ಸಿಂಗಪುರ: ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಮತ್ತು ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ನಡುವಣ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯ ಮಂಗಳವಾರ ಡ್ರಾ ಆಯಿತು. ಪಂದ್ಯದಲ್ಲಿ ಅಂಥ ಏರುಪೇರುಗಳೇನೂ ನಡೆಯಲಿಲ್ಲ.
ಪಂದ್ಯ 23ನೇ ನಡೆಯ ನಂತರ ‘ನಡೆಗಳ ಪುನರಾವರ್ತನೆ’ಯಿಂದ (ತ್ರೀ ಫೋಲ್ಡ್ ರಿಪಿಟೇಶನ್) ‘ಡ್ರಾ’ ಆಯಿತು. ಚೆಸ್ ನಿಯಮಗಳ ಪ್ರಕಾರ ಆಟಗಾರರು ಮೂರು ಬಾರಿ ಒಂದೇ ರೀತಿಯ ನಡೆಗಳನ್ನಿರಿಸಿದರೆ ಅದು ಡ್ರಾ ಆದಂತೆ.
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಜಯಗಳಿಸಿದ್ದ ಚೀನಾದ ಆಟಗಾರ ಈಗ 1.5–0.5 ಅಂಕಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬುಧವಾರ ಮೂರನೇ ಪಂದ್ಯ ನಡೆಯಲಿದ್ದು ಬಿಳಿ ಕಾಯಿಗಳಲ್ಲಿ ಆಡುವ ಸರದಿ ಗುಕೇಶ್ ಅವರದ್ದು.
ಮಂಗಳವಾರ ಕಪ್ಪು ಕಾಯಿಗಳಲ್ಲಿ ಆಡಿದ್ದ ಗುಕೇಶ್‌ಗೆ ಈ ಆಟ ಮೊದಲ ಸುತ್ತಿನ ಹಿನ್ನಡೆಯಿಂದ ಸ್ವಲ್ಪ ಸುಧಾರಿಸಿಕೊಳ್ಳಲು ನೆರವಾಯಿತು. ಬಿಳಿ ಕಾಯಿಗಳಲ್ಲಿ ಆಡಿದ ಲಿರೆನ್ ಅವರಿಗೆ ಆಟದಲ್ಲಿ ಹೆಚ್ಚಿನದೇನನ್ನೂ ಸಾಧಿಸಲಾಗಲಿಲ್ಲ.
‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಪ್ಪು ಕಾಯಿಗಳಲ್ಲಿ ಆಡಿ ಡ್ರಾ ಮಾಡಿಕೊಳ್ಳುವುದು ಸ್ವಲ್ಪ ಸಮಾಧಾನದ ವಿಷಯ. ನಮ್ಮ ಮುಂದೆ ಕ್ರಮಿಸಲು ದೀರ್ಘ ಹಾದಿಯಿದೆ’ ಎಂದು 18 ವರ್ಷ ವಯಸ್ಸಿನ ಗುಕೇಶ್ ಪ್ರತಿಕ್ರಿಯಿಸಿದರು. ಸೋಮವಾರದ ಪಂದ್ಯದಲ್ಲಿ ಯಾವುದೂ ಗುಕೇಶ್ ಯೋಜನೆಯಂತೆ ನಡೆದಿರಲಿಲ್ಲ.
‘ನಾನು ಸದ್ಯ ಮುಂದಿನ ಒಂದು ಪಂದ್ಯದ ಕಡೆಗಷ್ಟೇ ನನ್ನ ಗಮನ ಕೇಂದ್ರೀಕರಿಸುತ್ತೇನೆ. ಮುಂದಿನ ಸುತ್ತುಗಳು ನಾನು ಅಂದುಕೊಂಡ ಹಾಗೆ ಸಾಗಹುದೆಂಬ ವಿಶ್ವಾಸವಿದೆ’ ಎಂದೂ ಚೆನ್ನೈ ಆಟಗಾರ ಹೇಳಿದರು.
‘ಎರಡನೇ ಸುತ್ತಿನಲ್ಲಿ ಆಡಿದ ರೀತಿ ಸಂತೃಪ್ತಿ ತಂದಿದೆ. ಮೊದಲ ಸುತ್ತಿನಲ್ಲಿ ನಾನು ಹೊಸದಾದ ತಂತ್ರದೊಂದಿಗೆ ಆಡಿದ್ದೆ. ಆದಕ್ಕೆ ಸಾಕಷ್ಟು ಜ್ಞಾಪಕ ಶಕ್ತಿ ಇರಬೇಕಾಗುತ್ತದೆ. ಇಂದಿನ ಆಟಕ್ಕೂ ಸಾಕಷ್ಟು ತಯಾರಿ ನಡೆಸಿದ್ದೆ. ಸ್ವಲ್ಪ ವಿಭಿನ್ನ ನಡೆಯನ್ನೂ (1. e4) ಇರಿಸಿದ್ದೆ’ ಎಂದು 32 ವರ್ಷ ವಯಸ್ಸಿನ ಲಿರೆನ್ ಹೇಳಿದರು.
₹21 ಕೋಟಿ ಬಹುಮಾನ ಮೊತ್ತ ಹೊಂದಿರುವ ಈ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ 14 ಆಟಗಳನ್ನು ಹೊಂದಿದೆ. ಮೊದಲು 7.5 ಅಂಕ ತಲುಪುವ ಆಟಗಾರ ವಿಶ್ವ ಚಾಂಪಿಯನ್ ಪಟ್ಟಕ್ಕೇರಲಿದ್ದಾರೆ.
ವಿಶ್ವನಾಥನ್ ಆನಂದ್ ನಂತರ ಭಾರತದ ಎರಡನೇ ವಿಶ್ವ ಚಾಂಪಿಯನ್ ಆಗುವ ಯತ್ನದಲ್ಲಿ ಗುಕೇಶ್ ಇದ್ದಾರೆ. ಆನಂದ್ ಐದು ಬಾರಿ (2000– 213 ಅವಧಿಯಲ್ಲಿ) ವಿಶ್ವ ಚಾಂಪಿಯನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.