ADVERTISEMENT

ದ್ಯುತಿ ಚಾಂದ್‌ ‘ಉತ್ತಮ’ ದಾಖಲೆ

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಬೆನ್ನುನೋವಿನಿಂದ ಬಳಲಿದ ಹಿಮಾ ದಾಸ್‌ಗೆ ನಿರಾಸೆ

ಪಿಟಿಐ
Published 21 ಏಪ್ರಿಲ್ 2019, 20:00 IST
Last Updated 21 ಏಪ್ರಿಲ್ 2019, 20:00 IST
ದ್ಯುತಿ ಚಾಂದ್‌
ದ್ಯುತಿ ಚಾಂದ್‌   

ದೋಹಾ: ವೇಗದ ಓಟಗಾರ್ತಿ ದ್ಯುತಿ ಚಾಂದ್‌ ಇಲ್ಲಿ ಭಾನುವಾರ ಆರಂಭಗೊಂಡ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮಾಡಿದರು. 100 ಮೀಟರ್ಸ್ ಓಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದರು.

ಮಹಿಳೆಯರ ವಿಭಾಗದ ನಾಲ್ಕನೇ ಹೀಟ್ಸ್‌ನಲ್ಲಿ 11.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ದ್ಯುತಿ ಗುವಾಹಟಿಯಲ್ಲಿ ಕಳೆದ ವರ್ಷ ಮಾಡಿದ್ದ 11.29 ಸೆಕೆಂಡುಗಳ ಸಾಧನೆಯನ್ನು ಹಿಂದಿಕ್ಕಿದರು. ಆದರೆ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಹಿಮಾ ದಾಸ್ ಬೆನ್ನುನೋವಿನಿಂದಾಗಿ ಸ್ಪರ್ಧೆಯಿಂದ ಹೊರಬಿದ್ದರು.

ಭಾರತದ ಭರವಸೆಯ ಅಥ್ಲೀಟ್‌ಗಳಾದ ಜಿನ್ಸನ್ ಜಾನ್ಸನ್‌ (800 ಮೀಟರ್ಸ್ ಓಟ), ಮೊಹಮ್ಮದ್ ಅನಾಸ್‌ ಮತ್ತು ಆರೋಕ್ಯ ರಾಜೀವ್‌ (400 ಮೀಟರ್ಸ್ ಓಟ), ಪ್ರವೀಣ್‌ ಚಿತ್ರವೇಲು (ಟ್ರಿಪಲ್ ಜಂಪ್‌) ಮತ್ತು ಗೋಮತಿ ಮಾರಿಮುತ್ತು (1500 ಮೀಟರ್ಸ್ ಓಟ) ನಿರೀಕ್ಷೆಯಂತೆ ಎರಡನೇ ಸುತ್ತು ಪ್ರವೇಶಿಸಿದರು.

ADVERTISEMENT

ರಾಷ್ಟ್ರೀಯ ದಾಖಲೆ ಹೊಂದಿರುವ ಜಿನ್ಸನ್ ಜಾನ್ಸನ್‌ ಹೀಟ್ಸ್‌ನಲ್ಲಿ 1ನಿಮಿಷ 53.43 ಸೆಕೆಂಡುಗಳಲ್ಲಿ ಎರಡನೇಯವರಾಗಿ ಗುರಿ ಮುಟ್ಟಿದರು. ಖತಾರ್‌ನ ಜಮಾಲ್‌ ಹೈರಾನ್‌ ಮೊದಲಿಗರಾದರು. ಇಬ್ಬರೂ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ಮಂಜೀತ್ ಸಿಂಗ್ ಬದಲಿಗೆ ಸ್ಪರ್ಧಿಸಲು ಭಾರತ ಅಥ್ಲೆಟಿಕ್ ಫೆಡರೇಷನ್‌ ಆಯ್ಕೆ ಮಾಡಿದ ಮೊಹಮ್ಮದ್ ಅಫ್ಸಲ್‌ 800 ಮೀಟರ್ಸ್‌ ಓಟದ ಹೀಟ್ಸ್‌ನಲ್ಲಿ 1 ನಿಮಿಷ 52.93 ಸೆಕೆಂಡುಗಳ ಸಾಧನೆ ಮಾಡಿ ಸೆಮಿಫೈನಲ್ ಪ್ರವೇಶಿಸಿದರು.

ಗೋಮತಿ ಫೈನಲ್‌ಗೆ: ಮಹಿಳೆಯರ 800 ಮೀಟರ್ಸ್ ಓಟದ ಹೀಟ್ಸ್‌ನಲ್ಲಿ ಎರಡನೆಯವರಾಗಿ ಗುರಿ ತಲುಪಿದ ಗೋಮತಿ ಮಾರಿಮುತ್ತು 2 ನಿಮಿಷ 04.96 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಫೈನಲ್‌ ಪ್ರವೇಶಿಸಿದರು. ಟ್ವಿಂಕಲ್‌ ಚೌಧರಿ ಹೀಟ್ಸ್‌ನಲ್ಲಿ ನಿರಾಸೆ ಅನುಭವಿಸಿದರು.

ಪುರುಷರ 400 ಮೀಟರ್ಸ್ ಹೀಟ್ಸ್‌ನಲ್ಲಿ 46.25 ಸೆಕೆಂಡುಗಳ ಸಾಧನೆ ಮಾಡಿ ಆರೋಕ್ಯ ರಾಜೀವ್‌ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ಅನಾಸ್‌ (46.46 ಸೆಕೆಂಡು) ಮೂರನೆಯವರಾಗಿ ಗುರಿ ಮುಟ್ಟಿ ಸೆಮಿಫೈನಲ್‌ ಪ್ರವೇಶಿಸಿದರು. ಚಿತ್ರವೇಲು 15.66 ಮೀಟರ್ಸ್ ದೂರ ಜಿಗಿದು ಫೈನಲ್‌ಗೆ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.