ಪಟಿಯಾಲ: ಧರುಣ್ ಅಯ್ಯಸಾಮಿ, ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.
ಶನಿವಾರ ನಡೆದ ಫೈನಲ್‌ನಲ್ಲಿ ಎಂಟು ಸ್ಪರ್ಧಿಗಳು ಇದ್ದರು. ಧರುಣ್ 48.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ (48.96 ಸೆ) ದಾಖಲೆಯನ್ನು ಉತ್ತಮಪಡಿಸಿಕೊಂಡರು. ಈ ದಾಖಲೆಯನ್ನು ಅವರು ಏಷ್ಯಾ ಕ್ರೀಡಾಕೂಟದಲ್ಲಿ ನಿರ್ಮಿಸಿದ್ದರು. ಕೇರಳದ ಎಂ.ಪಿ.ಜಬೀರ್ (49.53 ಸೆ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
‘ಇನ್ನೂ ವೇಗವಾಗಿ ಒಡಲು ನನಗೆ ಸಾಧ್ಯವಿದೆ. 48.50 ಸೆಕೆಂಡುಗಳಲ್ಲಿ ಓಟ ಮುಗಿಸುವುದು ನನ್ನ ಗುರಿಯಾಗಿತ್ತು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಈ ಗುರಿ ಮುಟ್ಟಲು ಪ್ರಯತ್ನಿಸಲಿದ್ದೇನೆ’ ಎಂದು ಸ್ಪರ್ಧೆಯ ನಂತರ ಧರುಣ್ ಹೇಳಿದರು.
ಮಹಿಳೆಯರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಗುಜರಾತ್‌ನ ಸರಿತಾಬೆನ್ ಗಾಯಕವಾಡ್ ಕೂಟ ದಾಖಲೆ ನಿರ್ಮಿಸಿದರು.
ಅವರು 57.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅನು ರಾಘವನ್ 57.39 ಸೆಕೆಂಡುಗಳ ಸಾಧನೆಯೊಂದಿಗೆ ಈ ಹಿಂದೆ ದಾಖಲೆ ನಿರ್ಮಿಸಿದ್ದರು. ಕರ್ನಾಟಕದ ಅರ್ಪಿತಾ (57.45 ಸೆ) ಬೆಳ್ಳಿ ಗೆದ್ದರು.
ಫಲಿತಾಂಶಗಳು: ಪುರುಷರ 200 ಮೀಟರ್ಸ್ ಓಟ: ಆಕಾಶ್ ಕುಮಾರ್ (ಉತ್ತರಪ್ರದೇಶ) 21.41 ಸೆ–1, ಏಲಕ್ಯ ದಾಸನ್ (ತಮಿಳುನಾಡು)–2, ಗಜಾನಂದ ಮಿಸ್ತ್ರಿ (ಗುಜರಾತ್)–3; 800 ಮೀಟರ್ಸ್ ಓಟ: ಜಿನ್ಸನ್ ಜಾನ್ಸನ್ (ಕೇರಳ) 1 ನಿಮಿಷ, 49.68 ಸೆ–1, ಮೊಹಮ್ಮದ್ ಅಫ್ಸಲ್ (ಕೇರಳ)–2, ಅಮೋಜ್ ಜೇಕಬ್ (ದೆಹಲಿ)–3; 400 ಮೀಟರ್ಸ್ ಹರ್ಡಲ್ಸ್: ಧರುಣ್ ಅಯ್ಯಸಾಮಿ (ತಮಿಳುನಾಡು) 48.80 ಸೆ–1 (ರಾಷ್ಟ್ರೀಯ ದಾಖಲೆ), ಜಬೀರ್ ಎಂ.ಪಿ (ಕೇರಳ)–2, ಎಂ.ರಾಮಚಂದ್ರನ್ (ತಮಿಳುನಾಡು)–3; ಶಾಟ್ ಪಟ್: ಜಸ್ದೀಪ್ ಸಿಂಗ್ (ಪಂಜಾಬ್) 18.36 ಮೀ–1, ಕರವೀರ್ ಸಿಂಗ್ (ಪಂಜಾಬ್)–2, ಪರಮಜೀತ್ ಸಿಂಗ್ (ಚಂಡೀಗಢ)–3; ಟ್ರಿಪಲ್ ಜಂಪ್: ಪ್ರವೀಣ್ ಚಿತ್ರವೇಲು (ತಮಿಳುನಾಡು) 16.51 ಮೀ–1, ಮೊಹಮ್ಮದ್ ಜುಬೇರ್ (ಉತ್ತರ ಪ್ರದೇಶ)–2, ಮೊಹಮ್ಮದ್ ಸಲಾವುದ್ದೀನ್ (ತಮಿಳುನಾಡು)–3; ಜಾವೆಲಿನ್ ಥ್ರೋ: ಶಿವಪಾಲ್ ಸಿಂಗ್ (ಉತ್ತರ ಪ್ರದೇಶ) 82.56–1, ವಿಪಿನ್ ಕಸಾನ (ದೆಹಲಿ)–2, ರಾಜೇಂದ್ರ ಸಿಂಗ್ (ಹರಿಯಾಣ)–3.
ಮಹಿಳೆಯರ 200 ಮೀಟರ್ಸ್ ಓಟ: ದ್ಯುತಿ ಚಾಂದ್ (ಒಡಿಶಾ) 23.35 ಸೆ–1, ರೇವತಿ ವಿ (ತಮಿಳುನಾಡು)–2, ಧನಲಕ್ಷ್ಮಿ ಎಸ್ (ತಮಿಳುನಾಡು)–3; 800 ಮೀಟರ್ಸ್ ಓಟ: ಗೋಮತಿ ಮಾರಿಮುತ್ತು (ತಮಿಳುನಾಡು) 2ನಿ 03.21 ಸೆ–1, ಟ್ವಿಂಕಲ್ ಚೌಧರಿ (ಪಂಜಾಬ್)–2, ಚಿತ್ರಾ ಪಿ.ಯು (ಕೇರಳ)–3; 400 ಮೀಟರ್ಸ್ ಹರ್ಡಲ್ಸ್: ಸರಿತಾಬೆನ್ ಗಾಯಕವಾಡ್ (ಗುಜರಾತ್) 57.21 ಸೆ (ಕೂಟ ದಾಖಲೆ)–1, ಎಂ.ಅರ್ಪಿತಾ (ಕರ್ನಾಟಕ)–2, ಜವುನಾ ಮುರ್ಮು (ಒಡಿಶಾ)–3; ಲಾಂಗ್‌ಜಂಪ್: ರಿಂಟು ಮ್ಯಾಥ್ಯು (ಕೇರಳ) 6.34 ಮೀ–1, ಜಿ ಕಾರ್ತೀಕ (ತಮಿಳುನಾಡು)–2, ನಯನಾ ಜೇಮ್ಸ್ (ಕೇರಳ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.