ADVERTISEMENT

'ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ': ಭಾರತ ಒಲಿಂಪಿಕ್ ಸಂಸ್ಥೆಯಲ್ಲಿ ಅಂತಃಕಲಹ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 4:56 IST
Last Updated 6 ಏಪ್ರಿಲ್ 2024, 4:56 IST
<div class="paragraphs"><p>(ಸಾಂಕೇತಿಕ ಚಿತ್ರ)</p></div>

(ಸಾಂಕೇತಿಕ ಚಿತ್ರ)

   

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆಯಲ್ಲಿ ತಲೆದೋರಿರುವ ಅಂತಃಕಲಹ ಶುಕ್ರವಾರ ಹೊಸ ತಿರುವು ಪಡೆದಿದೆ. ‘ಅನಧಿಕೃತ ವ್ಯಕ್ತಿಗಳು’ ಪ್ರಧಾನ ಕಚೇರಿಯೊಳಗೆ ಪ್ರವೇಶಿಸಬಾರದು ಎನ್ನುವ ನೋಟಿಸ್‌ಅನ್ನು ಕಾರ್ಯಕಾರಿ ಸಮಿತಿಯ ಒಂಬತ್ತು ಸದಸ್ಯರು ಕಚೇರಿ ಆವರಣದಲ್ಲಿ ಹಚ್ಚಿದ್ದಾರೆ.

ಇತ್ತೀಚೆಗಷ್ಟೇ ನೇಮಕಗೊಂಡ ಇಬ್ಬರು ಹೊಸ ಅಧಿಕಾರಿಗಳನ್ನು ಉದ್ದೇಶಿಸಿ ಈ ನೋಟಿಸ್‌ ಅನ್ನು ಐಒಎ  ಅಂಟಿಸಲಾಗಿದೆ. ಮಂಗಳವಾರ ಈ ಸದಸ್ಯರು ಸಭೆ ನಡೆಸಿದ ನಂತರ ಈ ಕ್ರಮ ಕೈಗೊಂಡಿದ್ದಾರೆ.

ADVERTISEMENT

ಜನವರಿ 6ರಂದು ರಘುರಾಮ್‌ ಅಯ್ಯರ್ ಅವರನ್ನು ಸಿಇಒ ಆಗಿ ನೇಮಕ ಮಾಡಿದ ನಂತರ ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಮತ್ತು ಕಾರ್ಯಕಾರಿ ಸಮಿತಿಯ (ಎಕ್ಸಿಕ್ಯೂಟಿವ್‌ ಕೌನ್ಸಿಲ್‌) ಬಹುತೇಕ ಸದಸ್ಯರ ನಡುವೆ ವೈಮನಸ್ಸು ತಾಂಡವವಾಡುತ್ತಿದೆ. ಅಯ್ಯರ್‌ ಅದಕ್ಕೆ ಮೊದಲು ಐಪಿಎಲ್‌ ತಂಡವಾದ ರಾಜಸ್ಥಾನ ರಾಯಲ್ಸ್‌ ಸಿಇಒ ಆಗಿದ್ದರು.

ಸಮ್ಮತಿಯಿಲ್ಲದ, ಅಮಾನತುಗೊಂಡ ಸಿಬ್ಬಂದಿ ಕಚೇರಿ ಪ್ರವೇಶಿಸಿ, ಸಿಬ್ಬಂದಿ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇದು ಅಕ್ರಮ ಮತ್ತು ಅತಿಕ್ರಮ ಪ್ರವೇಶಕ್ಕೆ ಕಾರಣವಾಗುತ್ತದೆ’ ಎಂದು ಅದರಲ್ಲಿ ಹೇಳಲಾಗಿದೆ.

ನೋಟಿಸ್‌ಗೆ ಹಿರಿಯ ಉಪಾಧ್ಯಕ್ಷ ಅಜಯ್‌ ಪಟೇಲ್‌, ಉಪಾಧ್ಯಕ್ಷರಾದ ರಾಝಲಕ್ಷ್ಮಿ ಸಿಂಗ್‌ದೇವ್‌ ಮತ್ತು ಗಗನ್‌ ನಾರಂಗ್, ಖಜಾಂಚಿ ಸಹದೇವ್ ಯಾದವ್, ಸದಸ್ಯರಾದ ಡೋಲಾ ಬ್ಯಾನರ್ಜಿ, ಹರಪಾಲ್ ಸಿಂಗ್‌, ಯೋಗೇಶ್ವರ ದತ್‌, ಅಮಿತಾಭ್ ಶರ್ಮಾ ಮತ್ತು ಭೂಪಿಂದರ್ ಸಿಂಗ್‌ ಬಾಜ್ವಾ ಅವರು ನೋಟಿಸ್‌ಗೆ ಸಹಿ ಮಾಡಿದ್ದಾರೆ.

ಉಷಾ ಸದ್ಯ ನಗರದಲ್ಲಿಲ್ಲ. ಆದರೆ ಅವರಿಗೆ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಸಿಇಒ ಆಗಿ ಅಯ್ಯರ್ ಅವರನ್ನು ನೇಮಕ ಮಾಡಿದ ಕೆಲವೇ ದಿನಗಳ ನಂತರ ಸಮಿತಿಯ 15 ಸದಸ್ಯರ ಪೈಕಿ 12 ಮಂದಿ, ‘ಈ ನೇಮಕಕ್ಕೆ ತಮ್ಮ ಮೇಲೆ ಒತ್ತಡ ತರಲಾಗಿದೆ’ ಎಂದು ದೂರಿದ್ದರು. ಇದಕ್ಕೆ ಪ್ರತಿಯಾಗಿ, ‘ಇಂಥ ಆರೋಪ ನಾಚಿಕೆಗೇಡಿದ್ದು’ ಎಂದು ಭಾರತೀಯ ಅಥ್ಲೆಟಿಕ್ಸ್‌ನ ದಂತಕಥೆ ಉಷಾ ಟೀಕಿಸಿದ್ದರು.

ಅಯ್ಯರ್‌ ಅವರ ನೇಮಕ ಅನೂರ್ಜಿತ ಎಂದು ಹೇಳಿ ಸಮಿತಿಯ ಬಹುಸಂಖ್ಯಾತ ಸದಸ್ಯರು ಅಮಾನತು ಪತ್ತಕ್ಕೆ ಸಹಿ ಮಾಡಿದ್ದರು. ಐಒಎ ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಸಿಸ್ಟೆಂಟ್‌ ಆಗಿ ಅಜಯ್ ನಾರಂಗ್ ಅವರ ನೇಮಕವನ್ನೂ ರದ್ದುಪಡಿಸಲಾಗಿದೆ ಎಂದು ಈ ಸದಸ್ಯರು ಹೇಳಿದ್ದರು.

ಆದರೆ ಉಷಾ ಅವರಿಂದ ನೇಮಕಗೊಂಡ ನಂತರ ಈ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಸಿಇಒ ಬಗ್ಗೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ಉಷಾ ಸಮರ್ಥನೆ ನೀಡಿದ್ದರು.

ಅಮಾನತು ಬಗ್ಗೆ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದೂ ಉಷಾ ಹೇಳಿದ್ದರು.

ಈ ರೀತಿ ಹಟದ ಧೋರಣೆ ಮುಂದುವರಿಸಿದರಲ್ಲಿ ಪಟ್ಟುಹಿಡಿಯುವುದನ್ನು ಮುಂದುವರಿಸಿದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮಧ್ಯಪ್ರವೇಶಿಸಿ ಭಾರತವನ್ನು ಅಮಾನತು ಮಾಡಬಹುದು ಎಂದು ಉಷಾ, ಕಾರ್ಯಕಾರಿ ಸಮಿತಿ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.