ನವದೆಹಲಿ: ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ತಂಡದ ಷೆಫ್ ಡಿ ಮಿಷನ್ (ಸಿಡಿಎಂ) ಆಗಿ ನೇಮಕಗೊಂಡಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಹಿಳಾ ಧ್ವಜಧಾರಿಯಾಗಲಿದ್ದಾರೆ.
ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಅವರು ವೈಯಕ್ತಿಕ ಕಾರಣ ನೀಡಿ ಭಾರತ ತಂಡದ ಷೆಫ್ ಡಿ ಮಿಷನ್ ಸ್ಥಾನವನ್ನು ಏಪ್ರಿಲ್‌ನಲ್ಲಿ ತ್ಯಜಿಸಿದ್ದರು. ಹೀಗಾಗಿ, ತೆರವಾದ ಹುದ್ದೆಗೆ ಉಪ ಸಿಡಿಎಂ ಸ್ಥಾನದಲ್ಲಿದ್ದ ನಾರಂಗ್ ಅವರು ಆಯ್ಕೆಯಾಗಿದ್ದಾರೆ ಎಂದು ಭಾರತ ಒಲಿಂಲಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.
‘ನಮ್ಮ ತಂಡವನ್ನು ಮುನ್ನಡೆಸಲು ಒಲಿಂಪಿಕ್ ಪದಕ ವಿಜೇತರನ್ನು ಹುಡುಕುತ್ತಿದ್ದೆ. ನನ್ನ ಯುವ ಸಹೋದ್ಯೋಗಿ ನಾರಂಗ್ ಅವರು ಮೇರಿ ಕೋಮ್ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿ’ ಎಂದು ಉಷಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೆಫ್ ಡಿ ಮಿಷನ್ ಪ್ರಮುಖ ಆಡಳಿತಾತ್ಮಕ ಹುದ್ದೆಯಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಯೋಗಕ್ಷೇಮವನ್ನು ಖಾತ್ರಿಪಡಿಸುವ ಜವಾಬ್ದಾರಿಯೊಂದಿಗೆ ಅವರ ಅಗತ್ಯತೆಗಳನ್ನು ನೋಡಿಕೊಳ್ಳುವ ಮತ್ತು ಸಂಘಟನಾ ಸಮಿತಿಯೊಂದಿಗೆ ಸಂಪರ್ಕ ಸಾಧಿಸುವ ಕೆಲಸವನ್ನು ಮಾಡಬೇಕಿದೆ.
ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳೆ ಸಿಂಧು ಅವರು ಜುಲೈ 26ರಂದು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಟೇಬಲ್ ಟೆನಿಸ್ ತಾರೆ ಎ. ಶರತ್ ಕಮಲ್ ಅವರೊಂದಿಗೆ ಧ್ವಜಧಾರಿಯಾಗಿ ಪಾಲ್ಗೊಳ್ಳುವರು ಎಂದು ಉಷಾ ಹೇಳಿದ್ದಾರೆ.
ಮಾರ್ಚ್‌ನಲ್ಲೇ ಶರತ್ ಅವರನ್ನು ಭಾರತದ ಧ್ವಜಧಾರಿ ಎಂದು ಹೆಸರಿಸಿತ್ತು. ಆದರೆ, ಮಹಿಳಾ ಧ್ವಜಧಾರಿಯನ್ನು ಸೋಮವಾರ ಐಒಸಿ ಪ್ರಕಟಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಮತ್ತು ಮೇರಿ ಕೋಮ್ ಭಾರತದ ಧ್ವಜಧಾರಿಗಳಾಗಿದ್ದರು.
‘ಪ್ಯಾರಿಸ್ ಕೂಟದಲ್ಲಿ ನೂರಕ್ಕೂ ಅಧಿಕ ಭಾರತದ ಅಥ್ಲೀಟ್‌ಗಳು ಪಾಲ್ಗೊಳ್ಳುವರು. ಉತ್ತಮ ಫಲಿತಾಂಶ ದೊರೆಯುವ ನಿರೀಕ್ಷೆಯಿದೆ’ ಎಂದು ಉಷಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.