ADVERTISEMENT

Asian Games | Squash: ಚಿನ್ನ ಗೆದ್ದ ದೀಪಿಕಾ-ಹರಿಂದರ್ ಜೋಡಿ

ಪಿಟಿಐ
Published 5 ಅಕ್ಟೋಬರ್ 2023, 10:33 IST
Last Updated 5 ಅಕ್ಟೋಬರ್ 2023, 10:33 IST
   

ಹಾಂಗ್‌ಝೌ: ಕೆಲವು ಆತಂಕದ ಕ್ಷಣಗಳನ್ನು ಎದುರಿಸಿದರೂ, ಅನುಭವಿಗಳಾದ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್‌ ಸಿಂಗ್‌ ಸಂಧು ಅವರು ಮಲೇಷ್ಯಾ ಜೋಡಿಯ ಪ್ರಬಲ ಹೋರಾಟ ಮೆಟ್ಟಿನಿಂತು ಏಷ್ಯನ್ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಮಿಕ್ಸೆಡ್‌ ಡಬಲ್ಸ್‌ ಸ್ವರ್ಣ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

35 ನಿಮಿಷಗಳವರೆಗೆ ನಡೆದ ತೀವ್ರ ಹೋರಾಟದ ಪಂದ್ಯದಲ್ಲಿ ದೀಪಿಕಾ–ಹರಿಂದರ್ ಪಾಲ್ 11–10, 11–10 ರಿಂದ ಮಲೇಷ್ಯಾದ ಅಯಿಫಾ ಬಿನ್ಥಿ ಅಜಮಾನ್– ಮೊಹಮ್ಮದ್ ಸ್ಯಾಫಿಕ್ ಬಿನ್ ಮೊಹಮದ್ ಕಮಲ್ ಅವರನ್ನು ಸೋಲಿಸಿದರು. ಇದು ಭಾರತಕ್ಕೆ ಸ್ವ್ಕಾಷ್‌ನಲ್ಲಿ ಎರಡನೇ ಚಿನ್ನ.

ಭಾರತ 2014ರ ಇಂಚಿಯಾನ್ ಕ್ರೀಡೆಗಳಲ್ಲಿ ಒಂದು ಚಿನ್ನ (ಪುರುಷರ ತಂಡ ಸ್ಪರ್ಧೆ), ಎರಡು ಬೆಳ್ಳಿ, ಒಂದು ಕಂಚಿನ ಪದಕ ಗಳಿಸಿತ್ತು. ಅದು ಇದುವರೆಗಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಇಲ್ಲಿ ಅದನ್ನು ಮೀರಿದ ಪ್ರದರ್ಶನ ಮೂಡಿಬಂದಿದೆ. ಎರಡು ಚಿನ್ನ, ಒಂದು ಬೆಳ್ಳಿ, ಒಂಚು ಕಂಚಿನ ಪದಕ ಗೆದ್ದುಕೊಂಡಿದೆ.

ADVERTISEMENT

‘ಅಂಕಣದಲ್ಲೇನಾಯಿತು ಎಂಬುದನ್ನು ನಾನು ನೆನಪಿನಲ್ಲಿಡುವುದಿಲ್ಲ. ಅದು ಇಬ್ಬರಿಗೂ ಮಸುಕಾದಂತೆ. ಕೊನೆಯ ಪಾಯಿಂಟ್‌ ಒಂದು ನೆನಪಿನಲ್ಲಿರುತ್ತದೆ. ತೀವ್ರ ಸಂತಸವಾಗಿದೆ. ಚಿನ್ನ ಗೆದ್ದಿರುವುದರಿಂದ ಹೆಮ್ಮೆಯೆನಿಸಿದೆ’ ಎಂದು ಅವರು ಹೇಳಿದರು.

‘ಮೊದಲ ಗೇಮ್‌ನಲ್ಲಿ ಭಾರತದ ಸ್ಪರ್ಧಿಗಳು ಎದುರಾಳಿಗಳಿಗೆ ಎರಡು ಸಲ ಗೇಮ್‌ ಪಾಯಿಂಟ್‌ ತಪ್ಪಿಸಿದರು. ಅಯಿಫಾ ಅವರ ಫೋರ್‌ಹ್ಯಾಂಡ್‌ ಹೊಡೆತ ನೆಟ್‌ಗೆ ಬಡಿದು ಭಾರತ ಕೊನೆಗೂ ಗೇಮ್‌ ಗಳಿಸಿತು.

ಭಾರತದ ಮಾಜಿ ಕೋಚ್‌ ಎಸ್‌.ಮಣಿಯಮ್ ಅವರು ಮಲೇಷ್ಯಾ ಪಾಳೆಯದಲ್ಲಿದ್ದರು.

ಒಂದು ಹಂತದಲ್ಲಿ ಎರಡನೇ ಗೇಮ್‌ನಲ್ಲಿ ಭಾರತ 9–3 ರಿಂದ ಮುಂದಿದ್ದು ನಿರಾಯಾಸ ಗೆಲುವಿನಂಚಿನಲ್ಲಿತ್ತು. ಆದರೆ ಮಲೇಷ್ಯಾದ ಜೋಡಿ ಸತತವಾಗಿ ಏಳು ಪಾಯಿಂಟ್‌ ಪಡೆದು ಅಂತರವನ್ನು 10–9ಕ್ಕೆ ಇಳಿಸಿದ್ದರಿಂದ ಹೋರಾಟ ತೀವ್ರಗೊಂಡಿತು. ಈ ಹಂತದಲ್ಲಿ, 34 ವರ್ಷದ ಹರಿಂದರ್ ಅವರ ಎರಡು ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಂದ ಗೇಮ್ ಮತ್ತು ಪಂದ್ಯವನ್ನು ಭಾರತ ಕಡೆ ಇತ್ಯರ್ಥಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.