ವಾರಾಣಸಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ.
ಒಕ್ಕೂಟದ ಏಳು ಹುದ್ದೆಗಳಿಗೆ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯಿತು. ಆಯ್ಕೆಯಾದ ಏಳು ಅಭ್ಯರ್ಥಿಗಳು ನಂತರ ನರಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಸಾಹಿಲ್ (ದೆಹಲಿ), ಎ.ಎಸ್.ಸ್ಮಿತಾ (ಕೇರಳ), ಭಾರತಿ ಭಾಘೀ (ಉತ್ತರಪ್ರದೇಶ), ಖುಷ್ಬೂ ಎಸ್. ಪವಾರ್ (ಗುಜರಾತ್), ನಿಕ್ಕಿ (ಹರಿಯಾಣ) ಹಾಗೂ ಶ್ವೇತಾ ದುಬೇ (ಪಶ್ಚಿಮ ಬಂಗಾಳ) ಸಮಿತಿಗೆ ಆಯ್ಕೆಯಾದ ಇತರ ಸದಸ್ಯರು.
ಅರ್ಜುನ ಪ್ರಶಸ್ತಿ ವಿಜೇತ ಹಾಗೂ 2010ರ ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ನರಸಿಂಗ್ ಅವರು 74 ಕೆ.ಜಿ. ವಿಭಾಗದಲ್ಲಿ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಆರಂಭಿಕ ಪಂದ್ಯದಲ್ಲಿ ಪರಾಭವಗೊಂಡಿದ್ದರು.
2016ರ ಒಲಿಂಪಿಕ್ಸ್ ಸಂದರ್ಭದಲ್ಲಿ, ನರಸಿಂಗ್ ಅವರು ಸುದ್ದಿಯಲ್ಲಿದ್ದರು. ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದರು. ಆಗ ನರಸಿಂಗ್ ಅವರಿಗೆ ಅವಕಾಶ ಒದಗಿಬಂದಿತ್ತು. ಇದನ್ನು ಪ್ರಶ್ನಿಸಿ ಸುಶೀಲ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅದು ತಿರಸ್ಕೃತಗೊಂಡಿತ್ತು. ಅದರಿಂದಾಗಿ ನರಸಿಂಗ್ ಅವರು ರಿಯೋ ಒಲಿಂಪಿಕ್‌ಗೆ ಪ್ರವೇಶ ಪಡೆದರು.
ಆದರೆ ಆಘಾತಕಾರಿ ವಿಷಯವೆಂದರೆ, ನರಸಿಂಗ್ ಅವರು ಉದ್ದೀಪನಮದ್ದು ಸೇವನೆ ಪರೀಕ್ಷೆಯಲ್ಲಿ ಎರಡು ಬಾರಿ ವಿಫಲರಾದರು. ವಿಚಾರಣೆ ನಡೆಸಿದ ಕ್ರೀಡಾ ನ್ಯಾಯಾಲಯವು ನರಸಿಂಗ್ ಅವರ ಮೇಲೆ 4 ವರ್ಷಗಳ ನಿಷೇಧ ಹೇರಿತು.
ಸಮಿತಿ ಇಲ್ಲದ ಕಾರಣ, ಕ್ರೀಡೆಗಾಗಿ ಇರುವ ಅಂತರರಾಷ್ಟ್ರೀಯ ಸಂಸ್ಥೆಯಾದ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW) ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಷನ್‌ಗೆ ನಿಷೇಧ ಹೇರಿತ್ತು. ಇರುವ ಸಮಸ್ಯೆ ಬಗೆಹರಿಸುವಂತೆ ಸಂಜಯ್ ಸಿಂಗ್ ನೇತೃತ್ವದಲ್ಲಿ ರಾಷ್ಟ್ರೀಯ ಒಕ್ಕೂಟವು, ಅಥ್ಲೀಟ್‌ಗಳ ಆಯೋಗವನ್ನು ಕೋರಿತ್ತು.
ಮಹಿಳಾ ಕುಸ್ತಿಪಟುಗಳಿಗೆ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಭಾರತದ ಮುಂಚೂಣಿಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಹಾಗೂ ವಿನೆಷಾ ಪೊಗಟ್ ಅವರು ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಒಕ್ಕೂಟವನ್ನು ಅಮಾನತಿನಲ್ಲಿಟ್ಟ ಕೇಂದ್ರ ಕ್ರೀಡಾ ಇಲಾಖೆಯು, ಮಧ್ಯಂತರ ಸಮಿತಿಯೊಂದನ್ನು ರಚಿಸಿತ್ತು. ಅಂತರರಾಷ್ಟ್ರೀಯ ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಕಳೆದ ಆ. 23ರಿಂದ ಅಮಾನತು ಮಾಡಿತ್ತು.
ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅವರು ಒಕ್ಕೂಟಕ್ಕೆ ಆಯ್ಕೆಯಾದ ನಂತರ, ಸಂಸ್ಥೆ ಮೇಲಿರುವ ಅಮಾನತು ಆದೇಶವನ್ನು ತೆರವುಗೊಳಿಸುವಂತೆ ಅಂತರರಾಷ್ಟ್ರೀಯ ಒಕ್ಕೂಟವನ್ನು ಕೋರಿದ್ದರು. ಸಮಿತಿಯು ಫೆಬ್ರುವರಯಲ್ಲಿ ಸಭೆ ಸೇರಿ, ನಿರ್ಧಾರ ಕೈಗೊಂಡರೂ, ಅಥ್ಲೀಟ್ ಆಯೋಗವನ್ನು 2024ರ ಜುಲೈ 1ರೊಳಗಾಗಿ ರಚಿಸಬೇಕು ಎಂಬ ಷರತ್ತು ವಿಧಿಸಿತ್ತು. ಈ ಸಮಿತಿಯು ಕ್ರಿಯಾಶೀಲವಾಗಿರಬೇಕು. ಕಳೆದ ನಾಲ್ಕು ವರ್ಷದೊಳಗೆ ಕ್ರೀಡೆಯಿಂದ ನಿವೃತ್ತಿಪಡೆದ ಕ್ರೀಡಾಪಟುಗಳು ಮಾತ್ರ ಸಮಿತಿಯಲ್ಲಿರಬೇಕು ಎಂಬ ಷರತ್ತು ಇತ್ತು. ಅದರಂತೆಯೇ ಈ ಸಮಿತಿಯು ಬುಧವಾರ ರಚನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.