ನವದೆಹಲಿ: ಚೀನಾದ ಡಿಂಗ್ ಲಿರೆನ್ ವಿರುದ್ಧ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲುವ ನೆಚ್ಚಿನ ಆಟಗಾರ ಎಂಬ ಹಣೆಪಟ್ಟಿ ನೀಡಿರುವುದರಿಂದ ತಮ್ಮ ಮೇಲೆ ಹೆಚ್ಚುವರಿ ಒತ್ತಡವೇನೂ ಇಲ್ಲ’ ಎಂದು ಚೆಸ್ ತಾರೆ ಡಿ.ಗುಕೇಶ್ ಅವರು ಹೇಳಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಗುಕೇಶ್ ಮತ್ತು ಲಿರೆನ್ ನಡುವೆ ನವೆಂಬರ್ 20 ರಿಂದ ಡಿಸೆಂಬರ್ 15ರವರೆಗೆ ಸಿಂಗಪುರದಲ್ಲಿ ವಿಶ್ವ ಚಾಂಪಿಯನ್‌ಷಿಪ್ ಫೈನಲ್ ನಡೆಯಲಿದೆ. ಫೈನಲ್ ಪಂದ್ಯವು ಸುಮಾರು ₹21 ಕೋಟಿ ಬಹುಮಾನ ನಿಧಿಯನ್ನು ಹೊಂದಿದೆ.
ಕೆನಡಾದಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯನ್ನು ಗೆಲ್ಲುವ ಮೂಲಕ, 18 ವರ್ಷ ವಯಸ್ಸಿನ ಗುಕೇಶ್ ಅವರು ವಿಶ್ವ ಚಾಂಪಿಯನ್‌ಷಿಪ್ ಇತಿಹಾಸದಲ್ಲೇ ಅತಿ ಕಿರಿಯ ಚಾಲೆಂಜರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
‘ಜನರು ಆ ರೀತಿ (ನೀವೇ ಗೆಲ್ಲುವ ನಿರೀಕ್ಷೆಯಿರುವ ಆಟಗಾರನೆಂದು) ಹೇಳುವಾಗ ಎಲ್ಲರಿಗೂ ಆಗುವಂತೆ ಸಂತಸವಾಗುತ್ತದೆ. ಆದರೆ ಇದರಿಂದೆಲ್ಲಾ ನನ್ನ ಮೇಲೆ ಒತ್ತಡ ಬೀಳುವುದಿಲ್ಲ’ ಎಂದು ಅವರು ಆಯ್ದ ಮಾಧ್ಯಮದವರೊಂದಿಗೆ ಆನ್‌ಲೈನ್ ಸಂವಾದದಲ್ಲಿ ತಿಳಿಸಿದರು. ಈಗ ಆಡುತ್ತಿರುವ ರೀತಿಯ (ಫಾರ್ಮ್) ಬಗ್ಗೆಯೂ ತಮಗೆ ಸಂತೃಪ್ತಿಯಿದೆ ಎಂದರು.
ಕ್ಯಾಂಡಿಡೇಟ್ಸ್ ಗೆದ್ದ ನಂತರ ಗುಕೇಶ್ ಅವರು ಒಲಿಂಪಿಯಾಡ್‌ನಲ್ಲೂ ಅಮೋಘ ಆಟವಾಡಿದ್ದರು. ಮೊದಲ ಬೋರ್ಡ್‌ನಲ್ಲಿ ಆಡಿ ತಂಡ ಐತಿಹಾಸಿಕ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಮೊದಲ ಬೋರ್ಡ್‌ನಲ್ಲಿ ತೋರಿದ ಸಾಧನೆಗಾಗಿ ವೈಯಕ್ತಿಕ ಚಿನ್ನ ಕೂಡ ಅವರ ಪಾಲಾಗಿತ್ತು.
ಗುಕೇಶ್ ಎದುರಾಳಿಯಾಗಿರುವ 31 ವರ್ಷ ವಯಸ್ಸಿನ ಲಿರೆನ್, ಅತೀ ಹೆಚ್ಚಿನ ರೇಟಿಂಗ್ ಪಡೆದ ಚೀನಾದ ಆಟಗಾರ ಎನಿಸಿದ್ದಾರೆ. ಕಳೆದ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ರಷ್ಯಾದ ಇಯಾನ್ ನಿಪೊಮ್‌ನಿಷಿ ಅವರನ್ನು ಸೋಲಿಸಿದ ನಂತರ ಅವರು, ಖಿನ್ನತೆಯಿಂದ ಹೊರಬರಲು ವಿರಾಮ ಪಡೆದಿದ್ದರು. ಈ ವರ್ಷದ ಆರಂಭದಲ್ಲಷ್ಟೇ ಅವರು ಆಟಕ್ಕೆ ಪುನರಾಗಮನ ಮಾಡಿದ್ದರು. ಆದರೆ ನಂತರ ಎಂದಿನ ಲಯಕ್ಕೆ ಮರಳಲು ಅವರಿಗೆ ಸಾಧ್ಯವಾಗಿಲ್ಲ.
‘ಒಲಿಂಪಿಯಾಡ್‌ನಲ್ಲಿ ತೋರಿದ ಉತ್ತಮ ಸಾಧನೆ ನನ್ನ ಪಾಲಿಗೆ ವಿಶ್ವಾಸವರ್ಧಕ (ಕಾನ್ಫಿಡೆನ್ಸ್ ಬೂಸ್ಟರ್) ವಾಗಿ ಕೆಲಸ ಮಾಡಿತು’ ಎಂದು ಗುಕೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.