ADVERTISEMENT

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್| ನಾಲ್ಕರ ಘಟ್ಟದಲ್ಲಿ ಮುಗ್ಗರಿಸಿದ ಸಿಂಧು

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಚೀನಾದ ಯೂ ಫೀ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 12:26 IST
Last Updated 21 ಮೇ 2022, 12:26 IST
ಪಿ.ವಿ. ಸಿಂಧು  
ಪಿ.ವಿ. ಸಿಂಧು     

ಬ್ಯಾಂಕಾಕ್: ಭಾರತದ ಪಿ.ವಿ. ಸಿಂಧು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.

ಹಲವು ತಪ್ಪುಗಳನ್ನು ಎಸಗಿದ ಸಿಂಧು 17–21, 16–21 ರಿಂದ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಯೂ ಫೀ ವಿರುದ್ಧ ಸೋತರು.

ಪಂದ್ಯದ ಆರಂಭದಲ್ಲಿ ಆರನೇ ಶ್ರೇಯಾಂಕದ ಸಿಂಧು ಚೀನಾದ ಎದುರಾಳಿಯ ಮುಂದೆ ಆಡಿದ ಹತ್ತರಲ್ಲಿ ಆರು ಪಂದ್ಯಗಳಲ್ಲಿ ಗೆದ್ದಿರುವ ಶ್ರೇಯ ಹೊಂದಿದ್ದಾರೆ. ಆದರೆ, ಈ ಪಂದ್ಯದಲ್ಲಿ ಆಕ್ರಮಣಶೈಲಿಯಲ್ಲಿ ಆಡಿದ ಯೂ ಫೀ ಎದುರು ಸಿಂಧು ಮಂಕಾದರು.

ADVERTISEMENT

ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿರುವ ಸಿಂಧು, 2019ರ ಬಿಡಬ್ಲ್ಯು ಎಫ್‌ ಟೂರ್ ಫೈನಲ್‌ನಲ್ಲಿಯೂ ಯೂ ಫೀ ವಿರುದ್ಧ ಸೋತಿದ್ದರು.

ಈ ಪಂದ್ಯದಲ್ಲಿ ಸಿಂಧು ಆರಂಭಿಕ ಗೇಮ್ಸ್‌ನಲ್ಲಿ ಮೊದಲಿಗೆ ಪಾಯಿಂಟ್ ಗಳಿಸಿದರು. ಈ ಹಂತದಲ್ಲಿ ರಕ್ಷಣಾತ್ಮಕವಾಗಿ ಆಡಿದ್ದ ಯೂ ಫೀ ನಂತರ ತಿರುಗಿಬಿದ್ದರು. 3–3ರ ಸಮಬಲದ ನಂತರ ಕ್ರಾಸ್‌ಕೋರ್ಟ್ ಮತ್ತು ಫೋರ್‌ಹ್ಯಾಂಡ್ ಹೊಡೆಗಳನ್ನು ಯೂ ಫೀ ಪರಿಣಾಮಕಾರಿಯಾಗಿ ಬಳಸಿದರು. ಆದರೆ ಅವರಿಗೆ ಚುರುಕಾದ ರಿಟರ್ನ್‌ಗಳನ್ನು ನೀಡುವಲ್ಲಿ ಸಿಂಧು ಸಫಲರಾಗಲಿಲ್ಲ. 11–7ರ ಮುನ್ನಡೆಯೊಂದಿಗೆ ಯೂ ಫೀ ತಮ್ಮ ಪ್ರಾಬಲ್ಯ ವಿಸ್ತರಿಸಿದರು. 17–12ರವರೆಗೂ ಯೂಫೀ ತಮ್ಮ ಮುನ್ನಡೆಯನ್ನು ಬೆಳೆಸಿದರು. ಕ್ರಾಸ್‌ಕೋರ್ಟ್ ರಿಟರ್ನ್‌ಗಳ ಮೂಲಕ ಎರಡು ಪಾಯಿಂಟ್ ಪಡೆದ ಸಿಂಧು 15–17ರಿಂದ ಅಂತರ ತಗ್ಗಿಸಿದರು. ಆದರೆ ತಮ್ಮ ಮುನ್ನಡೆಯನ್ನು ಯಾವುದೇ ಹಂತದಲ್ಲಿಯೂ ಯೂ ಫಿ ಬಿಟ್ಟುಕೊಡಲಿಲ್ಲ.

ಎರಡನೇ ಗೇಮ್‌ನಲ್ಲಿ ಇನ್ನಷ್ಟು ವೇಗದ ಆಟಕ್ಕೆ ಒತ್ತು ನೀಡಿದ ಚೀನಾದ ಆಟಗಾರ್ತಿ ಐದು ಪಾಯಿಂಟ್‌ಗಳ ಅಂತರದಿಂದ ಗೆದ್ದರು.

ಸಿಂಧು ಸೈಯದ್‌ ಮೋದಿ ಇಂಟರ್‌ನ್ಯಾಷನಲ್ ಮತ್ತು ಸ್ವಿಸ್ ಓಪನ್‌ ಪ್ರಶಸ್ತಿ ಜಯಿಸಿದ್ದರು. ಏಷ್ಯಾ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಪಡೆದಿದ್ದರು. ಜೂನ್ 7ರಿಂದ 12ರವರೆಗೆ ಜಕಾರ್ತಾದಲ್ಲಿ ನಡೆಯಲಿರುವ ಇಂಡೊನೇಷ್ಯಾ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.