ADVERTISEMENT

ಒಲಿಂಪಿಕ್ಸ್‌: ಸಂಕಷ್ಟ ಸಮಯದಲ್ಲಿ ಭರವಸೆಯ ಬೆಳಕು

ಇಂದಿನಿಂದ ಬೆಳಕಿನ ನಗರಿಯಲ್ಲಿ ಒಲಿಂಪಿಕ್ಸ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 18:33 IST
Last Updated 25 ಜುಲೈ 2024, 18:33 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ಪ್ಯಾರಿಸ್‌: ಸರಿಯಾಗಿ ನೂರು ವರ್ಷಗಳ ನಂತರ ಒಲಿಂಪಿಕ್‌ ಕ್ರೀಡೆಗಳ ಆತಿಥ್ಯ ವಹಿಸಲು ‘ಬೆಳಕಿನ ನಗರಿ’ ಪ್ಯಾರಿಸ್‌ ಸಜ್ಜಾಗಿದೆ. ಯುದ್ಧ, ಸಂಘರ್ಷ ಪೀಡಿತ ಜಾಗತಿಕ ಸನ್ನಿವೇಶದಲ್ಲಿ ಒಗ್ಗಟ್ಟಿನ ಸಂದೇಶ ಸಾರುವ ಈ ಅತಿ ದೊಡ್ಡ ಕ್ರೀಡಾಮೇಳವು ತಾತ್ಕಾಲಿಕವಾಗಿಯಾದರೂ ಶಾಂತಿ ಪಸರಿಸುವ ವಿಶ್ವಾಸದಲ್ಲಿದೆ.

ಫ್ರಾನ್ಸ್‌ನಲ್ಲಿ ಇತ್ತೀಚೆಗೆಷ್ಟೇ ನಡೆದ ಅಕಾಲಿಕ ಚುನಾವಣೆಯು ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೂ ಈ ಬೆಳವಣಿಗೆ ಆಘಾತ ಮೂಡಿಸಿದೆ. ರಷ್ಯಾ–ಉಕ್ರೇನ್‌, ಇಸ್ರೇಲ್‌– ಪ್ಯಾಲಸ್ಟೀನ್ ಸಂಘರ್ಷದ ಕಾವು ಇನ್ನೂ ಆರಿಲ್ಲ. ಚೀನಾ ಈಜುಪಟುಗಳ ವಿರುದ್ಧ ಡೋಪಿಂಗ್ ಆರೋಪಗಳು ಬಲವಾಗಿವೆ. ಶ್ರೀಮಂತ ಸಂಸ್ಕೃತಿಯ ಪರಂಪರೆ ಹೊಂದಿರುವ ಫ್ರಾನ್ಸ್‌ ರಾಜಧಾನಿಗೆ, ಇವೆಲ್ಲದರ ಮಧ್ಯೆ ಸಾವಿರಾರು ಅಥ್ಲೀಟುಗಳು, ಮಾಧ್ಯಮದವರು ಬಂದಿಳಿದಿದ್ದಾರೆ.

ಸುಮಾರು ₹41,000 ಕೋಟಿ ವೆಚ್ಚದಲ್ಲಿ ಈ ಕ್ರೀಡೆಗಳ ಆತಿಥ್ಯ, ಸಂಘಟನೆಗೆ ಆಸ್ಥೆ ವಹಿಸಿದ್ದ ಫ್ರಾನ್ಸ್‌ನ ಹಾಲಿ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರನ್ ಅವರ ಸ್ಥಿತಿ ಈಗ ದುರ್ಬಲವಾದಂತೆ ಕಾಣುತ್ತಿದೆ. ಆದರೆ ಈ ಕ್ರೀಡೆಗಳು ಮುಂದಿನ 15 ದಿನ ವಿಶ್ವವನ್ನು ಒಗ್ಗೂಡಿಸಲಿದೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ADVERTISEMENT

ಅಭೂತಪೂರ್ವ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲು ಬಂದಿರುವ ವಿಶ್ವ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಕೆಲದಿನಗಳ ಮಟ್ಟಿಗಾದರೂ ಬದಿಗಿಡಬಲ್ಲರು. ಅಥ್ಲೀಟುಗಳು ಸ್ಫೂರ್ತಿಯುತ ಸಾಧನೆಗಳ ಮೂಲಕ ಉಲ್ಲಾಸ ಮೂಡಿಸುವರು ಎಂಬ ವಿಶ್ವಾಸ ಅವರದು.

ಸಂಪ್ರದಾಯ ಮುರಿದು ಉದ್ಘಾಟನಾ ಸಮಾರಂಭವನ್ನು ಮೊದಲ ಸಲ ಕ್ರೀಡಾಂಗಣದಿಂದ ಹೊರಗೆ– ನಗರದ ಸೀನ್‌ ನದಿಯಲ್ಲಿ ನಡೆಸಲಾಗುತ್ತಿದೆ. ಈ ನದಿಯನ್ನು ಶುದ್ಧೀಕರಣಗೊಳಿಸಲು ಕೋಟಿಗಟ್ಟಲೆ ಸುರಿಯಲಾಗಿದೆ. ಇಲ್ಲಿನ ಪೊಲೀಸರಿಗೆ ಭದ್ರತೆ ಒದಗಿಸುವುದು ತಲೆನೋವಾಗಿದೆ. ಪ್ಯಾರಿಸ್‌ ಮಧ್ಯಭಾಗದ  ನಿವಾಸಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಅವರು ಕೆಲಸ ಮುಗಿಸಿ ಮನೆಗೆ ಹೋಗಲೂ ಕ್ಯೂಆರ್‌ ಕೋಡ್‌ಗಳ ಬಳಕೆ ಅನಿವಾರ್ಯ.

ಬೇಸಿಗೆ ಮೊದಲು ಭಾರಿ ಮಳೆಯಿಂದ ಸೀನ್‌ ನದಿಗೆ ಕೊಳಚೆ ನೀರು ಹರಿದು ಸಮಸ್ಯೆ ಎದುರಾಗಿತ್ತು. ಆದರೆ ವರದಾನವೆಂಬಂತೆ ಕೆಲವು ವಾರಗಳಿಂದ ಬಿಸಿಲಿನ ಝಳವಿದೆ. ಕ್ರೀಡೆಗಳು ಯಶಸ್ವಿಯಾಗಲು ಆಯೋಜಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ವಾರದಿಂದ ಸೆಂಟ್ರಲ್ ಪ್ಯಾರಿಸ್‌ ‘ಲಾಕ್‌ಡೌನ್‌’ ಮೋಡ್‌ನಲ್ಲಿದೆ. ನಗರದ ಮೂಲೆ ಮೂಲೆಗಳಲ್ಲಿ ಭದ್ರತಾ ಪಡೆಗಳ ಗಸ್ತು ಇದೆ.

ಇದರ ಬಿಸಿ ತಟ್ಟಿದ ಹಾಗೆ, ಭಾರತ ತಂಡದ ಷೆಫ್‌ ಡಿ ಮಿಷನ್ ಆಗಿರುವ ಗಗನ್‌ ನಾರಂಗ್‌ ಮಾಧ್ಯಮದವರ ಜೊತೆ ಹೆಚ್ಚು  ಮಾತನಾಡಲಿಲ್ಲ. ಉದ್ಘಾಟನೆ ವೇಳೆ ದೋಣಿಯಲ್ಲಿ ಪರೇಡ್‌ ನಡೆಯುವ ವಿಷಯ ಹೇಳುವುದಕ್ಕೆ ಒತ್ತುಕೊಟ್ಟರು.

ಉದ್ಘಾಟನಾ ಸಮಾರಂಭ ಬದಿಗಿಟ್ಟು ನೋಡಿದರೆ, 30ನೇ ಆವೃತ್ತಿಯ ಈ ಕ್ರೀಡೆಗಳು ಪ್ರಮುಖ ಪೈಪೋಟಿಗಳಿಗೆ ವೇದಿಕೆಯಾಗಲಿದೆ. ಈಜಿನಲ್ಲಿ ಅಮೆರಿಕದ ಕೆಲೆಬ್‌ ಡ್ರೆಸೆಲ್‌ ಮತ್ತು ಕೇಟಿ ಲಿಡೆಕಿ ಅವರು ಈ ತಲೆಮಾರಿನ ಅಗ್ರಮಾನ್ಯ ಈಜುಪಟುಗಳೆಂಬ ಬಿರುದನ್ನು ಮುಂದುವರಿಸುವ ಗುರಿಯಲ್ಲಿದ್ದಾರೆ. ಗ್ರೇಟ್‌ ಬ್ರಿಟನ್‌ನ ಆ್ಯಡಮ್‌ ಪೀಟಿ ಮತ್ತು ಆಸ್ಟ್ರೇಲಿಯಾದ ಅರಿಯರ್ನ್ ಟಿಟ್ಮಸ್‌ ಮತ್ತು ಎಮ್ಮಾ ಮೆಕ್‌ಕಿಯಾನ್ ಅವರೂ ಸವಾಲೊಡ್ಡುವ ಸಮರ್ಥರೇ.

ಚೀನಾದ 23 ಈಜುಪಟುಗಳು ಹೃದಯಬೇನೆಗೆ ತೆಗೆದುಕೊಳ್ಳುವ ಮದ್ದು ಸೇವನೆ ಮಾಡಿದ್ದು ಪತ್ತೆಯಾದರೂ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದ ಸುದ್ದಿ ಇತ್ತೀಚೆಗೆ ಬಹಿರಂಗವಾಗಿತ್ತು. ಅದರ  ಬೆನ್ನಲ್ಲೇ ಆ ದೇಶದ ಈಜುಪಟುಗಳ ಮೇಲೆ ಕಣ್ಣಿಡಲಾಗಿದೆ. ಈ ಮದ್ದು (ಟ್ರಿಮೆಟಾಝೈಡಿನ್‌) ‘ವಾಡಾ’ದ ನಿಷೇಧಪಟ್ಟಿಯಲ್ಲಿದೆ. 23 ಮಂದಿಯಲ್ಲಿ 11 ಮಂದಿ ಇಲ್ಲಿಯೂ ಸ್ಪರ್ಧಿಸಲಿದ್ದಾರೆ.

ಸ್ಟೇಡ್‌ ಡಿ ಫ್ರಾನ್ಸ್‌ನಲ್ಲಿ ಕೂಟದ ಆಕರ್ಷಣೆಯಾದ ಅಥ್ಲೆಟಿಕ್‌ ಸ್ಪರ್ಧೆಗಳು ನಡೆಯಲಿವೆ. ಜಮೈಕಾದ ಉಸೇನ್ ಬೋಲ್ಡ್‌ ನಿವೃತ್ತಿ ನಂತರ ಸ್ಪ್ರಿಂಟ್‌ ಓಟದಲ್ಲಿ ನವತಾರೆ ಮೂಡಿಬಂದಿಲ್ಲ. ಆದರೆ ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೊ ನಿರಾಶರಾಗಿಲ್ಲ. ಸಿಡ್ನಿ ಮೆಕ್‌ಲಾಗ್ಲಿನ್‌ ಲೆವ್ರೊನ್‌, ಆರ್ಮಾಂಡ್‌ ಡುಪ್ಲಾಂಟಿಸ್‌, ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌, ನೊವಾ ಲೈಲ್ಸ್‌ ಮತ್ತು ಗ್ರಾಂಟ್‌ ಹಾಲೊವೆ ಅವರಿಂದ ಆಮೋಘ ಓಟದ ಪ್ರದರ್ಶನ ನಿರೀಕ್ಷಿಸಲಾಗಿದೆ.

ತಾರಾ ವರ್ಚಸ್ಸಿನ ಆಟಗಾರರಿರುವ ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ತಂಡ, ರೋಲಂಡ್‌ ಗ್ಯಾರೋಸ್‌ನಲ್ಲಿ ಸೆಣಸಲಿರುವ ಟೆನಿಸ್‌ ದಿಗ್ಗಜರಾದ ನೊವಾಕ್ ಜೊಕೊವಿಚ್‌, ರಫೆಲ್‌ ನಡಾಲ್‌ ಮೊದಲಾದವರು ಪದಕ ಗೆಲ್ಲಲು ತಮ್ಮೆಲ್ಲಾ ಸಾಮರ್ಥ್ಯ ಪಣಕ್ಕೊಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.