ADVERTISEMENT

ಷರತ್ತಿನ ಮೇಲೆ ಚಳಿಗಾಲದ ಒಲಿಂಪಿಕ್ಸ್‌ ಆತಿಥ್ಯ

ಏಜೆನ್ಸೀಸ್
Published 24 ಜುಲೈ 2024, 16:00 IST
Last Updated 24 ಜುಲೈ 2024, 16:00 IST
   

ಷರತ್ತಿನ ಮೇಲೆ ಚಳಿಗಾಲದ ಒಲಿಂಪಿಕ್ಸ್‌ ಆತಿಥ್ಯ

ಪ್ಯಾರಿಸ್‌: ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಬುಧವಾರ 2030ರ ಚಳಿಗಾಲ ಒಲಿಂಪಿಕ್‌ ಕ್ರೀಡೆಗಳನ್ನು ಫ್ರೆಂಚ್‌ ಆಲ್ಫ್ಸ್‌ಗೆ ವಹಿಸಿದೆ. ಆದರೆ ಇದಕ್ಕಾಗಿ ಫ್ರಾನ್ಸ್‌ ಸರ್ಕಾರ ಹಣಕಾಸು ಬದ್ಧತೆಯನ್ನು ನೀಡಬೇಕೆಂದು ಷರತ್ತು ವಿಧಿಸಿದೆ.

ಚಳಿಗಾಲದ ಒಲಿಂಪಿಕ್ಸ್‌ ಆತಿಥ್ಯಕ್ಕೆ ಹಣಕಾಸಿನ ‘ಗ್ಯಾರಂಟಿ’ ನೀಡುವಂತೆ ತಾವು ಫ್ರಾನ್ಸ್‌ನ ಮುಂದಿನ ಪ್ರಧಾನಿಗೆ ಹೇಳುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಐಒಸಿ ಸದಸ್ಯರಿಗೆ ಬುಧವಾರ ಅಭಯ ನೀಡಿದರು. ಫ್ರಾನ್ಸ್ ಬಿಟ್ಟರೆ ಉಳಿದವರು 2030ರ ಚಳಿಗಾಲದ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಿರಲಿಲ್ಲ.

ADVERTISEMENT

ಅಮೆರಿಕಕ್ಕೆ ಆತಿಥ್ಯ:

2034ರ ಚಳಿಗಾಲದ ಒಲಿಂಪಿಕ್ಸ್‌ಅನ್ನು ಸಾಲ್ಟ್‌ಲೇಕ್‌ ಸಿಟಿಗೆ (ಅಮೆರಿಕ) ಐಒಸಿ ವಹಿಸಿದೆ. ಆದರೆ ಅಮೆರಿಕವು ವಿಶ್ವ ಉದ್ದೀಪನ ಮದ್ದುಸೇವನೆ ತಡೆ ಘಟಕದ ಜೊತೆ ಅಂತಃಕಲಹವನ್ನು ಕೊನೆಗೊಳಿಸಬೇಕು. ಇಲ್ಲದಿದ್ದರೆ ಆತಿಥ್ಯವನ್ನು ಬೇರೆಯವರಿಗೆ ವಹಿಸುವುದಾಗಿಯೂ ಎಚ್ಚರಿಕೆ ನೀಡಿದೆ.

**

ಹಿಂದೆಸರಿದ ಸಿನ್ನರ್

ಮಿಲಾನ್‌ (ಎಎಫ್‌ಪಿ): ವಿಶ್ವದ ಅಗ್ರಮಾನ್ಯ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಹಿಂದಕ್ಕೆ ಸರಿದಿದ್ದಾರೆ. ಟಾನ್ಸಿಲೈಟಿಸ್‌ (ಗಂಟಲುಬೇನೆ) ಇರುವುದು ಪರೀಕ್ಷೆಯಲ್ಲಿ ಗೊತ್ತಾದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಒಲಿಂಪಿಕ್ಸ್‌ನಿಂದ ಆಡುವ ಆಸೆಯಿತ್ತು. ಆದರೆ ಮಂಗಳವಾರ ವೈದ್ಯರ ಸಲಹೆ ಪಡೆದೆ. ಒಂದು ದಿನ ಕಾದುನೋಡಿದೆ. ಆದರೆ ಗಂಟಲುಬೇನೆ ಜಾಸ್ತಿಯಾಯಿತು’ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

**

ಜಿಲ್‌ ಬೈಡನ್‌ಗೆ ಆಹ್ವಾನ, ಪುಟಿನ್‌ ಇಲ್ಲ

ಪ್ಯಾರಿಸ್‌ (ಎಎಫ್‌ಪಿ): ಇನ್ನೆರಡು ದಿನಗಳಲ್ಲಿ ಆರಂಭವಾಗುವ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ವಿವಿಧ ದೇಶಗಳ ನೂರಾರು ಸರ್ಕಾರಿ ಮುಖ್ಯಸ್ಥರನ್ನು, ರಾಜಮನೆತನದ ಪ್ರತಿನಿಧಿಗಳನ್ನು ಸ್ವಾಗತಿಸಲು ಫ್ರಾನ್ಸ್ ಸಿದ್ಧತೆ ಮಾಡಿಕೊಂಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್‌ ಬೈಡನ್ ಇವರಲ್ಲಿ ಒಳಗೊಂಡಿದ್ದಾರೆ. ಆದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರಿಗೆ ಆಮಂತ್ರಣ ನೀಡಿಲ್ಲ. ರಷ್ಯಾದ ಅಧಿಕೃತ ಪ್ರತಿನಿಧಿ ಎಂದು ಯಾರೂ ಹಾಜರಾಗುತ್ತಿಲ್ಲ. ಉಕ್ರೇನ್ ವಿರುದ್ಧ ಎರಡು ವರ್ಷ ಹಿಂದೆ ರಷ್ಯಾ ಯುದ್ಧ ಸಾರಿದ ನಂತರ ಪಾಶ್ಚಾತ್ಯ ದೇಶಗಳ ಜೊತೆ ಅದರ ಸಂಬಂಧ ಹಳಸಿದೆ.

ಇಸ್ರೇಲ್‌ ನಿಯೋಗಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಬಾಂಬ್‌ ದಾಳಿ ನಡೆಸಿತ್ತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದರ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಭಾಗವಹಿಸುವರೇ ಎಂಬುದು ಖಚಿತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.