ADVERTISEMENT

ಬಲ್ಡನ್‌ ಟೆನಿಸ್‌ ಟೂರ್ನಿ: ಮೊದಲ ಸುತ್ತಿನಲ್ಲೇ ನಗಾಲ್‌ಗೆ ನಿರಾಸೆ

ಪಿಟಿಐ
Published 2 ಜುಲೈ 2024, 16:42 IST
Last Updated 2 ಜುಲೈ 2024, 16:42 IST
ಭಾರತದ ಸುಮಿತ್‌ ನಗಾಲ್‌ –ಎಪಿ/ಪಿಟಿಐ ಚಿತ್ರ
ಭಾರತದ ಸುಮಿತ್‌ ನಗಾಲ್‌ –ಎಪಿ/ಪಿಟಿಐ ಚಿತ್ರ   

ಲಂಡನ್‌: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು.

ಎಟಿಪಿ ಕ್ರಮಾಂಕದಲ್ಲಿ 72ನೇ ಸ್ಥಾನದಲ್ಲಿರುವ ನಗಾಲ್‌ ಅವರು ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ 2-6, 6-3, 3-6, 4-6 ಸೆಟ್‌ಗಳಿಂದ 53ನೇ ರ‍್ಯಾಂಕ್‌ನ ಸರ್ಬಿಯಾದ ಮಿಯೋಮಿರ್ ಕೆಸ್ಮನೊವಿಚ್ ಅವರಿಗೆ ಮಣಿದರು.

ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಭಾರತದ 26 ವರ್ಷ ವಯಸ್ಸಿನ ಆಟಗಾರ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ, ನಂತರದ ಎರಡೂ ಸೆಟ್‌ನಲ್ಲೂ ಸರ್ಬಿಯಾ ಆಟಗಾರ ಮೇಲುಗೈ ಸಾಧಿಸಿದರು. ಎರಡು ಗಂಟೆ 38 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ನಗಾಲ್‌ ಎಸಗಿದ 44 ಅನಗತ್ಯ ತಪ್ಪುಗಳು ದುಬಾರಿಯಾದವು.

ADVERTISEMENT

ಮಿಯೋಮಿರ್ ವಿರುದ್ಧ ನಗಾಲ್‌ಗೆ ಇದು ಎರಡನೇ ಸೋಲಾಗಿದೆ. ನಾಲ್ಕು ವರ್ಷಗಳ ಹಿಂದೆ ಜರ್ಮನಿಯ ಕಲೋನ್‌ನಲ್ಲಿ ನಡೆದ ಎಟಿಪಿ 250 ಟೂರ್ನಿಯಲ್ಲೂ ನಗಾಲ್‌ ಮಣಿಸಿದ್ದರು.

ರ‍್ಯಾಂಕಿಂಗ್‌ ಆಧಾರದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ನಗಾಲ್‌ ಅವರು, ಕಳೆದ ಐದು ವರ್ಷಗಳಲ್ಲಿ ವಿಂಬಲ್ಡನ್ ಪುರುಷರ ಸಿಂಗಲ್ಸ್ ಮುಖ್ಯ ಡ್ರಾ ಪಂದ್ಯವನ್ನು ಆಡಿದ ಮೊದಲ ಭಾರತೀಯರಾಗಿದ್ದಾರೆ. 2019ರಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.