ನವದೆಹಲಿ: ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಖುದ್ದು ಹಾಜರಾಗುವಿಕೆಯಿಂದ ದೆಹಲಿ ನ್ಯಾಯಾಲಯವೊಂದು ಗುರುವಾರ ವಿನಾಯಿತಿ ನೀಡಿ ಆದೇಶಿಸಿದೆ. ಬಜರಂಗ್ ವಿರುದ್ಧ ಕುಸ್ತಿ ಕೋಚ್ ನರೇಶ್ ದಹಿಯಾ ಅವರು ಮಾನಹಾನಿ ಪ್ರಕರಣ ಹೂಡಿದ್ದರು.
ಬಜರಂಗ್ ಅವರು ಈ ತಿಂಗಳ 23ರಂದು ಆರಂಭವಾಗುವ ಏಷ್ಯನ್ ಗೇಮ್ಸ್‌ಗೆ ಸಜ್ಜಾಗಲು ಕಿರ್ಗಿಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿರುವುದಾಗಿ ಅವರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಯಶದೀಪ್ ಚಾಹಲ್ ಅವರು ವಿನಾಯಿತಿ ನೀಡಿದರು.
ಬಜರಂಗ್ ಅವರಿಗೆ ಜ್ವರ ಇರುವುದಾಗಿ ಅವರ ವಕೀಲರು ತಿಳಿಸಿದ್ದರಿಂದ ಈ ಹಿಂದೆ, ಸೆ. 6ರಂದು ನ್ಯಾಯಾಧೀಶರು ವೈದ್ಯಕೀಯ ನೆಲೆಯಲ್ಲಿ ವೈಯಕ್ತಿಕವಾಗಿ ಹಾಜರಾಗುವುದರಿಂದ ದಿನದ ಮಟ್ಟಿಗೆ ವಿನಾಯಿತಿ ನೀಡಿದ್ದರು.
ಜಂತರ್‌ಮಂಥರ್‌ನಲ್ಲಿ ಮೇ ತಿಂಗಳಲ್ಲಿ ಭಾರತ ಕುಸ್ತಿ ಫೆಡರೇಷನ್ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ದ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೂನಿಯಾ ಅವರು ಇತರ ಕುಸ್ತಿಪಟು/ ವ್ಯಕ್ತಿಗಳ ಜೊತೆ ಸೇರಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದರು ಎಂದು ದಹಿಯಾ ದಾವೆ ಹೂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.