ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕರ್ನಾಟಕದ ವೆಂಕಟೇಶ್ ಪ್ರಸಾದ್ ಮತ್ತು ಮೂರು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೊ ಪಟು ದೇವೇಂದ್ರ ಜಜಾರಿಯಾ ಅವರು ಈ ವರ್ಷದ ಕ್ರೀಡಾ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕುಂದಕಮ್ ಶರ್ಮಾ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮಾಜಿ ಶೂಟರ್ ಅಂಜಲಿ ಭಾಗವತ್, ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಮತ್ತು ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಎಲ್. ಸರಿತಾ ದೇವಿ ಕೂಡ ಸಮಿತಿಯಲ್ಲಿದ್ದಾರೆ ಎಂದು ಕ್ರೀಡಾ ಸಚಿವಾಲಯವು ಸುತ್ತೋಲೆಯಲ್ಲಿ ತಿಳಿಸಿದೆ.
ಹಾಕಿ ಕೋಚ್ ಬಲದೇವ್ ಸಿಂಗ್, ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಮತ್ತು ಪತ್ರಕರ್ತರಾದ ವಿಜಯ್ ಲೋಕಪಾಲಿ ಮತ್ತು ವಿಕ್ರಾಂತ್ ಗುಪ್ತಾ ಸಮಿತಿಯಲ್ಲಿ ಇದ್ದಾರೆ.
ಜಜಾರಿಯಾ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2004 ಹಾಗೂ 2016ರ ಕೂಟಗಳಲ್ಲಿ ಅವರು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದರು.
ಪ್ರಶಸ್ತಿ ವಿಜೇತರನ್ನು ನಿರ್ಧರಿಸಲು ಆಯ್ಕೆ ಸಮಿತಿಯು ಕೆಲವೇ ದಿನಗಳಲ್ಲಿ ಸಭೆ ಸೇರಲಿದೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಅಥ್ಲೀಟ್‌ಗಳ ಸಾಮರ್ಥ್ಯ ಗಮನಿಸಿದ ಬಳಿಕ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ ನಂತರ ಈ ವರ್ಷದ ಪ್ರಶಸ್ತಿ ಘೋಷಿಸುವಲ್ಲಿ ವಿಳಂಬವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.