ಟೋಕಿಯೊ/ಪ್ಯಾರಿಸ್: ಒಲಿಂಪಿಕ್ಸ್ ಮತ್ತು ಡೋಪಿಂಗ್ ವಿವಾದಗಳಿಗೆ ‘ನಂಟು’ ಆರಂಭವಾಗಿ ವರ್ಷಗಳೇ ಕಳೆದಿವೆ. ಈ ಬಾರಿಯ ಕ್ರೀಡಾಕೂಟ ಶುರುವಾಗಲು ಎರಡು ದಿನ ಬಾಕಿ ಇರುವಾಗಲೇ ಇಕ್ವಡೋರ್‌ನ 200 ಮೀಟರ್ಸ್ ಓಟಗಾರ ಅಲೆಕ್ಸ್ ಕ್ವಿನೊನೆಜ್ ಡೋಪಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾರೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು ಟೋಕಿಯೊದಲ್ಲಿ ಟ್ರ್ಯಾಕ್‌ಗೆ ಇಳಿಯಲು ಸಜ್ಜಾಗುತ್ತಿರುವಾಗಲೇ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯೂನಿಟ್‌ನಿಂದ ಒಂದು ವರ್ಷದ ನಿಷೇಧಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸ್ಪರ್ಧಿಸುವ ಕನಸು ಕಮರಿಹೋಗಿದೆ.
ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಲಂಡನ್ ಒಲಿಂಪಿಕ್ಸ್‌ನ ಉದ್ದೀಪನ ಮದ್ದು ಸೇವನೆ ಪರೀಕ್ಷೆಯ ಅವಧಿ ಈಗಷ್ಟೇ ಮುಗಿದಿದೆ. ಹೀಗಾಗಿ ಆ ಕೂಟದಲ್ಲಿ ಗೆದ್ದ ಪದಕಗಳು ಇನ್ನು ಮುಂದೆ ಖಚಿತ ಎನ್ನಬಹುದಾಗಿದೆ. ಈ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಪದಕಗಳಿಗೂ ನಿಜವಾಗಿ ಬೆಲೆ ಸಿಗುವುದು ಮುಂದಿನ ಎಂಟು ವರ್ಷಗಳ ನಂತರ.
ಒಲಿಂಪಿಕ್ ಇತಿಹಾಸಕಾರ ಬಿಲ್ ಮಲೋನ್ ಅವರ ಪ್ರಕಾರ ಉದ್ದೀಪನ ಮದ್ದು ಸೇವನೆ ಪರೀಕ್ಷೆ ಆರಂಭಗೊಂಡಾಗಿನಿಂದ ಒಟ್ಟು 140 ಕ್ರೀಡಾಪಟುಗಳು ನಿಷೇಧಕ್ಕೆ ಒಳಗಾಗಿದ್ದಾರೆ ಅಥವಾ ಅನರ್ಹಗೊಂಡಿದ್ದಾರೆ. ಈ ಪೈಕಿ 42 ಮಂದಿ ಪದಕ ಗೆದ್ದವರು. ಅದರಲ್ಲೂ 13 ಮಂದಿ ಚಿನ್ನಕ್ಕೆ ಮುತ್ತು ನೀಡಿದವರು.
ವಿಶ್ವ ಉದ್ದೀಪನ ಮದ್ದು ನಿಷೇಧ ಘಟಕ (ವಾಡಾ) ಅಸ್ತಿತ್ವಕ್ಕೆ ಬಂದದ್ದು 2000ನೇ ಇಸವಿಯಲ್ಲಿ. ಮುಂದಿನ ವರ್ಷ ವಿಶ್ವ ಉದ್ದೀಪನ ಮದ್ದು ನಿಷೇಧ ನಿಯಮ ಜಾರಿಗೆ ಬಂತು. 2009, 2015 ಮತ್ತು 2021ರಲ್ಲಿ ಇದಕ್ಕೆ ತಿದ್ದುಪಡಿಯನ್ನೂ ಮಾಡಲಾಯಿತು. ಡೋಪಿಂಗ್ ನಿಷೇಧಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ವಾಡಾ ಕೋಟಿಗಟ್ಟಲೆ ಮೊತ್ತ ವಿನಿಯೋಗಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ದೊಡ್ಡ ಮೊತ್ತವನ್ನು ಇದಕ್ಕಾಗಿ ತೆಗೆದಿರಿಸಲಾಗಿದೆ.
ಮೋಸ ಮಾಡುವ ಅಥ್ಲೀಟ್‌ಗಳು ಮತ್ತು ನೆರವು ಸಿಬ್ಬಂದಿಗೆ ರಂಗೋಲಿಯೊಳಗೆ ತೂರುವ ‘ಕಲೆ’ ಗೊತ್ತಿರುವುದರಿಂದ ಹೊಸ ಸಂಶೋಧನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ ನಿಯಮಗಳಿಗೆ ಎಷ್ಟು ಮಾರ್ಪಾಟು ಮಾಡಿದರೂ ನುಸುಳಿಕೊಳ್ಳಲು ಅಥ್ಲೀಟ್‌ಗಳಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಕಳೆದ ವರ್ಷ ಅಮೆರಿಕದ ಸ್ಪ್ರಿಂಟರ್ ಕ್ರಿಸ್ಟಿಯನ್ ಕೋಲ್ಮನ್ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಆದರೆ ಕ್ರೀಡಾ ನ್ಯಾಯಾಲಯ ಇದನ್ನು 18 ತಿಂಗಳಿಗೆ ಇಳಿಸಿತು. .
ರಷ್ಯಾ ಮೇಲೆ ಕಣ್ಣು
ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಕುಖ್ಯಾತಿ ಪಡೆದಿರುವುದರಿಂದ ರಷ್ಯಾದ ಕ್ರೀಡಾಪಟುಗಳ ಮೇಲೆ ಟೋಕಿಯೊದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. 2018ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಅಂತರರಾಷ್ಟ್ರೀಯ ಟೆಸ್ಟಿಂಗ್ ಏಜನ್ಸಿಯು ಒಲಿಂಪಿಕ್ಸ್ ಗ್ರಾಮದಲ್ಲಿ ಜುಲೈ 13ರಿಂದಲೇ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲು ತೊಡಗಿದೆ.
ರಷ್ಯಾದ ಕ್ರೀಡಾಪಟುಗಳು ಟೋಕಿಯೊದಲ್ಲಿ ದೇಶವನ್ನು ಪ್ರತಿನಿಧಿಸುವುದಿಲ್ಲ. ಅಲ್ಲಿ ದೇಶದ ಧ್ವಜವನ್ನಾಗಲಿ ರಾಷ್ಟ್ರಗೀತೆನ್ನಾಗಲಿ ಬಳಸುವಂತಿಲ್ಲ. ರಷ್ಯನ್ ಒಲಿಂಪಿಕ್ ಸಮಿತಿಯನ್ನು ಅವರು ಪ್ರತಿನಿಧಿಸಬೇಕಾಗಿದೆ. ಹಿಂದಿನ ಎರಡು ಆವೃತ್ತಿಗಳಿಂದ ಈ ದೇಶದ ಅನೇಕ ಕ್ರೀಡಾಪಟುಗಳನ್ನು ಕಡೆಗಣಿಸಲಾಗಿದ್ದು 2018ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಆ ದೇಶದ ಧ್ವಜದ ಮೇಲೆ ನಿಷೇಧ ಹೇರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.