ಬೆಂಗಳೂರು: ಹದಿನಾರನೇ ಆವೃತ್ತಿಯ ಟಿಸಿಎಸ್ ವಿಶ್ವ ಟೆನ್‌ಕೆ ಸ್ಪರ್ಧೆಗೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಮುಂಜಾನೆ ಉದ್ಯಾನನಗರಿಯ ರಸ್ತೆಯಲ್ಲಿ ನಡೆಯುವ ಓಟದ ಗಮ್ಮತ್ತಿನಲ್ಲಿ ಮೂವತ್ತು ಸಾವಿರ ಮಂದಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಪ್ರಾಯೋಜಕತ್ವದಲ್ಲಿ ನಡೆಯುವ 10 ಕಿ.ಮೀ ವಿಭಾಗದ ಓಟಕ್ಕೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಖ್ಯಾತನಾಮ ಅಥ್ಲೀಟ್‌ಗಳು ಸಾಕ್ಷಿಯಾಗಲಿದ್ದಾರೆ. ಕಬ್ಬನ್ ರಸ್ತೆಯ ಮಾಣಿಕ್ ಷಾ ಪರೇಡ್ ಮೈದಾನದಿಂದ ಆರಂಭಗೊಳ್ಳುವ ಓಟವು ಪ್ರಮುಖ ರಸ್ತೆಗಳಲ್ಲಿ ಸಾಗಿ ಮತ್ತೆ ಅದೇ ಮೈದಾನದಲ್ಲೇ ಕೊನೆಗೊಳ್ಳಲಿದೆ. ಇದೇ ಮೊದಲ ಬಾರಿಗೆ ಓಟದ ಮಾರ್ಗವನ್ನು ಹಲಸೂರು ಕೆರೆಯವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರಿನಲ್ಲಿ ಚೊಚ್ಚಲ ಟೆನ್‌ಕೆ ಓಟ 2008ರಲ್ಲಿ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಆವೃತ್ತಿಗಳಲ್ಲೂ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರ ಮೂರು ಸ್ಥಾನಗಳಿಗೆ ಕೆನ್ಯಾ, ಇಥಿಯೋಪಿಯಾ ಮತ್ತು ಉಗಾಂಡದ ಸ್ಪರ್ಧಿಗಳ ನಡುವೆಯೇ ಪೈಪೋಟಿ ನಡೆದಿದೆ. ದೀರ್ಘ ಅಂತರದ ಓಟದಲ್ಲಿ ತಮಗೆ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ನಿರೂಪಿಸಲು ಆಫ್ರಿಕಾದ ಅಥ್ಲೀಟ್‌ಗಳು ಮತ್ತೆ ತುದಿಗಾಲಿನಲ್ಲಿ ನಿಂತಿದ್ದಾರೆ.
ವಿಶ್ವದ ಎರಡನೇ ಅತಿ ವೇಗದ ಟೆನ್‌ಕೆ ಓಟಗಾರ್ತಿ ಕೆನ್ಯಾದ ಇಮಾಕ್ಯುಲೆಟ್ ಅನ್ಯಾಂಗೊ ಅಕೋಲ್, ವೆಲೆನ್ಸಿಯಾ ಟೆನ್‌ಕೆ ಸ್ಪರ್ಧೆಯ ಕಂಚಿನ ಪದಕ ವಿಜೇತ ಕೇನ್ಯಾದ ಪೀಟರ್ ಮ್ವಾನಿಕಿ, ಬೆಂಗಳೂರು ಓಟದ ಪ್ರಚಾರ ರಾಯಭಾರಿ, ಶಾಟ್‌ಪಟ್ ಥ್ರೊ ಸ್ಪರ್ಧಿ ವಲೆರೀ ಆ್ಯಡಮ್ಸ್ ಮತ್ತು ಬೆಂಗಳೂರಿನ 96 ವರ್ಷದ ಅಥ್ಲೀಟ್ ಎನ್.ಎಸ್. ದತ್ತಾತ್ರೇಯ ಈ ಬಾರಿಯ ಕೂಟಕ್ಕೆ ವಿಶೇಷ ಮೆರುಗು ತುಂಬಲಿದ್ದಾರೆ.
ಭಾರತದ ಸ್ಪರ್ಧಿಗಳಲ್ಲಿ ಮಹಿಳಾ ವಿಭಾಗದ ಕೂಟ ದಾಖಲೆ ಹೊಂದಿರುವ ಮಹಾರಾಷ್ಟ್ರದ 26 ವರ್ಷದ ಸಂಜೀವಿನಿ ಜಾಧವ್ ಮತ್ತು ಹಾಲಿ ಚಾಂಪಿಯನ್ ತಂಶಿ ಸಿಂಗ್ ಪ್ರಮುಖ ಆಕರ್ಷಣೆಯಾಗಿದ್ದಾರೆ. 2018ರಲ್ಲಿ 33 ನಿಮಿಷ 38 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದ್ದ ಸಂಜೀವಿನಿ ಅವರು 2009ರಲ್ಲಿ ಕವಿತಾ ರಾವತ್ (34 ನಿ. 32 ಸೆ) ನಿರ್ಮಿಸಿದ್ದ ದಾಖಲೆ ಮುರಿದಿದ್ದರು. ತಂಶಿ ಅವರು ಕಳೆದ ಆವೃತ್ತಿಯಲ್ಲಿ 34 ನಿಮಿಷ 12 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು. ಪುರುಷರ ವಿಭಾಗದ ಹಾಲಿ ರನ್ನರ್ ಅಪ್ ಹರ್ಮನ್‌ಜೋತ್ ಸಿಂಗ್ ಮತ್ತು 2023ರ ಕೋಲ್ಕತ್ತ 25ಕೆ ಓಟದ ಚಾಂಪಿಯನ್ ಸಾವನ್ ಬರ್ವಾಲ್ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
‘ಬೆಂಗಳೂರು ಓಟ ನನ್ನ ಮೆಚ್ಚಿನ ಕೂಟವಾಗಿದೆ. ಆರು ವರ್ಷಗಳ ಹಿಂದೆ ನಾನೇ ನಿರ್ಮಿಸಿದ್ದ ದಾಖಲೆಯನ್ನು ಈ ಬಾರಿ ಮುರಿಯಲು ಪ್ರಯತ್ನಿಸುವೆ. ಕಠಿಣ ಅಭ್ಯಾಸ ನಡೆಸಿದ್ದು, ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮುಟ್ಟಲು ಗಮನ ಹರಿಸುತ್ತಿದ್ದೇನೆ. ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ 48ನೇ ಸ್ಥಾನದಲ್ಲಿದ್ದೇನೆ’ ಎಂದು ಶನಿವಾರ ಸಂಜೀವಿನಿ ಪ್ರತಿಕ್ರಿಯಿಸಿದರು.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ 1. ಬೆಳಿಗ್ಗೆ 6ರಿಂದ
30 ಸಾವಿರ ಮಂದಿ ನೋಂದಣಿ
ಓಪನ್ ಟೆನ್‌ಕೆ ವಿಶ್ವ 10ಕೆ ಪುರುಷರು ವಿಶ್ವ 10ಕೆ ಮಹಿಳೆಯರು ಮಜಾ ರನ್ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಮತ್ತು ಸಿಲ್ವರ್ ರನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 30 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 1500 ಓಟಗಾರರು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ.
ಒಟ್ಟು ₹ 1.75 ಕೋಟಿ ಬಹುಮಾನ: ಓಟವು ಒಟ್ಟು ₹ 175 ಕೋಟಿ ಬಹುಮಾನವನ್ನು ಒಳಗೊಂಡಿದೆ. ಎಲೀಟ್ ಪುರುಷರ ಮತ್ತು ಮಹಿಳೆಯರ ವಿಭಾಗಳಲ್ಲಿ ಚಾಂಪಿಯನ್ ಆಗುವವರು ತಲಾ ₹21.68 ಲಕ್ಷ ಬಹುಮಾನ ಪಡೆಯುವರು. ಅಲ್ಲದೆ ಕೂಟ ದಾಖಲೆಗೆ ಬೋನಸ್ ರೂಪದಲ್ಲಿ ₹6.67 ಲಕ್ಷ ದೊರೆಯಲಿದೆ. ಭಾರತದ ಎಲೀಟ್ ಪುರುಷರ ಮತ್ತು ಮಹಿಳಾ ವಿಭಾಗಗಳ ವಿಜೇತರಿಗೆ ತಲಾ ₹ 2.75 ಲಕ್ಷ ಬಹುಮಾನವಿದೆ. ಕೂಟ ದಾಖಲೆಗೆ ಹೆಚ್ಚುವರಿ ₹ 1 ಲಕ್ಷ ಪಡೆಯುವರು.
ಎಲೀಟ್ ಪುರುಷರ ವಿಭಾಗದ ಪ್ರಮುಖ ಸ್ಪರ್ಧಿಗಳು
ಪೀಟರ್ ಮ್ವಾನಿಕಿ ಬ್ರಾವಿನ್ ಕಿಪ್ಟೂ ಬ್ರಾವಿನ್ ಕಿಪ್ರಾಪ್ ಹಿಲರಿ ಚೆಪ್ಕ್‌ವೋನಿ ಕಿಬೆಟ್ ಎನ್ಡಿವಾ (ಎಲ್ಲರೂ ಕೆನ್ಯಾ) ಬೊಕಿ ಡಿರಿಬಾ ಜೆನ್‌ಬೆರು ಸಿಸೇ ಹ್ಯಾಗೋಸ್ ಐಯೋಬ್ (ಎಲ್ಲರೂ ಇಥಿಯೋಪಿಯಾ) ಜಾನ್ ವೆಲೆ (ತಾಂಜಾನಿಯಾ) ರಿಚರ್ಡ್ ಡೌಮಾ (ನೆದರ್ಲೆಂಡ್ಸ್)
ಎಲೀಟ್ ಮಹಿಳೆಯರ ವಿಭಾಗದ ಪ್ರಮುಖ ಸ್ಪರ್ಧಿಗಳು
ಇಮಾಕ್ಯುಲೆಟ್ ಅನ್ಯಾಂಗೊ ಅಕೋಲ್ ಲಿಲಿಯನ್ ಕಸಾಯಿತ್ ಫೇಯ್ತ್ ಚೆಪ್ಕೊಯೆಚ್ ಗ್ಲಾಡಿಸ್ ಚೆಸಿರ್ ಫೇಯ್ತ್ ಚೆಪ್ಕೊಯೆಚ್ ಗ್ಲಾಡಿಸ್ ಕಾಂಬೋಕಾ ಜುಡಿತ್ ಕಿಯೆಂಗ್ (ಎಲ್ಲರೂ ಕೆನ್ಯಾ) ಲೆಮ್ಲೆಮ್ ಹೈಲು ಅಬೆರಾಶ್ ಮಿನ್ಸೆವೊ (ಇಬ್ಬರೂ ಇಥಿಯೋಪಿಯಾ) ರಾಚೆಲ್ ಚೆಬೆಟ್ (ಉಗಾಂಡಾ) ರೋಸ್ ಚೆಲಿಮೊ (ಬಹರೇನ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.