ADVERTISEMENT

ಕಂಬಳದ ಕರೆಯಲ್ಲಿ ಡಿಆರ್‌ಎಸ್‌!

ತಾಂತ್ರಿಕ ದೋಷ ಕಂಡರೆ ಮೂರನೇ ಅಂಪೈರ್‌ ಮೊರೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 19:40 IST
Last Updated 4 ಜನವರಿ 2023, 19:40 IST
ಕಂಬಳದಲ್ಲಿ ಕೋಣಗಳ ಓಟದ ನೋಟ –ಪ್ರಜಾವಾಣಿ ಸಂಗ್ರಹ ಚಿತ್ರ
ಕಂಬಳದಲ್ಲಿ ಕೋಣಗಳ ಓಟದ ನೋಟ –ಪ್ರಜಾವಾಣಿ ಸಂಗ್ರಹ ಚಿತ್ರ   

ಮಂಗಳೂರು: ಕ್ರಿಕೆಟ್‌ ಮತ್ತು ಫುಟ್‌ಬಾಲ್ ಪಂದ್ಯಗಳಲ್ಲಿ ಇರುವಂತೆ ಕಂಬಳದಲ್ಲೂ ತೀರ್ಪು ಮರುಪರಿಶೀಲನೆ ಪದ್ಧತಿ ಜಾರಿಗೆ ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಬುಧವಾರ ನಡೆದ ಕಂಬಳ ಕೋಣಗಳ ಮಾಲೀಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ವಾರಾಂತ್ಯದಲ್ಲಿ (ಜನವರಿ 7,8) ಕಾರ್ಕಳದ ಮಿಯಾರಿನಲ್ಲಿ ನಡೆಯಲಿರುವ ಕಂಬಳದಲ್ಲಿ ಈ ಪದ್ಧತಿ ಜಾರಿಗೆ ಬರಲಿದೆ.

ಕಂಬಳದಲ್ಲಿ ಒಂದು ದಶಕದಿಂದ ಲೇಜರ್ ಬೀಮ್ ತಂತ್ರಜ್ಞಾನ ಬಳಸಿ ಫಲಿತಾಂಶ ನಿರ್ಣಯಿಸಲಾಗುತ್ತಿದೆ. ದಾಖಲೆಗಳು ಸೃಷ್ಟಿಯಾಗಲು ಆರಂಭವಾದ ನಂತರ, ನಿಖರ ಕಾಲ ನಿರ್ಣಯ ಮಾಡುವುದಕ್ಕಾಗಿ ‘ಮಂಜಟ್ಟಿ’ಯಲ್ಲಿ ಸೆನ್ಸರ್‌ ಬಳಕೆಯೂ ಆರಂಭವಾಯಿತು. ಆದರೆ ಈಚೆಗೆ ತಂತ್ರಜ್ಞಾನದಲ್ಲಿ ದೋಷಗಳು ಕಂಡುಬರಲು ಆರಂಭವಾದ ಕಾರಣ ಟಿವಿ ಅಂಪೈರ್ ಮುನ್ನೆಲೆಗೆ
ಬಂದಿದ್ದಾರೆ.

ADVERTISEMENT

ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಪು ಮರುಪರಿಶೀಲನೆ (ಡಿಆರ್‌ಎಸ್‌) ಮತ್ತು ಫುಟ್‌ಬಾಲ್‌ನಲ್ಲಿ ವಿಡಿಯೊ ಸಹಾಯಕ ರೆಫರಿ (ವಿಎಆರ್‌) ಬಳಕೆಯಾಗುತ್ತಿದೆ.

‘ಬಿಸಿಲಿನ ತಾಪದಿಂದ ಕೆಲವೊಮ್ಮೆ ಲೇಜರ್‌ ಬೀಮ್ ತಂತ್ರಜ್ಞಾನ ಕೈಕೊಡುತ್ತದೆ. ಇಂಥ ಸಂದರ್ಭದಲ್ಲಿ ಬದಲಿ ವ್ಯವಸ್ಥೆ ಬೇಕು. ಇನ್ನು ಮುಂದೆ ಲೇಜರ್ ಬೀಮ್‌ ತಂತ್ರಜ್ಞಾನ ಕೈಕೊಟ್ಟರೆ, ಓಟ ಟೈ ಅದರೆ ಅಥವಾ ಸಂದೇಹಗಳು ಬಂದರೆ ಟಿವಿ ಅಂಪೈರ್‌ ನೆರವು ಪಡೆಯಲಾಗುವುದು. ಕೋಣಗಳ ಮಾಲೀಕರ ಸಮಕ್ಷಮದಲ್ಲಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಮೂರನೇ ಅಂಪೈರ್ ಅಂತಿಮ ತೀರ್ಪು ನೀಡಲಿದ್ದಾರೆ’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು ‘ಪ್ರಜಾವಾಣಿ’ಗೆ
ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.