ಆಟ, ಜಿಮ್ನಾಷಿಯಂ ವ್ಯಾಯಾಮಗಳು ಆರೋಗ್ಯವೃದ್ದಿಗಾಗಿ ರೂಪುಗೊಂಡಿವೆ. ಆದರೆ, ಅವುಗಳಿಂದ ಹಣ, ಖ್ಯಾತಿಗಳನ್ನು ಗಳಿಸಲು ವಾಮಮಾರ್ಗಕ್ಕೆ ಕಾಲಿಟ್ಟಾಗ ಮೊದಲಿಗೆ ಆಕರ್ಷಿಸುವುದೇ ಉದ್ದೀಪನ ಮದ್ದು ಗಳ ಲೋಕ. ಅಲ್ಪಕಾಲದ ಸಾಧನೆಗಾಗಿ ಈ ಮಾದಕ ಜಾಲಕ್ಕೆ ಬಿದ್ದವರ ಇಡೀ ಜೀವನವೇ ನರಕವಾಗುತ್ತದೆ. ಪೌಡರ್ ದಂಧೆಯ ಜಾಲದಲ್ಲಿ ಈಗ ಯುವ ಸಮುದಾಯ ನರಳುತ್ತಿದೆ.
ಬೆಂಗಳೂರು: ದೇಹದಾರ್ಢ್ಯಪಟುವಿನಂತೆ ಕಾಣುವ ಆ ಯುವಕನ ಎದೆಯಿಂದ ಹಾಲು ಒಸರುತ್ತದೆ!
ಹೌದು; ಆತ ಏಳೆಂಟು ವರ್ಷಗಳ ಹಿಂದೆ ಜಗಮೆಚ್ಚಿದ ದೇಹದಾರ್ಢ್ಯಪಟುವಾಗಿದ್ದ. ಕೇವಲ 21–22ನೇ ವಯಸ್ಸಿನಲ್ಲಿಯೇ ನೋಡಿದವರು ‘ಅಬ್ಬಾ..’ ಎಂದು ಹುಬ್ಬೇರಿಸುವಂತಹ ಮಾಂಸಖಂಡಗಳನ್ನು ಬೆಳೆಸಿಕೊಂಡಿದ್ದ. ಆದರೆ, ಆ ಹಂತದಲ್ಲಿ ಮಾಡಿದ್ದ ಪ್ರಮಾದ ಭವಿಷ್ಯದ ಜೀವನ ನುಂಗಿತ್ತು. ಪೌಷ್ಟಿಕ ಆಹಾರೌಷಧಿ (ಫುಡ್ ಸಪ್ಲಿಮೆಂಟ್) ಹೆಸರಿನಲ್ಲಿ ಸಿಕ್ಕ ಸ್ಟೆರಾಯ್ಡ್‌ಗಳನ್ನು ಸೇವಿಸಿದ್ದ ಹುಬ್ಬಳ್ಳಿಯ ಈ ಯುವಕ ಈಗ ಅಕಾಲ ವೃದ್ಧ. ಜೀವನಪೂರ್ತಿ ‘ಬಹುಅಂಗಾಂಗವಿಕಲ’. ಗಂಡಸುತನದ ಹಾರ್ಮೋನುಗಳು ಕರಗಿ ನಪುಂಸಕತ್ವದ ಛಾಯೆ ಆವರಿಸಿದೆ!
ಇನ್ನೊಬ್ಬ ಯುವಕನ ಕತೆ ಇನ್ನೂ ಭಯಾನಕ. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ತಂಗಿದ್ದ ಆತ ಖಾಸಗಿ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ. ಇದ್ದಕ್ಕಿದ್ದಂತೆ ಜಿಮ್‌ಗೆ ಹೋಗಲಾರಂಭಿಸಿದ. ಪ್ರತಿದಿನ ಎರಡೂ ಹೊತ್ತು ವ್ಯಾಯಾಮ ಮಾಡುತ್ತಿದ್ದ. ಒಂದು ವರ್ಷ ದಾಟುವಷ್ಟರಲ್ಲಿ ಮಾಂಸಖಂಡಗಳು ಹುರಿಗಟ್ಟತೊಡಗಿದವು. ಕಡಿಮೆ ಅವಧಿಯಲ್ಲಿ ಆತನ ಈ ಬೆಳವಣಿಗೆ ನೋಡಿ ಅಚ್ಚರಿಯಿಂದ ಕಣ್ಣರಳಿಸಿದ್ದರು ಆಪ್ತರು. ಆದರೆ ಅದೊಂದು ದಿನ ಸಂಜೆ ಮನೆಗೆ ಬಂದವನೇ ಎದೆನೋವು ಎಂದು ಕುಸಿದ. ಆಸ್ಪತ್ರೆ ಮುಟ್ಟುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಆತನ ಸುಂದರ ಬದುಕಿಗಾಗಿ ದುಡಿದ ಪಾಲಕರಿಗೆ ಈಗ ನಿರಂತರ ಶೋಕ. ಆತ ಪ್ರತಿದಿನ ಹಾಲಿಗೆ ಬೆರೆಸಿ ಕುಡಿಯುತ್ತಿದ್ದ ಶಕ್ತಿವರ್ಧಕ ಪುಡಿ ಅವರ ಜೀವನಕ್ಕೆ ಹುಳಿ ಹಿಂಡಿದ್ದು ಗೊತ್ತಾಗಲೇ ಇಲ್ಲ.
ಈ ಎರಡೂ ಸತ್ಯಸಂಗತಿಗಳು. ಇಂತಹ ಪ್ರಕರಣಗಳು ರಾಜ್ಯದ ಪಟ್ಟಣ, ನಗರ, ಮಹಾನಗರಗಳಲ್ಲಿ ಬಹಳಷ್ಟು ನಡೆಯುತ್ತಿವೆ. ಕ್ರೀಡಾಜಗತ್ತನ್ನು ಮೆಲ್ಲಗೆ ಆವರಿಸಿಕೊಂಡಿರುವ ‘ಪೌಡರ್ ದಂಧೆ’ ಈಗ ಕರಾಳ ಮುಖ ತೋರಿಸತೊಡಗಿದೆ. ಅದರಲ್ಲೂ ದೇಹದಾರ್ಢ್ಯ, ವೇಟ್‌ಲಿಫ್ಟಿಂಗ್, ಪವರ್‌ಲಿಫ್ಟಿಂಗ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಪೌಡರ್ ಕಾರುಬಾರು ಜೋರಾಗಿದೆ. ಉಳಿದ ಕ್ರೀಡೆಗಳಲ್ಲಿ ಉದ್ದೀಪನ ಮದ್ದುಗಳ (ಚುಚ್ಚುಮದ್ದು, ಗುಳಿಗೆ, ಔಷಧಿ) ರೂಪದಲ್ಲಿ ದೇಹ ಸೇರುತ್ತಿದೆ. ಯುವಕ–ಯುವತಿಯರ ಸಂಖ್ಯೆ ಹೆಚ್ಚಿರುವ ಭಾರತವು ಈ ದಂಧೆಗೆ ದೊಡ್ಡ ಮಾರುಕಟ್ಟೆ. ಕೆರೆಟಿಯನ್, ಅನಾಬೊಲಿಕ್ ಸ್ಟೆರಾಯ್ಡ್ ಗಳನ್ನು ದೇಹಕ್ಕೆ ಸೇರಿಸುವ ದುಷ್ಟದಂಧೆ ಇದು.
ಇದನ್ನೂ ಓದಿ...ಸಾವಿನ ಹಾದಿಗೆ ತಳ್ಳುವ ‘ಜಿಮ್’ಗಳು..!
ಈ ಪಿಡುಗಿಗೆ ಬಲಿಯಾಗುತ್ತಿರುವ ಇನ್ನೊಂದು ವರ್ಗವೂ ಇದೆ. ಆದರೆ ಇವರು ಕ್ರೀಡಾಪಟುಗಳಲ್ಲ. ಸಿನಿಮಾ ತಾರೆಯರ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್‌ಗಳನ್ನು ನೋಡಿ ತಾವೂ ಅವರಂತಾಗುವ ಭರದಲ್ಲಿ ಮಾದಕ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ದುಡ್ಡಿನ ಆಸೆಗೆ ಬಹಳಷ್ಟು ಜಿಮ್ನಾಷಿಯಂಗಳು, ಟ್ರೇನರ್‌ಗಳು ಈ ಮಾರಕ ಪೌಡರ್‌ಗಳ ಏಜೆಂಟ್‌ರಾಗಿದ್ದಾರೆ.
‘ಜಿಮ್‌ಗೆ ಕಾಲಿಟ್ಟ ಆರೆಂಟು ತಿಂಗಳಲ್ಲಿ ಸಿಕ್ಸ್‌ಪ್ಯಾಕ್ ಆಗಬೇಕು. ಸ್ಕಿನ್‌ಟೈಟ್ ಟೀಶರ್ಟ್ ಧರಿಸಿ, ಬುಲೆಟ್ ಮೇಲೆ ಠೀವಿಯಿಂದ ಓಡಾಡಬೇಕು ಎಂಬ ಹಂಬಲದಿಂದ ಬರುತ್ತಾರೆ. ಅಂತಹವರಿಗೆ ಬರೀ ವ್ಯಾಯಾಮ ಹೇಳಿಕೊಟ್ಟರೆ ದೇಹ ಹುರಿಗಟ್ಟಲು ಬಹಳಷ್ಟು ಸಮಯ ಬೇಕು. ಅದಕ್ಕಾಗಿ ಶಕ್ತಿವರ್ಧಕಪುಡಿಯನ್ನು ಹಾಲಿನೊಂದಿಗೆ ಸೇವಿಸುತ್ತಾರೆ’ ಎನ್ನುತ್ತಾರೆ ಬೆಂಗಳೂರಿನ ಜಿಮ್‌ವೊಂದರ ತರಬೇತುದಾರರೊಬ್ಬರು.
ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹ ಸಪ್ಲಿಮೆಂಟ್‌ಗಳ ಪೈಕಿ ಶೇ 99ರಲ್ಲಿ ನಿಷೇಧಿತ ಉದ್ದೀಪನ ಮದ್ದಿನಂಶಗಳಿವೆ ಎಂದು ಕೆಲವು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. 2000ನೇ ಇಸವಿಯಿಂದಲೇ ಐಒಸಿಯು ಇಂತಹ ಮಾರಕ ಔಷಧಗಳ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದೆ. ಆದರೆ, ಸುಶಿಕ್ಷಿತರ ವಲಯದಲ್ಲಿಯೇ ಇದು ಹೆಚ್ಚು ಬಳಕೆಯಾಗುತ್ತಿರುವುದು ವಿಪರ್ಯಾಸ. ಭಾರತದಲ್ಲಿ ದೇಹದಾರ್ಢ್ಯ, ಲಿಫ್ಟಿಂಗ್ ಕ್ರೀಡೆಗಳಲ್ಲಿ ಬಡಕುಟುಂಬಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಷ್ಟ, ಅಂತರರಾಷ್ಟ್ರೀಯ ಪದಕ ಗಳಿಸಿ ನೌಕರಿ ಗಿಟ್ಟಿಸಿಕೊಳ್ಳಬೇಕೆನ್ನುವ ಅವರ ತುಡಿತವೇ ‘ಪುಡಿ ಮಾರುಕಟ್ಟೆ’ಗೆ ಬಂಡವಾಳ.
ಈಗಂತೂ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರಿನಂತಹ ನಗರಗಳಲ್ಲಿ ಪ್ಯಾಕೇಜ್ (ವ್ಯಾಯಾಮ +ವೈಯಕ್ತಿಕ ಟ್ರೇನರ್+ ಫುಡ್‌ಸಪ್ಲಿಮೆಂಟ್) ಕೂಡ ನೀಡಲಾಗುತ್ತಿದೆ. ತಿಂಗಳಿಗೆ ₹ 30 ರಿಂದ 50 ಸಾವಿರದವರೆಗೂ ಶುಲ್ಕ ಪಡೆಯಲಾಗುತ್ತಿದೆ. ಅಲ್ಪಕಾಲದಲ್ಲಿಯೇ ಸಿಕ್ಸ್‌ಪ್ಯಾಕ್ ಗ್ಯಾರಂಟಿ ಎಂಬ ವಾಗ್ದಾನವೂ ದೊರೆಯುತ್ತದೆ.
ಇದನ್ನೂ ಓದಿ...ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...
ಈ ಮದ್ದುಗಳನ್ನು ತೆಗೆದುಕೊಂಡಾಗ ವ್ಯಾಯಾಮ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಟೆಸ್ಟೊಸ್ಟೆರಾನ್ ಹಾರ್ಮೋನ್ ಅನ್ನು ಉದ್ದೀಪನ ಗೊಳಿಸುತ್ತದೆ. 100 ಬಸ್ಕಿ ಹೊಡೆಯಬಲ್ಲ ವ್ಯಕ್ತಿ ಸ್ಟೆರಾಯ್ಡ್ ತೆಗೆದುಕೊಂಡಾಗ ಸಾವಿರಕ್ಕೂ ಹೆಚ್ಚು ಬಸ್ಕಿ ತೆಗೆಯಬಲ್ಲ. ಇದರಿಂದ ಬೇಗನೇ ದೇಹ ಹುರಿಗಟ್ಟುತ್ತದೆ. ಆರಂಭದ ಕೆಲ ವರ್ಷ ಆತ ಮೆರೆಯಬಹುದು. ದೀರ್ಘಾವಧಿಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಈ ಔಷಧಿಗಳು ಉಳಿದ ಆಯಸ್ಸನ್ನು ನುಂಗಿನೀರು ಕುಡಿಯುವುದು ನಿಶ್ಚಿತ.
ಜಿಮ್ ಮಾಲೀಕನೇ ಏಜೆಂಟ್
ಬೆಂಗಳೂರು: ಜಿಮ್ನಾಷಿಯಂಗಳಲ್ಲಿ ಮತ್ತು ಕ್ರೀಡಾ ಸಂಸ್ಥೆಗಳಲ್ಲಿ ಟಾನಿಕ್, ಪ್ರೊಟೀನ್ ಮತ್ತು ಶಕ್ತಿವರ್ಧಕ ಪೇಯಗಳ ಹೆಸರಿನಲ್ಲಿ ಸ್ಟೆರಾಯ್ಡ್‌ಗಳನ್ನು ಮಾರುವಂತಿಲ್ಲ. ಈ ಪದಾರ್ಥಗಳನ್ನು ಕೊಳ್ಳುವಂತೆ ಮತ್ತು ಬಳಕೆ ಮಾಡುವಂತೆ ಪ್ರಚೋದಿಸುವುದು ಅಪರಾಧ.
ಚಾಮರಾಜಪೇಟೆಯ ಜಿಮ್ ಮಾಲೀಕನೊಬ್ಬ ಸ್ಟೆರಾಯ್ಡ್ ನೀಡುತ್ತಿದ್ದ ಆರೋಪದಡಿಯಲ್ಲಿ ಇತ್ತೀಚೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯು, ಸ್ಟೆರಾಯ್ಡ್ ಯುಕ್ತ ಪದಾರ್ಥಗಳನ್ನು ಸೇವಿಸುವಂತೆ ಗ್ರಾಹಕರಿಗೆ ಸಲಹೆ ನೀಡುತ್ತಿದ್ದ. ಜತೆಗೆ ಆನ್‌ಲೈನ್ ಮೂಲಕ ಅವುಗಳನ್ನು ಖರೀದಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
‘ಜಿಮ್ ಮೇಲೆ ದಾಳಿ ಮಾಡಿ ಸ್ಟೆರಾಯ್ಡ್, ದೇಹ ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‌ಗಳನ್ನು ಜಪ್ತಿ ಮಾಡಲಾಗಿತ್ತು. ಜಪ್ತಿ ಮಾಡಿರುವ ಸ್ಟೆರಾಯ್ಡ್‌ಗಳನ್ನು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಸುಪರ್ದಿಗೆ ನೀಡಲಾಗಿದೆ. ಅವರು ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆತನ ವಿರುದ್ಧ, ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಎಫ್‌ಐಆರ್ ಸಹ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.