ನವದೆಹಲಿ: ಉದ್ಧೀಪನ ಮದ್ದು ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ 21 ತಿಂಗಳ ಕಾಲ ನಿಷೇಧ ಹೇರಲಾಗಿದೆ.
ಕಳೆದ ವರ್ಷ ಮಾಡಲಾಗಿದ್ದ ಅವರ ಅಮಾನತು, ಉದ್ಧೀಪನ ಮದ್ದು ಅಪರಾಧಕ್ಕೆ ಸಂಬಂಧಿಸಿದ್ದಲ್ಲ ಎಂದು ಭಾರತೀಯ ಅಧಿಕಾರಿಗಳು ನೀಡಿದ್ದ ಹೇಳಿಕೆಗಳಿಗೆ ಈ ಆದೇಶ ವ್ಯತಿರಿಕ್ತವಾಗಿದೆ.
ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ (ಎಫ್‌ಐಜಿ)ನ ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ನಿರ್ವಹಿಸುವ ಸ್ವತಂತ್ರ ಸಂಸ್ಥೆ ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಐಟಿಎ) ಸಂಗ್ರಹಿಸಿದ್ದ, ಕರ್ಮಾಕರ್ ಅವರ ಪ್ರಯೋಗಾಲಯ ಮಾದರಿಯಲ್ಲಿ ಕಂಡುಬಂದಿರುವ ‘ಹೈಜೆನಾಮೈನ್’ ಅಂಶವು ವಿಶ್ವ ಉದ್ದೀಪನ ವಿರೋಧಿ ಸಂಸ್ಥೆಯ ನಿಯಮಗಳ ಅಡಿಯಲ್ಲಿ ನಿಷೇಧಿಸಲ್ಪಟ್ಟಿರುವುದಾಗಿದೆ.
ದೀಪಾ ಅವರ ನಿಷೇಧದ ಅವಧಿಯು ಇದೇ ವರ್ಷ ಜುಲೈ 10ಕ್ಕೆ ಮುಕ್ತಾಯಗೊಳ್ಳಲಿದೆ. ಉದ್ದೀಪನ ಮದ್ದು ಪರೀಕ್ಷೆ ಮಾದರಿ ಸಂಗ್ರಹಿಸಿದ ದಿನದಿಂದ ನಿಷೇಧವನ್ನು ಅನ್ವಯಿಸಲಾಗಿದೆ.
‘ದೀಪಾ ಅವರ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಹೈಜೆನಾಮೈನ್ ಪತ್ತೆಯಾಗಿರುವ ಕಾರಣ ಅವರನ್ನು 21 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಐಟಿಎ ದೃಢಪಡಿಸುತ್ತದೆ, ಇದು 10 ಜುಲೈ 2023ರವರೆಗೆ ಅನ್ವಯವಾಗುತ್ತದೆ’ಎಂದು ಐಟಿಎ ಶುಕ್ರವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ವಿಟ್ಜರ್‌ಲೆಂಡ್ ಮೂಲದ ಐಟಿಎ, ಆದಾಯ ರಹಿತ ಸಂಘಟನೆಯಾಗಿದ್ದು, ವಾಡಾ ಮತ್ತು ಅಂತರರಾಷ್ಟ್ರೀಯ ಒಲಿಪಿಂಕ್ ಸಮಿತಿಯ ಕಣ್ಗಾವಲಿನಲ್ಲಿ ವಿವಿಧ ಅಂತರರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ ಉದ್ಧಿಪನಾ ಮದ್ದು ವಿರೋಧಿ ಕಾರ್ಯಕ್ರಮಗಳ ಜಾರಿಗಾಗಿ ಕೆಲಸ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.