ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರಿಗೆ ನೀಡಲಾಗುವ ‘ಧ್ಯಾನ್‌ಚಂದ್ ಜೀವಮಾನ ಪ್ರಶಸ್ತಿ’ಯ ಹೆಸರು ಬದಲಾಯಿಸಿರುವ ಕ್ರೀಡಾ ಸಚಿವಾಲಯ ‘ಅರ್ಜುನ ಜೀವಮಾನ ಪ್ರಶಸ್ತಿ’ ಎಂದು ಮರುನಾಮಕರಣ ಮಾಡಿದೆ.
ಹಾಕಿ ದಂತಕಥೆ ಧ್ಯಾನ್‌ಚಂದ್ ಅವರ ಹೆಸರಿನಲ್ಲಿ ಕ್ರೀಡಾ ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು 2002ರಲ್ಲಿ ಆರಂಭಿಸಲಾಗಿತ್ತು. ಒಲಿಂಪಿಕ್ಸ್ ಕ್ರೀಡಾಕೂಟ, ಪ್ಯಾರಾ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಅತ್ಯುನ್ನತ ಸಾಧನೆಗೈದವರಿಗೆ ವೈಯಕ್ತಿಕವಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.
2023ರಲ್ಲಿ ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಬ್ಯಾಡ್ಮಿಂಟನ್ ಆಟಗಾರ ಮಂಜುಷಾ ಕನ್ವರ್, ಹಾಕಿ ತಂಡದ ಮಾಜಿ ಆಟಗಾರ ವಿನೀತ್ ಕುಮಾರ್ ಮತ್ತು ಕಬಡ್ಡಿ ಆಟಗಾರ್ತಿ ಕವಿತಾ ಸೆಲ್ವರಾಜ್ ಭಾಜನರಾಗಿದ್ದರು
‘ವಿವಿಧ ಕ್ರೀಡಾ ಪ್ರಶಸ್ತಿಗಳನ್ನು ಮರುಪರಿಶೀಲಿಸಲಾಗಿದ್ದು, ಧ್ಯಾನ್‌ಚಂದ್ ಪ್ರಶಸ್ತಿಗೆ ಅರ್ಜುನ ಜೀವಮಾನ ಪ್ರಶಸ್ತಿ ಎಂದು ಹೆಸರಿಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ತಂಡಗಳ ತರಬೇತುದಾರಿಗೆ ಮಾತ್ರ ನೀಡಲಾಗುತ್ತಿದ್ದ ದ್ರೋಣಾಚಾರ್ಯ ಪ್ರಶಸ್ತಿಗೆ ಕ್ರೀಡೆಯನ್ನು ತಳಮಟ್ಟದಿಂದ ಮೇಲೆತ್ತಿದ್ದವರೂ ಇನ್ನು ಮುಂದೆ ಅರ್ಹರು’ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.