ನವದೆಹಲಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್, ಜೈಲಿನಲ್ಲಿ ವಿಶೇಷ ಆಹಾರ ಮತ್ತು ಪೂರಕ ಸಾಮಗ್ರಿಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ. ಅವುಗಳು ‘ಅವಶ್ಯ’ವಾದುದಲ್ಲ ಎಂದು ಕೋರ್ಟ್ ಹೇಳಿದೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವೀರ್ ಸಿಂಗ್ ಲಂಬಾ, 'ಆಪಾದಿತ ಕೇಳುತ್ತಿರುವ ವಿಶೇಷ ಆಹಾರ ಮತ್ತು ಪೂರಕಗಳು ಕೇವಲ ಆರೋಪಿಯು ಅವುಗಳ ಮೇಲಿನ ಆಸೆಯಿಂದ ಕೇಳಿದಂತೆ ಕಂಡುಬರುತ್ತಿದೆ. ಯಾವುದೇ ರೀತಿಯಲ್ಲಿ ಅವುಗಳ ಅವಶ್ಯಕತೆ ಇಲ್ಲ’ಎಂದು ಹೇಳಿದ್ದಾರೆ.
ದೆಹಲಿ ಕಾರಾಗೃಹ ನಿಯಮ, 2018 ರ ನಿಬಂಧನೆಗಳ ಪ್ರಕಾರ ಆರೋಪಿಗಳ ಮೂಲಭೂತ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಜೈಲಿನಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
'ಜಾತಿ, ಧರ್ಮ, ಲಿಂಗ, ವರ್ಗ ಇತ್ಯಾದಿಗಳ ತಾರತಮ್ಯವಿಲ್ಲದೆ ನೈಸರ್ಗಿಕ ಅಥವಾ ನ್ಯಾಯಶಾಸ್ತ್ರದ ಪ್ರಕಾರ ಎಲ್ಲ ವ್ಯಕ್ತಿಗಳು ಕಾನೂನಿನ ದೃಷ್ಟಿಯಲ್ಲಿ ಸಮಾನರು ಎಂಬುದು ಭಾರತೀಯ ಸಂವಿಧಾನದ ಮೂಲ ತತ್ವವಾಗಿದೆ’ ಎಂದು ನ್ಯಾಯಾಲಯ ಹೇಳಿದೆ.
ಜೈಲಿನಲ್ಲಿ ವಿಶೇಷ ಆಹಾರ, ಪೂರಕ ಮತ್ತು ವ್ಯಾಯಾಮ ಸಾಮಗ್ರಿಗಳನ್ನು ಕೋರಿ ಸುಶೀಲ್ ಕುಮಾರ್ ಅವರು ರೋಹಿಣಿ ನ್ಯಾಯಾಲಯದ ಮೊರೆ ಹೋಗಿದ್ದರು. ತನ್ನ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಇವುಗಳು ಅತ್ಯಂತ ಅವಶ್ಯಕವೆಂದು ಪ್ರತಿಪಾದಿಸಿದ್ದರು.
ಈ ಮೂಲಭೂತ ಅವಶ್ಯಕತೆಗಳನ್ನು ನಿರಾಕರಣೆ ಮಾಡುವುದರಿಂದ ದೈಹಿಕ ಶಕ್ತಿ ಮತ್ತು ಮೈಕಟ್ಟಿನ ಮೇಲೆ ಅವಲಂಬಿತವಾಗಿರುವ ತನ್ನ ವೃತ್ತಿಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದರು.
ಸುಶೀಲ್ ಕುಮಾರ್ ಅವರ ವೈದ್ಯಕೀಯ ಸ್ಥಿತಿಗೆ ಪೂರಕ ಆಹಾರ ಅಥವಾ ಹೆಚ್ಚುವರಿ ಪ್ರೋಟಿನ್‌ಯುಕ್ತ ಆಹಾರದ ಅಗತ್ಯವಿಲ್ಲ ಎಂದು ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ ಉತ್ತರದಲ್ಲಿ ಈ ಹಿಂದೆ ತಿಳಿಸಿದ್ದರು.
ನನ್ನ ಕಕ್ಷಿದಾರ ಸುಶೀಲ್ ಕುಮಾರ್ ಅವರು ‘ದೋಷಿಯೆಂದು ಸಾಬೀತಾಗದ ಕ್ರಿಮಿನಲ್ ಕೈದಿ’ ಎಂದು ವಕೀಲ ಪ್ರದೀಪ್ ರಾಣಾ ಅವರು ನ್ಯಾಯಾಲಯಕ್ಕೆ ತಿಳಿಸಿದ್ದು, ವೈಯಕ್ತಿಕ ಖರ್ಚಿನಲ್ಲಿ ಅವುಗಳನ್ನು ಕೋರಿದ್ದಾರೆ ಎಂದು ಮನವಿ ಸಲ್ಲಿಸಿದ್ದರು.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ಧನ್‌ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸ್ತಿಪಟುವನ್ನು ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿ ಇರಿಸಲಾಗಿದೆ.
ಸುಶೀಲ್, ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಮಾಸ್ಟರ್ ಮೈಂಡ್ ಎಂದು ಪೊಲೀಸರು ಹೇಳಿದ್ದಾರೆ. ಸುಶೀಲ್ ಮತ್ತು ಆತನ ಸಹಚರರು ಧನ್‌ಕರ್ ಅವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ನಮ್ಮ ಬಳಿ ಎಲೆಕ್ಟ್ರಾನಿಕ್ ಪುರಾವೆಗಳಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.