ADVERTISEMENT

ಉದ್ದೀಪನ ಮದ್ದು ಸೇವಿಸಿದ್ದು ಸಾಬೀತು: ರನ್ನರ್ ದ್ಯುತಿ ಚಾಂದ್‌ಗೆ 4 ವರ್ಷ ನಿಷೇಧ

ಶಿಕ್ಷೆ ವಿರುದ್ದ ಮೇಲ್ಮನವಿ ಸಲ್ಲಿಸಲು ಅಥ್ಲೀಟ್‌ ನಿರ್ಧಾರ

ಪಿಟಿಐ
Published 18 ಆಗಸ್ಟ್ 2023, 14:20 IST
Last Updated 18 ಆಗಸ್ಟ್ 2023, 14:20 IST
ದ್ಯುತಿ ಚಾಂದ್
ದ್ಯುತಿ ಚಾಂದ್   

ನವದೆಹಲಿ: ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಎರಡು ಬಾರಿಯ ಏಷ್ಯನ್ ಗೇಮ್ಸ್‌ ಪದಕ ವಿಜೇತೆ ದ್ಯುತಿ ಚಾಂದ್‌ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ವಿಧಿಸಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು 27 ವರ್ಷದ ಸ್ಪ್ರಿಂಟರ್‌ ನಿರ್ಧರಿಸಿದ್ದಾರೆ. ಕಳೆದ ವರ್ಷ ಡಿ. 5 ಮತ್ತು 26 ರಂದು ದ್ಯುತಿ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು. ಅವರು ನಿಷೇಧಿತ ಮದ್ದು ಸೇವಿಸಿರುವುದು ಎರಡೂ ಪರೀಕ್ಷೆಗಳಲ್ಲಿ ಸಾಬೀತಾದ ಕಾರಣ ನಾಡಾ, ಗುರುವಾರ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

ಮಹಿಳೆಯರ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ (11.17 ಸೆ.) ಹೊಂದಿರುವ  ದ್ಯುತಿ ಅವರ ಮೇಲಿನ ನಿಷೇಧ ಶಿಕ್ಷೆ ಈ ವರ್ಷದ ಜ.3 ರಿಂದ ಜಾರಿಯಾಗಿದೆ. ಮೊದಲ ಮಾದರಿ ಸಂಗ್ರಹಿಸಿದ ದಿನದಿಂದ (ಡಿ.5, 2022) ಅವರು ಪಾಲ್ಗೊಂಡಿರುವ ಎಲ್ಲ ಸ್ಪರ್ಧೆಗಳ ಫಲಿತಾಂಶಗಳನ್ನು ರದ್ದುಗೊಳಿಸಲಾಗುತ್ತದೆ.

ADVERTISEMENT

ದ್ಯುತಿ ತಮ್ಮ ವೃತ್ತಿಜೀವನದ ಉದ್ದಕ್ಕೂ ‘ಕಳಂಕರಹಿತ ಕ್ರೀಡಾಪಟು’ ಆಗಿದ್ದು, ನಿಷೇಧ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರ ವಕೀಲ ಪಾರ್ಥ್‌ ಗೋಸ್ವಾಮಿ ಹೇಳಿದ್ದಾರೆ.

‘ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ. ಅವರು ಉದ್ದೇಶಪೂರ್ವಕವಾಗಿ ಮದ್ದು ಸೇವಿಸಿಲ್ಲ ಎಂಬುದನ್ನು ಮೇಲ್ಮನವಿ ಸಮಿತಿಗೆ ಮನವರಿಕೆ ಮಾಡಿಕೊಡುವ ವಿಶ್ವಾಸವಿದೆ’ ಎಂದಿದ್ದಾರೆ.

‘ದ್ಯುತಿ ಅವರು ಭಾರತದ ಹೆಮ್ಮೆಯ ಅಥ್ಲೀಟ್‌ ಎನಿಸಿಕೊಂಡಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳ ವೇಳೆ ನೂರಕ್ಕೂ ಅಧಿಕ ಸಲ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಒಮ್ಮೆಯೂ ಉದ್ದೀಪನ ಮದ್ದು ಸೇವನೆಯ ಕಳಂಕ ಅವರನ್ನು ಅಂಟಿಕೊಂಡಿಲ್ಲ’ ಎಂದು ತಿಳಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಮದ್ದು ಸೇವನೆ ಮಾಡಿಲ್ಲ ಎಂದು ದ್ಯುತಿ ಮತ್ತು ಅವರ ವಕೀಲರು ನಾಡಾದ ಶಿಸ್ತು ಸಮಿತಿಯ ಮುಂದೆ ಪ್ರತಿಪಾದಿಸಿದ್ದರು.

ಒಡಿಶಾದ ಅಥ್ಲೀಟ್‌ 2018ರ ಜಕಾರ್ತ ಏಷ್ಯನ್‌ ಗೇಮ್ಸ್‌ನಲ್ಲಿ 100 ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.