ನವದೆಹಲಿ: ಜರ್ಮನಿಯಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ಗೆ ತಾಂತ್ರಿಕ ಕಾರಣಗಳಿಂದಾಗಿ ತಾವು ತೆರಳುತ್ತಿಲ್ಲ ಎಂದು ಅಥ್ಲೀಟ್ ದ್ಯುತಿ ಚಾಂದ್ ತಿಳಿಸಿದ್ದಾರೆ.
ತಮಗೆ ವೀಸಾ ಪಡೆಯಲು ಸಹಾಯ ಮಾಡಬೇಕು ಎಂದು ದ್ಯುತಿ ಅವರು ಹೋದ ವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಸಲ್ಲಿಸಿದ್ದರು.
‘ನಾನು ಭಾರತ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಅವರ ಸಂಪೂರ್ಣ ನೆರವಿನ ಹೊರತಾಗಿಯೂ ನನಗೆ ಜರ್ಮನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೂಟದ ಸಂಘಟನೆಯಲ್ಲಿರುವ ತಾಂತ್ರಿಕ ಸಮಸ್ಯೆಯಿಂದಾಗಿ ನಾನು ಹೋಗುತ್ತಿಲ್ಲ. ಇದರಿಂದಾಗಿ ಅತೀವ ಬೇಸರವಾಗಿದೆ. ಇದೊಂದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ’ ಎಂದು ದ್ಯುತಿ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಅವರು ಒರಿಯಾ ಭಾಷೆಯಲ್ಲಿ ಈ ಸಂದೇಶ ಕಳಿಸಿದ್ದಾರೆ. ಆದರೆ ಸಮಸ್ಯೆಯ ಕುರಿತು ಸ್ಪಷ್ಟಪಡಿಸಿಲ್ಲ.
23 ವರ್ಷದ ದ್ಯುತಿ ಅವರು ಜಾಗತಿಕ ವಿಶ್ವವಿದ್ಯಾಲಯ ಕ್ರೀಡಾಕೂಟದ ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೇ 19ರಂದು ಜರ್ಮನಿಯಲ್ಲಿ ನಡೆಯಲಿರುವ ಐಎಎಎಫ್ ಮಾನ್ಯತೆಯ ರೇಸ್ ನಲ್ಲಿ ಅವರು ಸ್ಪರ್ಧಿಸಬೇಕಿತ್ತು.
ಹೋದ ಏಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಕೂಟದಲ್ಲಿ ಅವರು 11.26 ಸೆಕೆಂಡುಗಳ ದಾಖಲೆ ಬರೆದಿದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ಗೆ 11.24 ಸೆಕೆಂಡುಗಳ ಅರ್ಹತಾಮಟ್ಟವಿದೆ. ಒಲಿಂಪಿಕ್ಸ್‌ಗೆ 11.15 ಸೆಕೆಂಡುಗಳ ಅರ್ಹತಾ ಮಟ್ಟವನ್ನು ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.