ADVERTISEMENT

Explainer: ವಿನೇಶಾ ಫೋಗಟ್‌ ಅನರ್ಹಗೊಂಡಿದ್ದು ಏಕೆ? ತೂಕದ ಪ್ರಾಮುಖ್ಯತೆ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2024, 11:17 IST
Last Updated 7 ಆಗಸ್ಟ್ 2024, 11:17 IST
<div class="paragraphs"><p>ವಿನೇಶಾ ಫೋಗಟ್</p></div>

ವಿನೇಶಾ ಫೋಗಟ್

   

ಪಿಟಿಐ ಚಿತ್ರ

ಅಥ್ಲೀಟ್‌ಗಳು ತಮ್ಮ ಕ್ರೀಡಾ ಪ್ರದರ್ಶನಕ್ಕಿಂತ ತಮ್ಮ ತೂಕ ಕಡಿಮೆ ಮಾಡುವ ಕಠಿಣ ಪ್ರಕ್ರಿಯೆಗಾಗಿಯೇ ಪದಕಕ್ಕೆ ಅರ್ಹರು ಎಂದು ಕುಸ್ತಿಪಟು  ಸಾಕ್ಷಿ ಮಲ್ಲಿಕ್‌ ಹಿಂದೊಮ್ಮೆ ಹೇಳಿದ್ದರು. ಕ್ರೀಡಾಪಟುಗಳಿಗೆ ತೂಕವೆಂಬ ಮಾನದಂಡವನ್ನು ಎದುರಿಸುವುದೇ ದೊಡ್ಡ ಸವಾಲು. ಅದರಲ್ಲೂ ಕ್ರೀಡೆಯ ಎಲ್ಲಾ ಪಟ್ಟುಗಳನ್ನೂ ಅಭ್ಯಾಸ ಮಾಡಿ, ಹಣಾಹಣಿಗೆ ಸಿದ್ಧಗೊಂಡರೂ, ತೂಕ ಅನುಮತಿಸದ ಹೊರತೂ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುವುದು ಕಷ್ಟ.

ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಗೆದ್ದ ವಿನೇಶಾ ಫೋಗಟ್‌ ‘ಭಾರತದ ಸಿಂಹಿಣಿ’ ಎಂದು ಕುಸ್ತಿಪಟು ಬಜರಂಗ್ ಪೂನಿಯಾ ಮಂಗಳವಾರ ಬಣ್ಣಿಸಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ಆದರೆ ಈ ಹೇಳಿಕೆ ನೀಡಿ 24 ಗಂಟೆ ಕಳೆಯುವುದರೊಳಗಾಗಿ ಸ್ಪರ್ಧೆಯಿಂದ ಅನರ್ಹಗೊಂಡ ಸುದ್ದಿ, ಅವರ ಗೆಲುವನ್ನು ಸಂಭ್ರಮಿಸಲು ಕಾತರದಿಂದ ಕಾದಿದ್ದವರಿಗೆ ಬರಸಿಡಿಲು ಬಡಿದಂತಾಗಿದೆ. 

ADVERTISEMENT

ಪ್ರತಿ ಪಂದ್ಯದಲ್ಲೂ ವೀರಾವೇಶದಿಂದ ಹೋರಾಡಿದ ವಿನೇಶಾ ಎದುರು ಸ್ಪರ್ಧಾಳುಗಳು ಥರಗುಟ್ಟಿದ್ದರು. ಫೈನಲ್‌ನಲ್ಲಿ ವಿನೇಶಾಗೆ ಚಿನ್ನ ಖಂಡಿತಾ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದರು. ಭಾರತ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಭಜರಂಗ್‌ ಸಿಂಗ್‌ ವಿರುದ್ಧದ ಆರೋಪಗಳಿಗೆ ಕಿವುಡಾಗಿದ್ದ ಕೇಂದ್ರ ಸರ್ಕಾರಕ್ಕೆ ತಕ್ಕ ಉತ್ತರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಬರೆದುಕೊಂಡರು. ಆದರೆ ಈ ಸಂಭ್ರಮ ಇಮ್ಮಡಿಯಾಗುವುದರೊಳಗಾಗೇ, ವಿನೇಶಾ ಅನರ್ಹ ಎಂಬ ಸುದ್ದಿ, ಪದಕ ಸಂಭ್ರಮದ ನಿರೀಕ್ಷೆಯಲ್ಲಿದ್ದವರಿಗೆ ಆಘಾತವನ್ನುಂಟು ಮಾಡಿದೆ. 

ಅಥ್ಲೀಟ್‌ಗಳು ತಮ್ಮ ಕ್ರೀಡಾ ಪ್ರದರ್ಶನಕ್ಕಿಂತ ತಮ್ಮ ತೂಕ ಕಡಿಮೆ ಮಾಡುವ ಕಠಿಣ ಪ್ರಕ್ರಿಯೆಗಾಗಿಯೇ ಪದಕಕ್ಕೆ ಅರ್ಹರು ಎಂದು ಕುಸ್ತಿಪಟು  ಸಾಕ್ಷಿ ಮಲ್ಲಿಕ್‌ ಹಿಂದೊಮ್ಮೆ ಹೇಳಿದ್ದರು. ಕ್ರೀಡಾಪಟುಗಳಿಗೆ ತೂಕವೆಂಬ ಮಾನದಂಡವನ್ನು ಎದುರಿಸುವುದೇ ದೊಡ್ಡ ಸವಾಲು. ಅದರಲ್ಲೂ ಕ್ರೀಡೆಯ ಎಲ್ಲಾ ಪಟ್ಟುಗಳನ್ನೂ ಅಭ್ಯಾಸ ಮಾಡಿ, ಹಣಾಹಣಿಗೆ ಸಿದ್ಧಗೊಂಡರೂ, ತೂಕ ಅನುಮತಿಸದ ಹೊರತೂ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುವುದು ಕಷ್ಟ.

ಹಾಗಿದ್ದರೆ, ತೂಕ ಕಡಿತ ಎಂದರೇನು?

ಯಾವುದೇ ಕ್ರೀಡಾಪಟುಗಳು ತಮ್ಮ ಪಂದ್ಯಕ್ಕೂ ಪೂರ್ವದಲ್ಲಿ ನಿರ್ದಿಷ್ಟ ದಿನಗಳವರೆಗೆ ವ್ಯವಸ್ಥಿತವಾಗಿ ತಮ್ಮ ದೇಹದ ತೂಕವನ್ನು ಇಳಿಸುವ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಪಂದ್ಯಕ್ಕೆ ಎರಡು ವಾರ ಮೊದಲು ತೂಕ ಇಳಿಸುವ ಪ್ರಕ್ರಿಯೆಗೆ ಕ್ರೀಡಾಪಟುಗಳು ಮುಂದಾಗುತ್ತಾರೆ. ದೇಹ ತೂಕದ ಸುಮಾರು ಶೇ 10ರಷ್ಟನ್ನು ಇಳಿಸಲು ಕಠಿಣ ಪದ್ಧತಿ ಅಳವಡಿಸಿಕೊಳ್ಳುತ್ತಾರೆ.

ಉದಾಹರಣೆಗೆ, 53 ಕೆ.ಜಿ. ತೂಕದ ಕ್ರೀಡಾಪಟುವೊಬ್ಬರು 50 ಕೆ.ಜಿ. ವಿಭಾಗದಲ್ಲಿ ಆಡುವುದಾದರೆ, ಮುಂದಿನ ಎರಡು ವಾರಗಳವರೆಗೆ ಹಂತಹಂತವಾಗಿ ತಮ್ಮ ತೂಕವನ್ನು 50 ಕೆ.ಜಿ. ಒಳಗೆ ತರಲು ಕಠಿಣ ಆಹಾರ ಪದ್ಧತಿ, ವ್ಯಾಯಾಮ ಅಳವಡಿಸಿಕೊಳ್ಳುತ್ತಾರೆ.

ತೂಕ ಇಳಿಸಲು ಕ್ರೀಡಾಪಟುಗಳು ಅನುಸರಿಸುವ ಪದ್ಧತಿ ಯಾವುದು?

ದೇಹದ ತೂಕ ಪರೀಕ್ಷೆಗೂ 24 ಗಂಟೆಗಳ ಮೊದಲು, ಸ್ವೆಟ್‌ ಸೂಟ್‌ (ಬೆವರು ಹೆಚ್ಚು ಹೊರಹಾಕಲು ಬಳಸುವ ಉಡುಪು) ಧರಿಸಿ ಕಠಿಣ ಕಾರ್ಡಿಯೊ ವ್ಯಾಯಾಮವನ್ನು ಕೈಗೊಳ್ಳುತ್ತಾರೆ. ಹಬೆ ಹಾಗೂ ಸೂನಾದಲ್ಲಿ ಗಂಟೆಗಟ್ಟಲೆ ಕೂರುತ್ತಾರೆ. ಇದರಿಂದ ದೇಹದಲ್ಲಿರುವ ಹೆಚ್ಚಿನ ನೀರಿನ ಅಂಶ ಹೊರಹೋಗುವುದರಿಂದ, ತೂಕ ಕಡಿಮೆಯಾಗಲಿದೆ. 

ಕೂದಲು ಕತ್ತರಿಸುವುದರಿಂದಲೂ ಕೆಲವೊಂದಿಷ್ಟು ಗ್ರಾಂ ತೂಕವನ್ನು ಇಳಿಸಬಹುದು. ಇಂಥ ಆಯಾಸದ ಪ್ರಕ್ರಿಯೆಯಿಂದ ಕ್ರೀಡಾಪಟುಗಳು ನಿದ್ದೆ ಮಾಡದ ಸ್ಥಿತಿಯೂ ಉಂಟಾಗುತ್ತದೆ.

ಪಂದ್ಯದ ದಿನ ಎಷ್ಟು ಬಾರಿ ತೂಕ ಪರೀಕ್ಷಿಸಲಾಗುತ್ತದೆ?

ಪಂದ್ಯದ ದಿನ ಕ್ರೀಡಾಪಟುಗಳು ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ತೂಕ ಪರೀಕ್ಷೆಗೆ ಒಳಪಡಬೇಕು. ಪ್ರಾಥಮಿಕ ಸುತ್ತಿಗೂ ಪೂರ್ವದಲ್ಲಿ ಬೆಳಿಗ್ಗೆ ಒಮ್ಮೆ ತೂಕ ತಪಾಸಣೆ ನಡೆದರೆ, ಅಂತಿಮ ಸುತ್ತಿಗೂ ಮುನ್ನ ಮತ್ತೊಂದು ಬಾರಿ ತೂಕ ತಪಾಸಣೆ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ ವಿನೇಶಾ ಅವರು ಪ್ರಾಥಮಿಕ ಸುತ್ತಿಗೂ ಮೊದಲು ತೂಕ ಪರೀಕ್ಷೆಗೆ ಒಳಪಟ್ಟಿದ್ದರು. ಆಗ ಅದು 50 ಕೆ.ಜಿ. ವಿಭಾಗಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಸಾಕಾಗಿತ್ತು. ಆದರೆ ಬುಧವಾರ ಬೆಳಿಗ್ಗೆ ಮತ್ತೊಂದು ಬಾರಿ ಪರೀಕ್ಷೆಗೆ ಒಳಪಟ್ಟ ವಿನೇಶಾ ಅವರ ದೇಹದ ತೂಕ 100 ಗ್ರಾಂ ಹೆಚ್ಚಾಗಿತ್ತು. ಇದು 50 ಕೆ.ಜಿ. ವಿಭಾಗದವರಿಗೆ ತುಸು ದುಬಾರಿ. 

ತೂಕ ಕಡಿಮೆ ಮಾಡಿದ ನಂತರ ದೇಹದ ಪೋಷಣೆ ಹೇಗೆ?

ಪಂದ್ಯ ನಡೆಯುವ ಬೆಳಿಗ್ಗೆ ತೂಕ ಪರೀಕ್ಷೆಗೆ ಒಳಪಟ್ಟ ನಂತರ, ಎಲೆಕ್ಟ್ರೊಲೈಟ್‌ ಹಾಗೂ ಸರಳ ಕಾರ್ಬೊಹೈಡ್ರೇಟ್ ಹಾಗೂ ಕೆಲವೊಂದು ಪ್ರೊಟೀನ್‌ ಸೇವಿಸುವುದು ಸಾಮಾನ್ಯ. ಅದರಲ್ಲೂ ಕುಸ್ತಿ ಮತ್ತು ಅಥ್ಲೀಟ್‌ನಲ್ಲಿ ಆರಂಭಿಕ ದಿನ ಮೂರು ಪಂದ್ಯಗಳನ್ನು ಆಡಬೇಕು. ಹೀಗಾಗಿ ದೇಹದ ತೂಕದ ಕಡೆ ಗಮನ ನೀಡುವುದರ ಜತೆಗೆ, ಪೌಷ್ಟಿಕಾಂಶದ ಕುರಿತೂ ಗಮನವನ್ನೂ ನೀಡಬೇಕು. ಪೋಷಕಾಂಶಗಳಿಗಾಗಿ ಹೆಚ್ಚಿನ ಆಹಾರವನ್ನೂ ಸೇವಿಸುವಂತಿಲ್ಲ. ಜತೆಗೆ ಅದನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ನಿರಂತರ ಆಟದಿಂದ ದೇಹಕ್ಕೆ ಏನು ನೀಡಿದರೂ ಸಂಪೂರ್ಣವಾಗಿ ಹೀರಿಕೊಳ್ಳುವಷ್ಟರ ಮಟ್ಟಿಗೆ ದಣಿದಿರುತ್ತದೆ.

ತೂಕ ಕಡಿತಕ್ಕಾಗಿ ಇರುವ ನಿಯಮಗಳೇನು?

ವಿಶ್ವ ಕುಸ್ತಿ ಒಕ್ಕೂಟ (UWW) ನಿಯಮ 8ರ ಪ್ರಕಾರ, ನಿರ್ದಿಷ್ಟ ತೂಕದ ಪಂದ್ಯಗಳಿಗೆ ವೈದ್ಯಕೀಯ ತಪಾಸಣಾ ತಂಡ ಆ ದಿನ ಬೆಳಿಗ್ಗೆ ತೂಕ ಪರೀಕ್ಷೆ ನಡೆಸಬೇಕು. ಅರ್ಹತೆ ಗಿಟ್ಟಿಸಿಕೊಂಡ ಕ್ರೀಡಾಪಟುಗಳು ಹಾಗೂ ರೆಪಷೇಜ್ ಆಟಗಾರರು 2ನೇ ದಿನ ಬೆಳಿಗ್ಗೆ ಮತ್ತೆ ತೂಕ ತಪಾಸಣೆಗೆ ಒಳಪಡಬೇಕು. ಆದರೆ ಇಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ವಿಶ್ವಕಪ್‌ ಹಾಗೂ ಇತರ ಅಂತರರಾಷ್ಟ್ರೀಯ ಪಂದ್ಯಗಳಿಗೆ 2 ಕೆ.ಜಿ. ತೂಕದವರೆಗೂ ರಿಯಾಯಿತಿ ಇರುತ್ತದೆ. ಇದು UWW ರ‍್ಯಾಂಕಿಂಗ್‌ ಪಂದ್ಯಾವಳಿಗೆ ಈ ರಿಯಾಯಿತಿ ಅನ್ವಯಿಸದು.

UWWನ ಚಾಪ್ಟರ್‌ 3ರ, ನಿಯಮ 11ರ ಪ್ರಕಾರ ಮೊದಲ ದಿನ ತಪಾಸಣೆಗೆ ಒಳಪಡುವ ಕ್ರೀಡಾಪಟುಗಳ ದೇಹದ ತೂಕ 30 ನಿಮಿಷಗಳವರೆಗೆ ಹಾಗೇ ಇರಬೇಕು. 2ನೇ ದಿನ ಈ ಮಿತಿಯನ್ನು 15 ನಿಮಿಷಗಳಿಗೆ ಇಳಿಸಲಾಗುತ್ತದೆ. 

ಈ ಹಿಂದೆ ಇದೇ ರೀತಿ ಅನರ್ಹಗೊಂಡವರು ಇವರು

ಒಲಿಂಪಿಕ್ಸ್‌ನಲ್ಲಿ ಇದೇ ರೀತಿ ತೂಕದ ಆಧಾರದಲ್ಲಿ ಅನರ್ಹಗೊಂಡ ಉದಾಹರಣೆಗಳು ಇದೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೇ ನಡೆದಿವೆ.

  • ಪುರುಷರ ಫ್ರೀಸ್ಟೈಲ್‌ 57 ಕೆ.ಜಿ. ವಿಭಾಗದಲ್ಲಿ ಸರ್ಬಿಯಾದ ಸ್ಟೆವನ್ ಮಿಕ್‌

  • ಪುರುಷರ ಫ್ರೀಸ್ಟೈಲ್ 65 ಕೆ.ಜಿ. ವಿಭಾಗದಲ್ಲಿ ಸ್ಲೊವಾಕಿಯಾದ ಬ್ಯಾಟೈರ್‌ಬೆಕ್‌ ಸುಕುಲೊವ್‌

  • ಪುರುಷರ ಲೈಟ್ ಹೆವಿವೈಟ್‌ (80ರಿಂದ 92 ಕೆ.ಜಿ.) ವಿಭಾಗದಲ್ಲಿ ರಷ್ಯಾದ ಡೇನಿಲಾ ಸೆಮೆನೊವ್‌

ವಿನೇಶಾ ಫೋಗಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.