ಈಂಡ್‌ಹೊವೆನ್:ಹೊಂದಾಣಿಕೆಯ ಆಟವಾಡಿದ ಭಾರತ ತಂಡ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಗುರುವಾರ 3–0 ಗೋಲುಗಳಿಂದ ಅರ್ಜೆಂಟೀನಾ ತಂಡವನ್ನು ಮಣಿಸಿತು.
ಬುಧವಾರ ನಡೆದಿದ್ದ ಪಂದ್ಯದಲ್ಲಿ 1–4 ರಿಂದ ನೆದರ್ಲೆಂಡ್ಸ್ ಎದುರು ಮುಗ್ಗರಿಸಿದ್ದ ಹರ್ಮನ್‌ಪ್ರೀತ್ ಬಳಗ, ಆ ನಿರಾಸೆ ಮರೆತು ಪುಟಿದೆದ್ದು ನಿಲ್ಲುವಲ್ಲಿ ಯಶ ಕಂಡಿತು.
ನಾಯಕ ಹರ್ಮನ್‌ಪ್ರೀತ್ ಸಿಂಗ್ (33ನೇ ನಿ.), ಅಮಿತ್ ರೋಹಿದಾಸ್ (39) ಮತ್ತು ಅಭಿಷೇಕ್ (59) ಅವರು ಭಾರತದ ಪರ ಗೋಲು ಗಳಿಸಿದರು.
ಈ ಗೆಲುವಿನ ಮೂಲಕ ಭಾರತ 14 ಪಂದ್ಯಗಳಿಂದ 27 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನಕ್ಕೇರಿದೆ. 12 ಪಂದ್ಯಗಳಿಂದ 26 ಪಾಯಿಂಟ್ಸ್ ಸಂಗ್ರಹಿಸಿರುವ ಬ್ರಿಟನ್ ಎರಡನೇ ಸ್ಥಾನದಲ್ಲಿದೆ.
ನೆದರ್ಲೆಂಡ್ಸ್ ಎದುರು ಸೋಲು: ಆರಂಭದ ಮುನ್ನಡೆಯ ಹೊರತಾಗಿಯೂ ಭಾರತ ತಂಡ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು ಸೋತಿತ್ತು.
ಹರ್ಮನ್‌ಪ್ರೀತ್ ಸಿಂಗ್ (11ನೇ ನಿಮಿಷ) ಭಾರತದ ಏಕೈಕ ಗೋಲನ್ನು ಗಳಿಸಿದ್ದರು. ಪ್ರವಾಸಿ ತಂಡಕ್ಕೆ ಇದರ ಜೊತೆ ಐದು ಪೆನಾಲ್ಟಿ ಕಾರ್ನರ್ ಮತ್ತು ಕೊನೆಗಳಿಗೆಯಲ್ಲಿ ಒಂದು ಪೆನಾಲಿ ಸ್ಟ್ರೋಕ್ ಅವಕಾಶ ದೊರಕಿತ್ತು. ಆದರೆ ಈ ಅವಕಾಶಗಳಲ್ಲಿ ಗೋಲು ಗಳಿಸಲು ವಿಫಲವಾಯಿತು.
ಪೆಪಿನ್ ರೆವೆಂಗ (17ನೇ ನಿಮಿಷ), ಬೋರಿಸ್ ಬುರ್ಕಾರ್ಟ್ (40ನೇ ನಿಮಿಷ) ಮತ್ತು ಡ್ಯುಕೊ ಟೆಲ್ಜೆನ್‌ಕೆಂಪ್ (41 ಮತ್ತು 58ನೇ ನಿಮಿಷ) ಅವರು ಆತಿಥೇಯ ತಂಡದ ಪರ ಗೋಲುಗಳನ್ನು ದಾಖಲಿಸಿದರು.
ಲಂಡನ್‌ನಲ್ಲಿ ಕಳೆದ ವಾರ ಬೆನ್ನುಬೆನ್ನಿಗೆ ಎರಡು ಗೆಲುವುಗಳನ್ನು ದಾಖಲಿಸಿದ್ದ ಭಾರತ ತಂಡ ಉತ್ತಮ ಆರಂಭ ಪಡೆದು ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಪಡೆದಿತ್ತು. 11ನೇ ನಿಮಿಷ ನೆದರ್ಲೆಂಡ್ಸ್ ಆಟಗಾರನ ‘ಫೂಟ್ ಫೌಲ್’ನಿಂದಾಗಿ ಭಾರತಕ್ಕೆ ‘ಪೆನಾಲ್ಟಿ ಸ್ಟ್ರೋಕ್’ ಅವಕಾಶ ದೊರೆಯಿತು. ಉತ್ತಮ ಲಯದಲ್ಲಿರುವ ಹರ್ಮನ್ ಪ್ರೀತ್ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದು ಈ ಋತುವಿನಲ್ಲಿ ಭಾರತ ತಂಡದ ನಾಯಕ ಗಳಿಸಿದ 17ನೇ ಗೋಲು.
ಆದರೆ ತವರಿನ ಪ್ರೇಕ್ಷಕರ ಬೆಂಬಲ ಪಡೆದ ನೆದರ್ಲೆಂಡ್ಸ್ ತಂಡ ಎರಡನೇ ಕ್ವಾರ್ಟರ್‌ನಲ್ಲಿ ಮೇಲುಗೈ ಸಾಧಿಸಿತು. ಪೆಪಿನ್ ರೆಯೆಂಗ 17ನೇ ನಿಮಿಷ ಎತ್ತರದಿಂದ ಬಂದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದು ಭಾರತದ ರಕ್ಷಣಾ ಕೋಟೆ ಭೇದಿಸಿ ಸ್ಕೋರ್ ಸಮ ಮಾಡಿದರು. ನಂತರ ಆತಿಥೇಯರೇ ಬಹಳ ಕಾಲ ಚೆಂಡಿನ ನಿಯಂತ್ರಣ ಹೊಂದಿದ್ದರು.
ಅರ್ಜೆಂಟೀನಾ ವಿರುದ್ಧ ಗೆಲುವು
ಭಾರತ ತಂಡ ಗುರುವಾರ ನಡೆದ ಪಂದ್ಯದಲ್ಲಿ 3–0 ಗೋಲುಗಳಿಂದ ಅರ್ಜೆಂಟೀನಾ ತಂಡವನ್ನು ಮಣಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ (33ನೇ ನಿ.) ಅಮಿತ್ ರೋಹಿದಾಸ್ (39) ಮತ್ತು ಅಭಿಷೇಕ್ (59) ಅವರು ಭಾರತ ತಂಡದ ಪರ ಗೋಲು ಗಳಿಸಿದರು. ಈ ಗೆಲುವಿನ ಮೂಲಕ ಭಾರತ 27 ಪಾಯಿಂಟ್ಸ್‌ಗಳೊಂದಿಗೆ ಬ್ರಿಟನ್ (26 ಪಾಯಿಂಟ್ಸ್) ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.