ಅಸ್ತಾನಾ (ಕಜಕಸ್ತಾನ): ಭಾರತದ ಜಾದುಮಣಿ ಸಿಂಗ್, ನಿಖಿಲ್, ಅಜಯ್ ಕುಮಾರ್ ಮತ್ತು ಅಂಕುಶ್ ಅವರು ಗುರುವಾರ ಎಎಸ್‌ಬಿಸಿ ಏಷ್ಯನ್ 22 ವರ್ಷದೊಳಗಿನವರ ಮತ್ತು ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನೊಡನೆ ಸೆಮಿಫೈನಲ್‌ಗೆ ಮುನ್ನಡೆದರು.
51 ಕೆ.ಜಿ ವಿಭಾಗದ ಕ್ವಾಟರ್ ಫೈನಲ್‌ನಲ್ಲಿ ಜಾದುಮಣಿ 5–0ಯಿಂದ ಭೂತಾನ್‌ನ ಫುಂಟ್‌ಶೋ ಕಿನ್ಲೆ ಅವರನ್ನು ಮಣಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು.
ನಿಖಿಲ್ ಅವರು 57 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಅದೇ ರೀತಿಯ ಪ್ರಾಬಲ್ಯ ಪ್ರದರ್ಶಿಸಿದರು. ಅವರು 4–0 ಅಂತರದಿಂದ ಉಜ್ಬೇಕಿಸ್ತಾನದ ಭಕ್ತಿಯೊರೊವ್ ಆಯುಬ್‌ಖೋನ್ ಅವರನ್ನು ಸೋಲಿಸಿದರು.
ಅಜಯ್ (63.5 ಕೆ.ಜಿ) ಮತ್ತು ಅಂಕುಶ್ (71 ಕೆ.ಜಿ) ತಮ್ಮ ವಿಭಾಗಗಳಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಮುನ್ನಡೆದರು. ಅಜಯ್ ಅವರು ಮಂಗೋಲಿಯಾದ ದಾಮ್‌ದಿಂಡೋರ್ಜ್ ವಿರುದ್ಧ ಗೆಲುವು ಸಾಧಿಸಿದರೆ, ಅಂಕುಶ್ ಅವರು ಕೊರಿಯಾದ ಲೀ ಜು ಸಾಂಗ್ ಅವರನ್ನು ಮಣಿಸಿದರು.
ಆದರೆ, 54 ಕೆ.ಜಿ ವಿಭಾಗದಲ್ಲಿ ಆಶಿಶ್ ನಿರಾಸೆ ಅನುಭವಿಸಿದರು. ಮಂಗೋಲಿಯಾದ ಓಯುನ್ ಎರ್ಡೆನೆ 3–2 ಅಂತರದಲ್ಲಿ ಭಾರತದ ಬಾಕ್ಸರ್ ವಿರುದ್ಧ ಜಯ ಗಳಿಸಿದರು.
ಬುಧವಾರ ತಡರಾತ್ರಿ ನಡೆದ ಯುವ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಆರ್ಯನ್ (92 ಕೆ.ಜಿ), ನಿಶಾ (52 ಕೆ.ಜಿ), ಆಕಾಂಶಾ ಫಲಸ್ವಾಲ್ (70 ಕೆ.ಜಿ) ಮತ್ತು ರುದ್ರಿಕಾ (75 ಕೆ.ಜಿ) ತಮ್ಮ ವಿಭಾಗಗಳಲ್ಲಿ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.