಿಗೆ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿ, ಹಲವು ಪದಕಗಳನ್ನು ಗೆದ್ದಿದ್ದಾರೆ.

ADVERTISEMENT

ಭಾನುವಾರ ನಡೆದ ಹೀಟ್ ರೇಸ್‌ನಲ್ಲಿ 56.18 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ದೀಪ್ತಿ, ಏಷ್ಯನ್ ದಾಖಲೆಯೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಟಿ20 ವಿಭಾಗವು ಬೌದ್ಧಿಕ ಭಿನ್ನತೆ ಹೊಂದಿರುವ ಕ್ರೀಡಾಪಟುಗಳಿಗೆ ಮೀಸಲಾಗಿದೆ.

ಟರ್ಕಿಯ ಐಸೆಲ್ ಒಂಡರ್ (55.19 ಸೆ) ಬೆಳ್ಳಿ ಗೆದ್ದರೆ, ಈಕ್ವೆಡಾರ್‌ನ ಲಿಜಾನ್‌ಶೆಲಾ ಅಂಗುಲೋ (56.68 ಸೆ) ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಯೋಗೇಶ್ ಕಥುನಿಯಾ ಪುರುಷರ ಎಫ್56 ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ 41.80 ಮೀಟರ್‌ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು. ನಂತರ ಭಾಗ್ಯಶ್ರೀ ಮಹಾವ್‌ ರಾವ್ ಜಾಧವ್ ಅವರು ಮಹಿಳೆಯರ ಶಾಟ್‌ಪಟ್ ಎಫ್ 34 ವಿಭಾಗದಲ್ಲಿ (7.56 ಮೀ) ಬೆಳ್ಳಿ ಪಡೆದರು.

ಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಭಾನುವಾರ ನಿಶಾದ್‌ ಕುಮಾರ್‌ (ಟಿ47 ಹೈಜಂಪ್‌) ಮತ್ತು ಪ್ರೀತಿ ಪಾಲ್‌ (ಟಿ35 200 ಮೀ ಓಟ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.