ADVERTISEMENT

ಹಂಗೆರಿಯಲ್ಲಿ ಚೆಸ್‌ ಒಲಿಂಪಿಯಾಡ್‌: ಭಾರತ ತಂಡದಲ್ಲಿ ಪ್ರಜ್ಞಾನಂದ, ಗುಕೇಶ್‌

ಪಿಟಿಐ
Published 14 ಜುಲೈ 2024, 15:15 IST
Last Updated 14 ಜುಲೈ 2024, 15:15 IST
<div class="paragraphs"><p>ಡಿ. ಗುಕೇಶ್‌</p></div>

ಡಿ. ಗುಕೇಶ್‌

   

ಚೆನ್ನೈ: ಭಾರತದ ಯುವತಾರೆಗಳಾದ ಡಿ.ಗುಕೇಶ್‌ ಮತ್ತು ಪ್ರಜ್ಞಾನಂದ ಅವರು, ಹಂಗೆರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ನಡೆಯಲಿರುವ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಒಳಗೊಂಡಿದ್ದಾರೆ.

ವರ್ಷಾಂತ್ಯಕ್ಕೆ ನಡೆಯಲಿರುವ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಡಿಂಗ್ ಲಿರೆನ್ ಅವರಿಗೆ ಗುಕೇಶ್‌ ಚಾಲೆಂಜರ್‌ ಆಗಿದ್ದಾರೆ. ಅದಕ್ಕೆ ಮೊದಲು ನಡೆಯುವ ಒಲಿಂಪಿಯಾಡ್‌ ಗುಕೇಶ್ ಅವರಿಗೆ ಸಿದ್ಧತೆ ನಡೆಸಲು ಅವಕಾಶ ಒದಗಿಸಿದೆ. ಭಾರತ ತಂಡಗಳ ಆಯ್ಕೆಯನ್ನು ಎಐಸಿಎಫ್‌ ಅಧ್ಯಕ್ಷ ನಿತಿನ್‌ ನಾರಂಗ್ ಸುದ್ದಿಸಂಸ್ಥೆಗೆ ಖಚಿತಪಡಿಸಿದರು.

ADVERTISEMENT

ಗುಕೇಶ್‌, ಪ್ರಜ್ಞಾನಂದ ಜೊತೆ ಅರ್ಜುನ್ ಇರಿಗೇಶಿ, ವಿದಿತ್‌ ಗುಜರಾತಿ ಮತ್ತು ಪೆಂಟ್ಯಾಲ ಹರಿಕೃಷ್ಣ ಪುರುಷರ ತಂಡದ ಇತರ ಆಟಗಾರರಾಗಿದ್ದಾರೆ.

ಮಹಿಳಾ ತಂಡದಲ್ಲಿ ದ್ರೋಣವಲ್ಲಿ ಹಾರಿಕ, ವೈಶಾಲಿ ರಮೇಶ್‌ಬಾಬು, ದಿವ್ಯಾ ದೇಶಮುಖ್, ವಂತಿಕಾ ಅಗರವಾಲ್‌ ಮತ್ತು ತನಿಯಾ ಸಚ್‌ದೇವ್ ಇದ್ದಾರೆ. 2022ರಲ್ಲಿ ಕಂಚು ಗೆದ್ದ ತಂಡದಲ್ಲಿದ್ದ ಕೋನೇರು ಹಂಪಿ ಈ ಬಾರಿ ಅವಕಾಶ ಪಡೆದಿಲ್ಲ. ಕಾರಣ ತಿಳಿದುಬಂದಿಲ್ಲ.

ಒಲಿಂಪಿಯಾಡ್‌ ಪೂರ್ವದಲ್ಲಿ ಶಿಬಿರ ನಡೆಸಲು ಕೋಚ್‌ಗಳ ಜೊತೆ ಚರ್ಚೆ ನಡೆಯುತ್ತಿದೆ ಎಂದು ನಾರಂಗ್ ಹೇಳಿದರು. ಶಿಬಿರ ಆಗಸ್ಟ್‌ನಲ್ಲಿ ನಡೆಯಲಿದ್ದು, ಸ್ಥಳ ಮತ್ತು ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದರು.

ಭಾರತ ಮೊದಲ ಬಾರಿ 2022ರಲ್ಲಿ ಚೆಸ್ ಒಲಿಂಪಿಯಾಡ್‌ನ ಆತಿಥ್ಯ ವಹಿಸಿತ್ತು. ಚೆನ್ನೈನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಭಾರತ ಓಪನ್ ಮತ್ತು ಮಹಿಳಾ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.