ADVERTISEMENT

ಸ್ಕ್ವ್ಯಾಷ್ | ಯೂಸೆಫ್‌ಗೆ ಸೋಲುಣಿಸಿದ ಘೋಷಾಲ್

ವೃತ್ತಿಪರ ಟೂರ್ನಿಯಲ್ಲಿ ಮೂರು ವರ್ಷಗಳಲ್ಲಿ ಭಾರತದ ಆಟಗಾರನ ಗರಿಷ್ಠ ಸಾಧನೆ

ಪಿಟಿಐ
Published 6 ಮೇ 2022, 11:19 IST
Last Updated 6 ಮೇ 2022, 11:19 IST
ಸೌರವ್ ಘೋಷಾಲ್ ಆಟದ ಸೊಬಗು –ಟ್ವಿಟರ್ ಚಿತ್ರ
ಸೌರವ್ ಘೋಷಾಲ್ ಆಟದ ಸೊಬಗು –ಟ್ವಿಟರ್ ಚಿತ್ರ   

ನ್ಯೂಯಾರ್ಕ್‌: ವೃತ್ತಿಪರ ಸ್ಕ್ವ್ಯಾಷ್ ಟೂರ್‌ನಲ್ಲಿ ಭಾರತದ ಸೌರವ್ ಘೋಷಾಲ್ ಅಮೋಘ ಸಾಧನೆ ಮಾಡಿದ್ದಾರೆ. ಟೂರ್ನಮೆಂಟ್ ಆಫ್ ಚಾಂಪಿಯನ್ಸ್‌ನಲ್ಲಿ ಅವರು ತಮಗಿಂತ ಹೆಚ್ಚಿನ ರ‍್ಯಾಂಕಿಂಗ್ ಹೊಂದಿರುವ ಈಜಿಪ್ಟ್‌ನ ಯೂಸೆಫ್‌ ಇಬ್ರಾಹಿಂ ವಿರುದ್ಧದ ಪಂದ್ಯದಲ್ಲಿ ಅವರು ಭರ್ಜರಿ ಜಯ ಗಳಿಸಿದರು.

ಈ ಮೂಲಕ ಟೂರ್‌ನ ಸೆಮಿಫೈನಲ್ ಪ್ರವೇಶಿಸಿದ ಅವರು ಮೂರು ವರ್ಷಗಳಲ್ಲಿ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರು. ವಿಶ್ವ ಕ್ರಮಾಂಕದಲ್ಲಿ 17ನೇ ಸ್ಥಾನದಲ್ಲಿರುವ ಸೌರವ್ ಉತ್ತಮ ಆರಂಭ ಕಂಡಿದ್ದರು. ನಂತರ ಎದುರಾಳಿ ಆಧಿಪತ್ಯ ಸ್ಥಾಪಿಸಿದರು. ಆದರೆ ಕೆಚ್ಚೆದೆಯ ಆಟವಾಡಿ ತಿರುಗೇಟು ನೀಡಿದ ಸೌರವ್11-8, 7-11, 9-11, 11-6, 11-9ರಲ್ಲಿ ಪಂದ್ಯ ಗೆದ್ದುಕೊಂಡರು.

ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನಲ್ಲಿ ನಡೆದ ಹಣಾಹಣಿಯಲ್ಲಿ ವಯಸ್ಸಿನಲ್ಲಿ ತಮಗಿಂತ ಸಣ್ಣವರಾಗಿರುವಯೂಸೆಫ್‌ ಇಬ್ರಾಹಿಂ ಎದುರು ತಮ್ಮೆಲ್ಲ ಸಾಮರ್ಥ್ಯವನ್ನು ಹೊರಗೆಡವಿದರು. ನಾಲ್ಕರ ಘಟ್ಟದಲ್ಲಿ ಅವರು ಮೂರನೇ ಶ್ರೇಯಾಂಕದ ಪೆರು ಆಟಗಾರ ಡೀಗೊ ಎಲಿಯಾಸ್‌ ವಿರುದ್ಧ ಸೆಣಸಲಿದ್ದಾರೆ.

ADVERTISEMENT

‘ಇದು ಅತ್ಯಂತ ಖುಷಿ ನೀಡಿದ ಜಯವಾಗಿದೆ. ಈ ದಿನವನ್ನು ಮರೆಯಲು ಸಾಧ್ಯವಿಲ್ಲ. ಕೆಲವು ಕಾಲದಿಂದ ಭಾರಿ ಪ್ರಯತ್ನ ಮಾಡುತ್ತಿದ್ದೇನೆ. ಅದು ಈಗ ಫಲ ಕೊಡುತ್ತಿದೆ. ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನಂಥ ಪ್ರಸಿದ್ಧ ಅಂಗಣದಲ್ಲಿ ಈ ಸಾಧನೆ ಆಗಿರುವುದರಿಂದ ಖುಷಿ ಹೆಚ್ಚಿದೆ’ ಎಂದು ಘೋಷಾಲ್ ಹೇಳಿರುವುದಾಗಿ ವೃತ್ತಿಪರ ಸ್ಕ್ವ್ಯಾಷ್ ಸಂಸ್ಥೆ (ಪಿಎಸ್‌ಎ) ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.