ಸೇಂಟ್ ಲೂಯಿಸ್: ಭಾರತದ ಆರ್.ಪ್ರಜ್ಞಾನಂದ ಅವರು ಸೇಂಟ್ ಲೂಯಿಸ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ಅಮೆರಿಕದ ಲೆವೊನ್ ಅರೋನಿಯನ್ ವಿರುದ್ಧ ಕಪ್ಪು ಕಾಯಿಗಳೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ಮತ್ತು ಅಲಿರೆಜಾ ಫಿರೋಜಾ, ಅಮೆರಿಕದ ಫ್ಯಾಬಿಯಾನೊ ಕರುವಾನಾ ಮತ್ತು ಉಜ್ಬೇಕಿಸ್ತಾನ್‌ನ ನಾಡಿರ್ಬೆಕ್ ಅಬ್ದುಸತ್ತಾರೊವ್ ವಿರುದ್ಧ ಪ್ರಜ್ಞಾನಂದ ಆಡಲಿದ್ದಾರೆ. ಟೂರ್ನಿಯಲ್ಲಿನ ಪ್ರಸ್ತುತ ಮೂರನೇ ಶ್ರೇಯಾಂಕದಿಂದ ಸುಧಾರಿಸಿಕೊಳ್ಳಲು ಅವರಿಗೆ ಉತ್ತಮ ಅವಕಾಶವಿದೆ.
ವರ್ಷದ ಆರಂಭದಲ್ಲಿ ಉತ್ತಮವಾಗಿದ್ದ ಅವರ ಪ್ರದರ್ಶನ ನಂತರ ಗಮನಾರ್ಹವಾಗಿರಲಿಲ್ಲ. ಹೀಗಾಗಿ ಕೆಲವು ಪ್ರಮುಖ ರೇಟಿಂಗ್ ಅಂಕಗಳನ್ನು ಕೈಬಿಟ್ಟು ವಿಶ್ವದ ಹತ್ತು ಅಗ್ರ ಕ್ರಮಾಂಕಗಳಿಂದ ಹೊರಬಂದಿದ್ದರು. ಶೀಘ್ರವಾಗಿ ಉತ್ತಮ ಪ್ರದರ್ಶನಕ್ಕೆ ಮರಳುವ ವ್ಯಕ್ತಿ ಎಂದು ಕರೆಯಲ್ಪಡುವ ಅವರು ಕಳೆದ ವಾರ 19ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಇಲ್ಲಿನ ಎರಡು ಸ್ಪರ್ಧೆಗಳಲ್ಲಿ ಉತ್ತಮವಾಗಿ ಆಡುವ ನಿರೀಕ್ಷೆಯಲ್ಲಿ ಇದ್ದಾರೆ.
ಅಮೆರಿಕದ ಕರುವನಾ ಅವರು ರುಮೇನಿಯಾದ ಬುಕಾರೆಸ್ಟ್‌ನಲ್ಲಿ ನಡೆದ ಸೂಪರ್‌ಬೆಟ್ ಕ್ಲಾಸಿಕ್‌ನಲ್ಲಿ ಅಮೆರಿಕದ ನಾಲ್ಕು ಆಟಗಾರರ ಟೈಬ್ರೇಕರ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ ಮತ್ತು ಕ್ರೊವೇಷ್ಯಾದ ಜಾಗ್ರೆಬ್‌ನಲ್ಲಿ ನಡೆದ ಸೂಪರ್‌ಯುನೈಟೆಡ್ ರಾಪಿಡ್ ಮತ್ತು ಬ್ಲಿಟ್ಜ್‌ನಲ್ಲಿ ಕೂಡಾ ಪ್ರಶಸ್ತಿ ಪಡೆದಿದ್ದಾರೆ.
ಹಿಕಾರು ನಕಮುರಾ ಯಾರ ಜಯವನ್ನು ಬೇಕಾದರೂ ಕಸಿಯಬಲ್ಲರು. ಟೂರ್ನಿಯ ಒಂಬತ್ತು ಆಹ್ವಾನಿತ ಆಟಗಾರರಲ್ಲಿ ನಕಮುರಾ ಅವರಿಲ್ಲ. ವೈಲ್ಡ್-ಕಾರ್ಡ್ ಪ್ರವೇಶ ಪಡೆದಿರುವ ಮೂವರಲ್ಲಿ ಅವರೂ ಒಬ್ಬರಾಗಿದ್ದು, ಸ್ವದೇಶದವರಾದ ಲೆನಿಯರ್ ಡೊಮಿಂಗೊಜ್ ಮತ್ತು ಅರೋನಿಯನ್ ಅವರೊಂದಿಗೆ ಸೆಣಸಲಿದ್ದಾರೆ.
ಐದು ದಿನಗಳ ಈ ಟೂರ್ನಿಯ ನಂತರ ಸಿಂಕ್‌ಫೀಲ್ಡ್ ಕಪ್ ನಡೆಯಲಿದೆ. ಇದು ಈ ವರ್ಷದ ಗ್ರ್ಯಾನ್ ಚೆಸ್ ಟೂರ್ನಿಯ ಕೊನೆಯ ಸ್ಪರ್ಧೆ. ಇದರಲ್ಲಿ ಭಾರತದ ಡಿ.ಗುಕೇಶ್ ಕೂಡ ಪ್ರಜ್ಞಾನಂದ ಜೊತೆ ಭಾಗಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.