ತಾಷ್ಕೆಂಟ್: ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಭಾನುವಾರ ಚಾರಿತ್ರಿಕ ಸಾಧನೆ ಮಾಡಿದರು.
ಇಲ್ಲಿ ನಡೆದ ಏಷ್ಯನ್ ಸೀನಿಯರ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ದೀಪಾ, ಮಹಿಳಯರ ವಾಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವಾಲ್ಟ್ ಫೈನಲ್‌ನಲ್ಲಿ 30 ವರ್ಷದ ದೀಪಾ ಅವರು 13.566 ಅಂಕಗಳನ್ನು ಗಳಿಸಿದರು. ಉತ್ತರ ಕೊರಿಯಾದ ಕಿಮ್ ಸನ್ ಯಾಂಗ್ (13.466) ಹಾಗೂ ಜೊ ಯಾಂಗ್ ಬಿಯಾಲ್ (12.966) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಇಡೀ ಚಾಂಪಿಯನ್‌ಷಿಪ್‌ನ ಆಲ್‌ರೌಂಡ್ ವಿಭಾಗದಲ್ಲಿ ಅವರು ಒಟ್ಟು 46.166 ಅಂಕ ಗಳಿಸಿ, 16ನೇ ಸ್ಥಾನ ಪಡೆದರು.
‘ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಪ್ರೇರಣಾದಾಯಿ ದೀಪಾ. ಅಭಿನಂದನಗೆಳಗಳು‘ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಎಕ್ಸ್ ಸಂದೇಶ ಹಾಕಿದೆ.
2015ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದೀಪಾ ಅವರು ಕಂಚು ಪಡೆದಿದ್ದರು. ಅದೇ ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಫ್ಲೋರ್ ಎಕ್ಸ್‌ರ್‌ಸೈಜ್‌ನಲ್ಲಿ ಭಾರತದೆ ಆಶಿಶ್ ಕುಮಾರ್ ಗಳಿಸಿದ್ದರು. 2019 ಹಾಗೂ 2022ರಲ್ಲಿ ಪ್ರಣತಿ ನಾಯಕ ಅವರು ಕಂಚಿನ ಪದಕಗಳನ್ನು ಗಳಿಸಿದ್ದರು. ಅವರೂ ವಾಲ್ಟ್ ವಿಭಾಗದಲ್ಲಿಯೇ ಸಾಧನೆ ಮಾಡಿದ್ದರು. ಆದರೆ ಚಿನ್ನ ಗೆದ್ದ ಭಾರತದ ಮೊದಲ ಸ್ಪರ್ಧಿ ದೀಪಾ ಆಗಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು.
ಟರ್ಕಿಯ ಮರ್ಸಿನ್‌ನಲ್ಲಿ 2018ರಲ್ಲಿ ನಡೆದಿದ್ದ ಎಫ್‌ಐಜಿ ವಿಶ್ವಕಪ್ ಟೂರ್ನಿಯಲ್ಲಿಯೂ ದೀಪಾ ಚಿನ್ನದ ಪದಕ ಜಯಿಸಿದ್ದ ಸಾಧನೆ ಮಾಡಿದ್ದರು.
ತ್ರಿಪುರದ ದೀಪಾ ಅವರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ 21 ತಿಂಗಳುಗಳ ಅಮಾನತು ಶಿಕ್ಷೆಯ ನಂತರ ಹೋದ ವರ್ಷ ಸ್ಪರ್ಧಾಕಣಕ್ಕೆ ಮರಳಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸುವ ಹಾದಿಯಿಂದ ಅವರು ಈಗಾಗಲೇ ಹೊರಬಿದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.