ADVERTISEMENT

ಡಬ್ಲ್ಯುಎಫ್‌ಐ ಅಮಾನತು ಪ್ರಶ್ನಿಸಿ ಕೋರ್ಟ್‌ಗೆ ಮೊರೆ: ಸಂಜಯ್ ಸಿಂಗ್

ಪಿಟಿಐ
Published 28 ಡಿಸೆಂಬರ್ 2023, 14:27 IST
Last Updated 28 ಡಿಸೆಂಬರ್ 2023, 14:27 IST
ಸಂಜಯ್ ಕುಮಾರ್ ಸಿಂಗ್
ಸಂಜಯ್ ಕುಮಾರ್ ಸಿಂಗ್   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ನೂತನ ಆಡಳಿತ ಸಮಿತಿಯನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಚುನಾಯಿತ ಅಧ್ಯಕ್ಷ ಸಂಜಯಕುಮಾರ್ ಸಿಂಗ್ ಹೇಳಿದ್ದಾರೆ.

ಅಮಾನತುಗೊಳಿಸಲು ಸಚಿವಾಲಯವು ‘ಸಮರ್ಪಕ ಪ್ರಕ್ರಿಯೆ’ ಪಾಲಿಸಿಲ್ಲ ಎಂದು ಅವರು ದೂರಿದ್ದಾರೆ.

‘ಪ್ರಜಾಪ್ರಭುತ್ವದ ಕಾನೂನಿನ ಅನ್ವಯ ನಡೆದ ಚುನಾವಣೆಯಲ್ಲಿ ನಾವು ಜಯಿಸಿದ್ದೇವೆ. ಜಮ್ಮು–ಕಾಶ್ಮೀರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚುನಾವಣಾಧಿಕಾರಿಯಾಗಿದ್ದರು. ಐಒಎ (ಭಾರತ ಒಲಿಂಪಿಕ್ ಸಂಸ್ಥೆ) ಮತ್ತು ಯುಡಬ್ಲ್ಯುಡಬ್ಲ್ಯು (ವಿಶ್ವ ಕುಸ್ತಿ ಸಂಘಟನೆ) ವೀಕ್ಷಕರೂ ಹಾಜರಿದ್ದರು. 22 ರಾಜ್ಯ ಸಂಸ್ಥೆಗಳು (ಒಟ್ಟು 25 ಇವೆ. ಮೂರು ಸಂಸ್ಥೆಗಳ ಗೈರು) ಚುನಾವಣೆಯಲ್ಲಿ ಭಾಗವಹಿಸಿದ್ದವು. 47 ಮತಗಳು ಚಲಾವಣೆಯಾದವು. ಅದರಲ್ಲಿ ನಾನು 40 ಮತ ಗಳಿಸಿದೆ’ ಎಂದು ಸಂಜಯ್ ವಿವರಿಸಿದ್ದಾರೆ.

ADVERTISEMENT

‘ಇಷ್ಟೆಲ್ಲ ಪ್ರಕ್ರಿಯೆ ಆದ ನಂತರವೂ ನಮ್ಮನ್ನು ಅಮಾನತುಗೊಳಿಸಿರುವುದನ್ನು ಒಪ್ಪುವುದಿಲ್ಲ. ಪ್ರಜಾಪ್ರಭುತ್ವದಡಿಯಲ್ಲಿ ಚುನಾಯಿತಗೊಂಡಿರುವ ಸಮಿತಿಗೆ ತನ್ನ ವಾದವನ್ನು ಮಂಡಿಸುವ ಅವಕಾಶವನ್ನೂ ನೀಡಲಾಗಿಲ್ಲ. ಇದು ಸಾಮಾಜಿಕ ನ್ಯಾಯದ ನಿಯಮಕ್ಕೆ ವಿರುದ್ಧವಾಗಿದೆ. ಭಾರತದ ಸಂವಿಧಾನದಡಿಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಪಡೆಯುವ ಹಕ್ಕು ಇದೆ’ ಎಂದಿದ್ದಾರೆ.

‘ಡಬ್ಲ್ಯುಎಫ್‌ಐ ಒಂದು ಸ್ವಾಯತ್ತ ಸಮಿತಿಯಾಗಿದೆ. ಸರ್ಕಾರ ಸರಿಯಾದ ಕ್ರಮವನ್ನು ಅನುಸರಿಸಿಲ್ಲ. ಈ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇವೆ. ಒಂದೊಮ್ಮೆ ಸಮಿತಿಯನ್ನು ಅಮಾನತು ಮಾಡಿರುವ ಆದೇಶ ಹಿಂಪಡೆಯದಿದ್ದರೆ ಕಾನೂನು ಸಲಹೆ ಪಡೆಯುತ್ತೇವೆ ಮತ್ತು ಕೋರ್ಟ್‌ ಮೆಟ್ಟಿಲೇರುತ್ತೇವೆ’ ಎಂದಿದ್ದಾರೆ.

ತಮ್ಮ ಅಧ್ಯಕ್ಷತೆಯ ಸಮಿತಿಯ ಮೇಲೆ ಅಮಾನತು ಇರುವವರೆಗೂ ಮೂವರು ಸದಸ್ಯರ ಅಡ್‌ಹಾಕ್ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದಾರೆ. 

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರ ಆಪ್ತರಾಗಿರುವ ಸಂಜಯ್ ಸಿಂಗ್ ಹೋದವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಸಮಿತಿಯು  15 ವರ್ಷ ಮತ್ತು 20 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ಆಯೋಜನೆಯ ಘೋಷಣೆ ಮಾಡಿತ್ತು.

ಆದರೆ ಈ ರೀತಿ ಟೂರ್ನಿಗಳನ್ನು ತರಾತುರಿಯಲ್ಲಿ ಆಯೋಜಿಸುವುದು ಸೂಕ್ತವೂ ಅಲ್ಲ, ನಿಯಮಬಾಹಿರವೂ ಆಗಿದೆ ಎಂದಿರುವ ಕ್ರೀಡಾ ಇಲಾಖೆಯು ಅಮಾನತು ಮಾಡಿತ್ತು.

‘ಡಬ್ಲ್ಯುಎಫ್‌ಐ ಮೇಲಿನ ಅಮಾನತು ತೆರವುಗೊಳಿಸುವಂತೆ ಯುಡಬ್ಲ್ಯುಡಬ್ಲ್ಯುಗೆ ಪತ್ರ ಬರೆದಿದ್ದೇವೆ. ಚುನಾವಣೆಯು ನಿಯಮಬದ್ಧವಾಗಿ ನಡೆದಿದೆ. ಆದ್ದರಿಂದ ಯುಡಬ್ಲ್ಯುಡಬ್ಲ್ಯು ಸ್ಪಂದಿಸುವ ನಿರೀಕ್ಷೆ ಇದೆ. ಸದ್ಯ ಯುರೋಪ್‌ನಲ್ಲಿ ಕಚೆರಿಗಳಿಗೆ ರಜೆ ಇದ್ದು, ನಮಗೆ ಪ್ರತಿಕ್ರಿಯೆ ಸಿಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.