ಗುವಾಹಟಿ : ಏಷ್ಯನ್ ಕ್ರೀಡಾಕೂಟದ ಮೇಲೆ ಕಣ್ಣು ನೆಟ್ಟಿರುವ ಅಥ್ಲೀಟ್‌ಗಳು ಇಲ್ಲಿ ಮಂಗಳವಾರ ಆರಂಭವಾಗಲಿರುವ ರಾಷ್ಟ್ರೀಯ 58ನೇ ಅಂತರರಾಜ್ಯ ಕ್ರೀಡಾಕೂಟದಲ್ಲಿ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.
ಪ್ರಮುಖ ಅಥ್ಲೀಟ್‌ಗಳಾದ ನೀರಜ್ ಛೋಪ್ರಾ, ತೇಜಸ್ವಿನ್ ಶಂಕರ್ ಮತ್ತು ಸೀಮಾ ಪೂನಿಯಾ ಈ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೂ ನಾಲ್ಕು ದಿನಗಳಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.
32 ರಾಜ್ಯಗಳಿಂದ ಒಟ್ಟು 700 ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು ಉತ್ತಮ ಸಾಮರ್ಥ್ಯ ತೋರುವವರು ಜಕಾರ್ತದಲ್ಲಿ ಆಗಸ್ಟ್ 18ರಿಂದ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಸುಲಭವಾಗಿ ಅರ್ಹತೆ ಗಳಿಸುವರು. ವಿನಾ ಕಾರಣ ಕೂಟಕ್ಕೆ ಗೈರಾಗುವವರನ್ನು ಏಷ್ಯನ್ ಕ್ರೀಡಾಕೂಟಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಭಾರತ ಅಥ್ಲೆಟಿಕ್ ಪೆಡರೇಷನ್ ಎಚ್ಚರಿಕೆ ನೀಡಿದೆ.
ನೀರಜ್ ಛೋಪ್ರಾ, ಸೀಮಾ ಪೂನಿಯಾ ಹಾಗೂ ಕತ್ತು ನೋವಿನಿಂದ ಬಳಲುತ್ತಿರುವ ತೇಜಸ್ವಿನ್ ಶಂಕರ್ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೊದಲೇ ತಿಳಿಸಿದ್ದರು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಧ್ಯಮ ದೂರದ ಓಟಗಾರ್ತಿ ಟಿಂಟು ಲೂಕಾ ಕೊನೆಯ ಕ್ಷಣದಲ್ಲಿ ಹಿಂಜರಿದಿದ್ದಾರೆ.
ಮೀಶ್ರ ರಿಲೇಗೆ ತಂಡ ಆಯ್ಕೆ: ಇದೇ ಮೊದಲ ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ಸೇರಿಸಿರುವ ಮಿಶ್ರ ರಿಲೇಗೂ ಭಾರತ ತಂಡದ ಆಯ್ಕೆ ಇಲ್ಲಿ ನಡೆಯಲಿದೆ. ಈ ವಿಭಾಗದಲ್ಲಿ ಭಾರತ ಪದಕ ಗೆಲ್ಲುವ ಭರವಸೆ ಇದೆ.
ವಿದೇಶದಲ್ಲಿ ನಡೆದ ವಿವಿಧ ಸ್ಪರ್ಧೆಗಳು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಪಸಾಗಿರುವ ಅನೇಕರು ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸುತ್ತಿದ್ದು ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ. ಮೊದಲ ದಿನ ಏಳು ಫೈನಲ್ ಸ್ಪರ್ಧೆಗಳು ಇವೆ.
ಬೆಂಗಳೂರು: ಕೂಟದಲ್ಲಿ ಅವಕಾಶ ಗಳಿಸುವ ಬಗ್ಗೆ ಆತಂಕದಲ್ಲಿದ್ದ ರಾಜ್ಯದ ಇಬ್ಬರು ಅಥ್ಲೀಟ್‌ಗಳ ಪೈಕಿ ಸ್ನೇಹಾ ಪಿ.ಜೆ ಅವರಿಗೆ ಸಿಹಿ ಮತ್ತು ಕಹಿ ಫಲ ಲಭಿಸಿದ್ದು ಜಾಯ್ಲಿನ್ ಭವಿಷ್ಯ ಅತಂತ್ರವಾಗಿದೆ.
ಸ್ಪ್ರಿಂಟರ್ ಸ್ನೇಹಾ ಅವರಿಗೆ 100 ಮೀಟರ್ಸ್ ಓಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು 200 ಮೀಟರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಜಾಯ್ಲಿನ್ ವಿಷಯದಲ್ಲಿ ಸೋಮವಾರ ರಾತ್ರಿ ವರೆಗೂ ನಿರ್ಧಾರ ಹೊರಬೀಳಲಿಲ್ಲ.
ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಡೊಂಡಿದ್ದರೂ ಕೂಟದಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ಜಾಯ್ಲಿನ್ ಮತ್ತು ಸ್ನೇಹಾ ಆರೋಪಿಸಿದ್ದರು. ಇವರಿಬ್ಬರ ಹೆಸರು ಬಿಟ್ಟುಹೋಗಿರುವುದು ಗೊತ್ತೇ ಆಗಲಿಲ್ಲ ಎಂದು ಹೇಳಿದ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜವೇಲು ‘ಅವಕಾಶ ನೀಡಲು ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದ್ದರು. ಹೀಗಾಗಿ ಇಬ್ಬರೂ ಗುವಾಹಟಿಗೆ ತೆರಳಿದ್ದರು.
ಆದರೆ ಸೋಮವಾರ ಸಂಜೆ ವರೆಗೂ ಅಥ್ಲೀಟ್‌ಗಳಿಗೆ ಸರಿಯಾದ ಮಾಹಿತಿ ಸಿಗಲಿಲ್ಲ. ಸ್ನೇಹಾಗೆ ಒಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವ ವಿಷಯ ರಾತ್ರಿ ತಿಳಿಸಲಾಗಿದೆ ಎಂದು ಅವರ ಕೋಚ್ ಯತೀಶ್ ಕುಮಾರ್ ಹೇಳಿದರು. ‘ನನಗೆ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ’ ಎಂದು ಜಾಯ್ಲಿನ್ ತಿಳಿಸಿದರು.
‘ಜಾಯ್ಲಿನ್ ಅವರಿಗೆ ಅವಕಾಶ ದೊರಕಿಸಿಕೊಡಲು ಸತತ ಪ್ರಯತ್ನ ನಡೆಯುತ್ತಿದೆ. ಅವರ ಸ್ಪರ್ಧೆಗೆ ಇನ್ನೂ ಎರಡು ದಿನ ಇರುವುದರಿಂದ ಭರವಸೆಯಲ್ಲಿದ್ದೇವೆ’ ಎಂದು ರಾಜವೇಲು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.