ADVERTISEMENT

ಕ್ರೀಡಾ ಪ್ರಶಸ್ತಿ ಹಿಂದಿರುಗಿಸುವ ಕ್ರಮಕ್ಕೆ ಯುವಿ ತಂದೆ ಯೋಗರಾಜ್ ಸಿಂಗ್ ಬೆಂಬಲ

ಏಜೆನ್ಸೀಸ್
Published 7 ಡಿಸೆಂಬರ್ 2020, 7:33 IST
Last Updated 7 ಡಿಸೆಂಬರ್ 2020, 7:33 IST
ಯುವರಾಜ್ ಸಿಂಗ್ ಹಾಗೂ ತಂದೆ ಯೋಗರಾಜ್ ಸಿಂಗ್
ಯುವರಾಜ್ ಸಿಂಗ್ ಹಾಗೂ ತಂದೆ ಯೋಗರಾಜ್ ಸಿಂಗ್   

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಬೃಹತ್ ಸ್ವರೂಪಕ್ಕೆ ಕಾಲಿಟ್ಟಿದೆ. ಈ ಮಧ್ಯೆ ರೈತರ ಚಳವಳಿಗೆ ವಿವಿಧ ವಲಯಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ರೈತರ ಬೇಡಿಕೆಗಳನ್ನು ಆಲಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವ ಕ್ರಮಕ್ಕೆ ಯೋಗರಾಜ್ ಸಿಂಗ್ ಬೆಂಬಲ ಸೂಚಿಸಿದರು.

ADVERTISEMENT

'ರೈತರು ಸರಿಯಾದ ವಿಷಯವನ್ನು ಬೇಡಿಕೆಯಿರಿಸಿದ್ದಾರೆ. ಸರಕಾರ ಅವರ ಅಹವಾಲು ಆಲಿಸಬೇಕು. ಸರಕಾರ ಪರಿಹಾರ ಸೂಚಿಸಬೇಕಾದ ಕಾಲ ಮೀರಿ ಹೋಗಿದೆ. ಹಾಗಾಗಿ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳನ್ನು ಹಿಂದಿರುಗಿಸುವ ಎಲ್ಲ ಕ್ರೀಡಾಪಟುಗಳಿಗೆ ನನ್ನ ಬೆಂಬಲ ನೀಡುತ್ತೇನೆ' ಎಂದು ಯೋಗರಾಜ್ ಸಿಂಗ್ ಹೇಳಿದರು.

'ಕ್ರೀಡಾಪಟುಗಳು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಾರೆ ಅಂದರೆ ಪ್ರಶಸ್ತಿಗೆ ಅವಮಾನ ಮಾಡಲಾಗುತ್ತಿದೆ ಎಂದರ್ಥವಲ್ಲ. ಇದು ಪ್ರತಿಭಟನಾ ನಿರತ ರೈತರೊಂದಿಗೆ ತಮ್ಮ ಒಗ್ಗಟ್ಟನ್ನು ತೋರಿಸುವ ಮಾರ್ಗವಾಗಿದೆ. ಅನೇಕ ವರ್ಷಗಳ ಕಠಿಣ ಪರಿಶ್ರಮದಿಂದ ಪ್ರಶಸ್ತಿಗಳನ್ನು ಪಡೆಯಲಾಗಿದೆ. ಅದನ್ನು ಅಷ್ಟು ಸುಲಭದಲ್ಲಿ ಪಡೆದಿಲ್ಲ. ಹಾಗಾಗಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದರೆ, ನಾನು ಅವರನ್ನು ಬೆಂಬಲಿಸುತ್ತೇನೆ. ಅವರು ಸರಿಯಾದ ವಿಷಯವನ್ನು ಒತ್ತಾಯಿಸುತ್ತಿದ್ದಾರೆ' ಎಂದವರು ವಿವರಿಸಿದರು.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಪಂಜಾಬ್ ಹಾಗೂ ಹರಿಯಾಣದ ಹಲವಾರು ಕ್ರೀಡಾಪಡುಗಳು ತಮ್ಮ ಪ್ರಶಸ್ತಿಗಳನ್ನು (ಪದ್ಮ, ದ್ರೋಣಾಚಾರ್ಯ ಮತ್ತು ಅರ್ಜುನ) ಹಿಂದಿರುಗಿಸುತ್ತಿದ್ದಾರೆ. ಬಾಕ್ಸರ್ ಹಾಗೂ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್, ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಎಚ್ಚರಿಸಿದ್ದರು.

ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳಿದ ವಿಜೇಂದರ್ ಬೆಂಬಲ ಸೂಚಿಸಿದರು. ಹರಿಯಾಣದವರಾದ ವಿಜೇಂದರ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.