ADVERTISEMENT

ಚೆಸ್‌: ಅಗ್ರ ಐದಕ್ಕೇರಿದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌

ಪಿಟಿಐ
Published 4 ಜೂನ್ 2024, 13:28 IST
Last Updated 4 ಜೂನ್ 2024, 13:28 IST
ಅರ್ಜುನ್‌ ಇರಿಗೇಶಿ
ಅರ್ಜುನ್‌ ಇರಿಗೇಶಿ   

ನವದೆಹಲಿ: ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ, ಫ್ರೆಂಚ್‌ ಟೀಮ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ಪರಿಣಾಮ ಫಿಡೆ ರೇಟಿಂಗ್‌ನಲ್ಲಿ ಅವರು ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಲೈವ್‌ ರೇಟಿಂಗ್‌ನಲ್ಲಿ ಭಾರತದ ಅತ್ಯುನ್ನತ ಕ್ರಮಾಂಕದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಸಕ್ತ 2769ರ ರೇಟಿಂಗ್ ಹೊಂದಿರುವ ಅರ್ಜುನ್ ಅದಕ್ಕೆ ಇಲ್ಲಿಯವರೆಗೆ 8.7 ಪಾಯಿಂಟ್ಸ್‌ ಸೇರಿಸಿದ್ದಾರೆ. ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌, ಅಮೆರಿಕದ ಹಿಕಾರು ನಕಾಮುರ ಮತ್ತು ಫ್ಯಾಬಿಯಾನೊ ಕರುವಾನ ಮತ್ತು ರಷ್ಯಾದ ಇಯಾನ್ ನಿಪೊಮ್‌ನಿಷಿ ಮಾತ್ರ ಭಾರತದ ಆಟಗಾರನಿಗಿಂತ ಮುಂದಿದ್ದಾರೆ.

ಈ ವಾರದ ಆರಂಭದಲ್ಲಿ ಅವರ ರೇಟಿಂಗ್‌ ಜೀವನಶ್ರೇಷ್ಠ 2771.2 ತಲುಪಿತ್ತು. ವಿಶ್ವನಾಥನ್ ಆನಂದ್ ನಂತರ ಯಾರೂ ಇಷ್ಟು ಎತ್ತರಕ್ಕೆ ಏರಿರಲಿಲ್ಲ.

ADVERTISEMENT

20 ವರ್ಷ ವಯಸ್ಸಿನ ಇರಿಗೇಶಿ ಮೆಟ್ಜ್ ಫಿಷರ್ ಚೆಸ್‌ ಕ್ಲಬ್‌ ಪ್ರತಿನಿಧಿಸುತ್ತಿದ್ದು, ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದಾರೆ. ಸ್ವದೇಶದ ಪಿ.ಹರಿಕೃಷ್ಣ, ಜರ್ಮನಿಯ ವಿತಾಲಿ ಕುನಿನ್ ವಿರುದ್ಧ ಪಡೆದ ಗೆಲುವು ಇವುಗಳಲ್ಲಿ ಸೇರಿವೆ. ಈ ಟೂರ್ನಿಯಲ್ಲಿ ಇನ್ನೆರಡು ಸುತ್ತುಗಳು ಆಡಲು ಬಾಕಿಯಿವೆ.

ಅರ್ಜುನ್ ಕಳೆದ ಕೆಲವು ತಿಂಗಳಿಂದ ಉತ್ತಮ ಲಯದಲ್ಲಿದ್ದಾರೆ. ಟೆಪೆ ಸಿಜೆಮನ್ ಚೆಸ್‌ ಟೂರ್ನಿಯಲ್ಲಿ ಎರಡನೇ, ಶಾರ್ಜಾ ಮಾಸ್ಟರ್ಸ್‌ ಓಪನ್ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಗಳಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಮೆನೊರ್ಕಾ ಓಪನ್‌ನಲ್ಲಿ ಚಾಂಪಿಯನ್ ಕಿರೀಟ ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.