ADVERTISEMENT

ತರಕಾರಿ ಮಾರಾಟದಿಂದ ಏಷ್ಯನ್ ಗೇಮ್ಸ್‌ವರೆಗೆ..ಆರ್ಚರಿಪಟು ನೀರಜ್‌ ಚೌಹಾನ್‌ ಯಶೋಗಾಥೆ

ಉತ್ತರಪ್ರದೇಶದ ಯುವ ಆರ್ಚರಿಪಟು ನೀರಜ್‌ ಚೌಹಾನ್‌ ಯಶೋಗಾಥೆ

ಪಿಟಿಐ
Published 29 ಮಾರ್ಚ್ 2022, 14:48 IST
Last Updated 29 ಮಾರ್ಚ್ 2022, 14:48 IST
ನೀರಜ್‌ ಚೌಹಾನ್– ಟ್ವಿಟರ್‌ ಚಿತ್ರ
ನೀರಜ್‌ ಚೌಹಾನ್– ಟ್ವಿಟರ್‌ ಚಿತ್ರ   

ಕೋಲ್ಕತ್ತ: ಕಡುಕಷ್ಟದಲ್ಲೂ ಜೀವನದ ದೊಡ್ಡ ಕನಸನ್ನು ನನಸು ಮಾಡಿಕೊಂಡ ಆರ್ಚರಿಪಟುವೊಬ್ಬರ ಕಥೆಯಿದು. ಎರಡು ವರ್ಷಗಳ ಹಿಂದೆ ಕೋವಿಡ್‌ ಕಬಂಧಬಾಹು ಚಾಚಿದಾಗ ತರಕಾರಿ ಮಾರಾಟ ಮಾಡಿ ಬದುಕು ಸಾಗಿಸಿದ ಉತ್ತರ ಪ್ರದೇಶದ ನೀರಜ್ ಚೌಹಾನ್‌ ಈಗ ಏಷ್ಯನ್ ಗೇಮ್ಸ್‌ಗೆ ಭಾರತ ಆರ್ಚರಿ ತಂಡದಲ್ಲಿ ಸ್ಥಾನ ‍ಪಡೆದ ಸಾರ್ಥಕ್ಯದ ಭಾವದಲ್ಲಿದ್ದಾರೆ.

ಬಡತನದ ಪರಿಸ್ಥಿಯಿಂದಾಗಿ ಬೀದಿಗಳಲ್ಲಿ ಸಹೋದರರೊಂದಿಗೆ ತರಕಾರಿ ವ್ಯಾಪಾರಕ್ಕಿಳಿದ ಮೀರಜ್‌ನ ನೀರಜ್‌ ಅವರು ಆರ್ಚರಿ ಕ್ರೀಡೆ ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಛಲ ಕಳೆದುಕೊಳ್ಳದ ವ್ಯಕ್ತಿತ್ವ ಅವರನ್ನು ಯಶಸ್ಸು ಸಾಧಿಸುವಂತೆ ಮಾಡಿದೆ.

‘ತರಕಾರಿ ಮಾರುತ್ತ ಮಾರುತ್ತ ಆರ್ಚರಿಯಿಂದ ಬಹದೂರ ಸಾಗಿದ್ದೆ. ಆದರೆ ಕ್ರೀಡೆಗೆ ಮರಳಲು ಕೇಂದ್ರ ಕ್ರೀಡಾ ಸಚಿವಾಲಯ ನನ್ನ ನೆರವಿಗೆ ಧಾವಿಸಿತು‘ ಎಂದು ನೀರಜ್ ನೆನಪಿಸಿಕೊಳ್ಳುತ್ತಾರೆ.

ADVERTISEMENT

ತಂದೆ ಅಕ್ಷಯ್‌ ಲಾಲ್‌ ಚೌಹಾನ್‌ 30 ವರ್ಷಗಳಿಂದಬಾಣಸಿಗನಾಗಿ ಕಾರ್ಯನಿರ್ವಹಿಸಿದ್ದ ಕೈಲಾಶ್ ಪ್ರಕಾಶ್‌ ಕ್ರೀಡಾಂಗಣದಲ್ಲಿ ಸಮೀಪದಲ್ಲೇ ನೀರಜ್ ತಮ್ಮ ಬಾಲ್ಯ ಕಳೆದರು. ಲಗೋರಿ ಆಡುತ್ತಿದ್ದ ಬಾಲಕನಿಗೆ ಸಹಜವಾಗಿಯೇ ಆರ್ಚರಿಯತ್ತ ಆಸಕ್ತಿ ಮೊಳೆಯಿತು.

ಅಕಾಡೆಮಿಯೊಂದಕ್ಕೆ ಸೇರಿಕೊಂಡ ನೀರಜ್‌ 2013ರಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕೆಲವು ಪದಕಗಳನ್ನು ತಮ್ಮದಾಗಿಸಿಕೊಂಡರು. 2020ರಲ್ಲಿ ಕೋವಿಡ್‌ ಅವರ ಪ್ರಗತಿಗೆ ಅಡ್ಡಿಯಾಯಿತು. ಇಬ್ಬರು ಸಹೋದರರೊಂದಿಗೆ (ಅದರಲ್ಲಿ ಒಬ್ಬರು ರಾಷ್ಟ್ರಮಟ್ಟದ ಬಾಕ್ಸರ್‌) ತರಕಾರಿ ಮಾರಾಟಕ್ಕಿಳಿದರು. ಸುಮಾರು ಎರಡು ವರ್ಷಗಳ ಕಾಲ ಅವರು ಈ ಕೆಲಸ ನಿರ್ವಹಿಸಿದರು.

‘ನಾವು ಅಸಹಾಯಕರಾಗಿದ್ದೆವು. ತಂದೆಯ ಸಂಬಳ ತಿಂಗಳಿಗೆ ₹ 7 ಸಾವಿರದಿಂದ 8 ಸಾವಿರ ಸಿಗುತ್ತಿತ್ತು. ಲಾಕ್‌ಡೌನ್ ನಂತರ ಎಲ್ಲವೂ ನಿಂತುಹೋಯಿತು. ಅನ್ನ ಸಂಪಾದಿಸುವ ಉದ್ದೇಶಕ್ಕೆ ಆರ್ಚರಿ, ಬಾಕ್ಸಿಂಗ್‌ ಕೈಬಿಟ್ಟಿದ್ದೆವು‘ ಎಂದು ಪರದಾಟದ ದಿನಗಳನ್ನು ನೀರಜ್‌ ಸ್ಮರಿಸಿಕೊಳ್ಳುತ್ತಾರೆ.

ನೀರಜ್ ಅವರ ಸ್ಥಿತಿಯ ಕರಿತು ಭಾರತ ಆರ್ಚರಿ ಸಂಸ್ಥೆಯ ಅಧ್ಯಕ್ಷ ಅರ್ಜುನ್ ಮುಂಡಾ, ಅಂದಿನ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಗಮನಕ್ಕೆ ತಂದರು. ಕ್ರೀಡಾ ಇಲಾಖೆಯು ನೀರಜ್ ಮತ್ತು ಅವರ ಸಹೋದರ ಸುನಿಲ್‌ಗೆ ₹ 5 ಲಕ್ಷ ಧನಸಹಾಯ ಮಾಡಿತು.

ಬಳಿಕ ಭಾರತ ಕ್ರೀಡಾ ಪ್ರಾಧಿಕಾರ ಸೇರಿಕೊಂಡ ನೀರಜ್‌ ಅವರು ಕೋಚ್‌ ಜೀತೇಂದ್ರ ಚೌಹಾನ್‌ ಅವರ ಮಾರ್ಗದರ್ಶನದಲ್ಲಿ ಪಳಗಿದರು.

ಏಷ್ಯನ್ ಗೇಮ್ಸ್‌ಗಾಗಿ ನಡೆದ ಟ್ರಯಲ್ಸ್‌ನಲ್ಲಿ ಟೋಕಿಯೊ ಒಲಿಂಪಿಯನ್‌ ಅತನು ದಾಸ್‌ ಮತ್ತು ಪ್ರವೀಣ್ ಜಾಧವ್ ಅವರನ್ನು ಹಿಂದಿಕ್ಕಿ ಸ್ಥಾನ ಗಳಿಸಿದ್ದು ಗಮನಾರ್ಹ. ಏಷ್ಯನ್‌ ಕ್ರೀಡಾಕೂಟಗಳು ಚೀನಾದಲ್ಲಿ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿವೆ. ಇಲ್ಲಿ ಉತ್ತಮ ಸಾಮರ್ಥ್ಯ ತೋರಿ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗುವ ಹಂಬಲ ನೀರಜ್ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.