ಇದೇ ಪ್ಯಾರಿಸ್‌ನಲ್ಲಿ 1900ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಶುಕ್ರವಾರ ಆರಂಭವಾಗಲಿರುವ 33ನೇ ಒಲಿಂಪಿಕ್ ಕೂಟದಲ್ಲಿ ಮಹಿಳಾ ಸ್ಪರ್ಧಿಗಳು ಮತ್ತೊಂದು ಇತಿಹಾಸ ನಿರ್ಮಿಸಲಿದ್ದಾರೆ. ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಲಿಂಗ ಸಮಾನತೆಯು ನೆಲೆಗೊಂಡಿದೆ. ಒಟ್ಟು ಸ್ಪರ್ಧಿಗಳ ಸಂಖ್ಯೆಯ ಶೇ 50ರಷ್ಟು ಮಹಿಳೆಯರಿದ್ದಾರೆ.
ಇದರೊಂದಿಗೆ ಆಧುನಿಕ ಒಲಿಂಪಿಕ್ಸ್ ಪಿತಾಮಹ ಪಿಯರೆ ಡಿ ಕೊಬರ್ತಿ ಅವರ ತವರು ನೆಲವು ಹೊಸದೊಂದಿಗೆ ಕ್ರಾಂತಿಗೆ ವೇದಿಕೆಯಾಗಲಿದೆ. ಅಥೆನ್ಸ್‌ನಲ್ಲಿ 1896ರಲ್ಲಿ ನಡೆದಿದ್ದ ಮೊದಲ ಒಲಿಂಪಿಕ್ಸ್ ನಡೆದಾಗ ಮಹಿಳೆಯರಿಗಾಗಿ ಸ್ಪರ್ಧೆಗಳು ಇರಲಿಲ್ಲ. ನಾಲ್ಕು ವರ್ಷಗಳ ನಂತರ ಪ್ಯಾರಿಸ್‌ನಲ್ಲಿ ನಡೆದ ಕೂಟದಲ್ಲಿ ಸ್ವಿಟ್ಜರ್‌ಲೆಂಡ್ ದೇಶದ ಹೆಲೆನ್ ಡಿ ಪಾರ್ಟಲೆಸ್ ಅವರು ಮೊದಲ ಮಹಿಳಾ ಕ್ರೀಡಾಪಟುವಾಗಿ ಕಣಕ್ಕಿಳಿದರು. ಅವರು ಸೇಲಿಂಗ್ ಕ್ರೀಡೆಯಲ್ಲಿದ್ದರು. ಅದೇ ಕೂಟದಲ್ಲಿ ಬ್ರಿಟನ್‌ನ ಶಾರ್ಲೆಟ್ ಕೂಪರ್ ಅವರು ವೈಯಕ್ತಿಕ ಮಹಿಳೆಯರ ಟೆನಿಸ್‌ನಲ್ಲಿ ಪ್ರಶಸ್ತಿ ಜಯಿಸಿದ ಮೊದಲ ಮಹಿಳೆಯಾದರು. ಕೂಟದಲ್ಲಿ ಶೇ 2.2ರಷ್ಟು ಮಹಿಳಾ ಸ್ಪರ್ಧಿಗಳು ಇದ್ದರು. ಇದಾದ ನಂತರ ಪ್ರತಿಯೊಂದು ಒಲಿಂಪಿಕ್ಸ್‌ನಲ್ಲಿಯೂ ಮಹಿಳೆಯರ ಸಂಖ್ಯೆ ಏರುತ್ತ ಸಾಗಿತು. ಹಲವು ಮಹಿಳೆಯರು ಸ್ಪೂರ್ತಿಯ ಸೆಲೆಯಾದರು.
ಪೋಲಿಯೊದಿಂದ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿದ್ದರೂ ಛಲಬಿಡದೇ ಬೆಳೆದ ವಿಲ್ಮಾ ರುಡಾಲ್ಫ್ (1960ರ ರೋಮ್ ಒಲಿಂಪಿಕ್ಸ್‌ನಲ್ಲಿ 100ಮೀ, 200 ಮೀ ಮತ್ತು 4X100 ಮೀ ಓಟಗಳಲ್ಲಿ ಚಿನ್ನದ ಪದಕ ಜಯಿಸಿ ದಾಖಲೆ ಬರೆದರು), ಅಥ್ಲೀಟ್ ಜಾಕಿ ಜಾಯ್ನರ್ ಟೆನಿಸ್ ಅಂಗಳದ ಸಿಂಹಿಣಿ ಸೆರೆನಾ ವಿಲಿಯಮ್ಸ್, ಅಮೆರಿಕದ ಜಿಮ್ನಾಸ್ಟ್ ಸಿಮೋನ್ ಬೈಲ್ಸ್, ಭಾರತದ ಪಿ.ಟಿ. ಉಷಾ, ಮೇರಿ ಕೋಮ್, ಕರ್ಣಂ ಮಲ್ಲೇಶ್ವರಿ, ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ಮೀರಾಬಾಯಿ ಚಾನು ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.
ಸ್ಪರ್ಧಿಗಳ ಸಂಖ್ಯೆಯಷ್ಟೇ ಅಲ್ಲ. ಪ್ಯಾರಾಲಿಂಪಿಕ್ಸ್, ಲಾಂಛನ ಮತ್ತಿತರ ವಿಷಯಗಳಲ್ಲಿಯೂ ಲಿಂಗ ಸಮಾನತೆಗೆ ಆದ್ಯತೆ ನೀಡಲಾಗಿದೆ. ಮಹಿಳೆಯರ ಭಾಗವಹಿಸುವಿಕೆ ಮತ್ತು ಸ್ಪರ್ಧೆಗಳು ಹೆಚ್ಚಿರುವ ಒಂದು ಕಡೆ ಆಶಾದಾಯಕ ಬೆಳವಣಿಗೆಯಾಗಿದೆ. ಆದರೂ ಈ ಕಾಲದಲ್ಲಿ ಸ್ತ್ರೀಯರ ಬೆಳವಣಿಗೆ ಮುಕ್ತ ಮತ್ತು ಆರೋಗ್ಯಕರ ವಾತಾವರಣ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗದು.
ಆದ್ದರಿಂದಲೇ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿರುವ ಜಿಮ್ನಾಸ್ಟ್ ಸಿಮೊನ್ ಬೈಲ್ಸ್ ಮತ್ತು ಭಾರತದ ಕುಸ್ತಿಪಟು ವಿನೇಶಾ ಫೋಗಾಟ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಬ್ಬರೂ ಕೂಡ ಮಹಿಳಾ ಕ್ರೀಡಾಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಿದವರು. ಬೈಲ್ಸ್ ಮತ್ತು ಸಂಗಡಿಗರು ತಮ್ಮ ತಂಡದ ವೈದ್ಯನೊಬ್ಬನ ದೌರ್ಜನ್ಯಗಳನ್ನು ಬಯಲಿಗೆಳೆದರು. ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದರು. ತಪ್ಪಿತಸ್ಥ ಜೈಲು ಸೇರಿದ.
ಇತ್ತ ಭಾರತದಲ್ಲಿ ಹೋದ ವರ್ಷ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್ ಮತ್ತು ಕೆಲವು ಕೋಚ್‌ಗಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ನಡೆದ ಹೋರಾಟದಲ್ಲಿ ವಿನೇಶಾ ಫೋಗಾಟ್ ಮುಂಚೂಣಿಯಲ್ಲಿದ್ದರು. ಅವರೊಂದಿಗೆ ರಿಯೊ ಒಲಿಂಪಿಕ್ ಪದಕವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ, ರವಿ ದಹಿಯಾ ಮತ್ತಿತರರು ಜೊತೆ ನೀಡಿದ್ದರು. ವರ್ಷವಿಡೀ ಈ ಪ್ರತಿಭಟನೆ ನಡೆಯಿತು. ಆದರೆ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ.
ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದಿದ್ದ ಸಿಮೊನ್ ಬೈಲ್ಸ್ 2020ರ ಟೋಕಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ಖಿನ್ನತೆಗೊಳಗಾಗಿದ್ದರು. ತಮ್ಮ ಕ್ರೀಡಾಜೀವನದ ಅತ್ಯಂತ ಕೆಟ್ಟ ಸಮಯವನ್ನು ಅವರು ಅನುಭವಿಸಿದ್ದರು. ಆ ಕೂಟದಲ್ಲಿ ಎರಡು ಪದಕ ಜಯಿಸಿದರೂ ಅವರ ಸಾಮರ್ಥ್ಯದಲ್ಲಿ ಅಸ್ಥಿರತೆ ಎದ್ದುಕಂಡಿತು. ಆದರೆ ಈಗ ಅದರಿಂದ ಪುಟಿದೆದ್ದು ಬಂದಿದ್ದಾರೆ. ಕಪ್ಪು ಜನಾಂಗದ ಈ ಪ್ರತಿಭೆ ಮತ್ತೊಮ್ಮೆ ಚಿನ್ನದ ಹೊಳೆ ಹರಿಸಿದರೆ ಮುಂದಿನ ಪೀಳಿಗೆಗಳಿಗೆ ಹೊಸ ಸ್ಫೂರ್ತಿ ಸಿಗುವುದು ಖಚಿತ. ವಿನೇಶಾ ಅವರೂ ಅಷ್ಟೇ ಹಿಂದಿನ ಕಹಿ ಘಟನೆಗಳನ್ನು ಮೀರಿ ನಿಂತು ಪದಕ ಜಯಿಸಿದರೆ, ಭಾರತ ಕ್ರೀಡೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಮತ್ತೊಂದು ಹೊಸ ಅಧ್ಯಾಯ ಸೇರ್ಪಡೆಗೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.