ADVERTISEMENT

ಗಟ್ಟಿ ಮನೋಬಲದ ಆಟಗಾರ ಗುಕೇಶ್‌: ಗ್ರ್ಯಾಂಡ್‌ಮಾಸ್ಟರ್‌ ಜಿ.ಎ.ಸ್ಟ್ಯಾನಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 20:35 IST
Last Updated 22 ಏಪ್ರಿಲ್ 2024, 20:35 IST
ಸ್ಟ್ಯಾನಿ
ಸ್ಟ್ಯಾನಿ   

ಬೆಂಗಳೂರು: ‘ಸಣ್ಣ ವಯಸ್ಸಿನಲ್ಲೇ ಗಟ್ಟಿ ಮನೋಬಲ ಹೊಂದಿರುವ ಆಟಗಾರ ಡಿ.ಗುಕೇಶ್‌. ಬರೇ 17ರ ವಯಸ್ಸಿನಲ್ಲಿ ಅವರು ಇಂಥ  ಮಾನಸಿಕ ದೃಢತೆ ಹೊಂದಿರುವುದು ವಿಶೇಷ. ಜೊತೆಗೆ ಪಂದ್ಯದಲ್ಲಿ ಅವರು ಎಷ್ಟೇ ಹಿನ್ನಡೆಯಲ್ಲಿರಲಿ, ಗೆಲುವಿಗೆ ದಾರಿ ಕಂಡುಕೊಳ್ಳುವ ಪ್ರಯತ್ನದಲ್ಲಂತೂ ಚಾಣಾಕ್ಷ....’

ಭಾನುವಾರ ಮುಕ್ತಾಯಗೊಂಡ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಗುಕೇಶ್ ಅವರ ಸಾಮರ್ಥ್ಯವನ್ನು ಹೀಗೆ ಬಣ್ಣಿಸಿದವರು ಗ್ರ್ಯಾಂಡ್‌ಮಾಸ್ಟರ್‌ ಜಿ.ಎ.ಸ್ಟ್ಯಾನಿ.

‘ಕೋವಿಡ್‌ ಸಮಯದಲ್ಲಿ ಅವರೊಡನೆ ಕೆಲವು ಆನ್‌ಲೈನ್‌ ಪಂದ್ಯಗಳನ್ನು ಆಡಿದ್ದೆ. ಅವರು ಸೋಲುವ ಸ್ಥಿತಿಯಲ್ಲಿದ್ದರೂ ಬಿಟ್ಟುಕೊಡುವುದಿಲ್ಲ. ತಂತ್ರಗಾರಿಕೆ ರೂಪಿಸುವ ಸಣ್ಣ ಎಳೆಯಿದ್ದರೂ ಹುಡುಕಿ ಗೆಲುವಿಗೆ ಯತ್ನಿಸುತ್ತಾರೆ. ಸಮಯದ ಒತ್ತಡದಲ್ಲೂ ವೇಗವಾಗಿ ಆಟವಾಡುವ ಚಾಣಾಕ್ಷ. ಬೇರೆ ಪ್ರಬಲ ಆಟಗಾರರು ಅಂಥ ಸ್ಥಿತಿಯಲ್ಲಿದ್ದರೆ ರಕ್ಷಣೆಗೆ ಹೋಗಿ, ಡ್ರಾಕ್ಕೆ ಯತ್ನಿಸುತ್ತಾರಷ್ಟೇ’ ಎಂದು ಅವರು ಶಿವಮೊಗ್ಗದಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೊದಲ ಸುತ್ತಿನಲ್ಲಿ ಅಲಿರೇಝಾ ಫಿರೋಜ್ ವಿರುದ್ಧ ಅವರು ಗೆಲುವಿನ ಅವಕಾಶ ವ್ಯರ್ಥಪಡಿಸಿಕೊಂಡರು. ಮರುದಿನ ವಿಶ್ರಾಂತಿ ದಿನವಾಗಿತ್ತು. ಆ ಪಂದ್ಯದ ನಂತರವೇ ತಮಗೆ ಗೆಲ್ಲುವ ವಿಶ್ವಾಸ ಮೂಡಿತ್ತು ಎಂದು ಪ್ರಶಸ್ತಿ ಗೆಲುವಿನ ನಂತರ ಗುಕೇಶ್‌ ಹೇಳಿದ್ದು ಅಕ್ಷರಶಃ ನಿಜ. ನಂತರ ಅವರು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಲಿಲ್ಲ. ಬಹುತೇಕ ಸುತ್ತುಗಳಲ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದರು’ ಎಂದು ತಿಳಿಸಿದರು.

ಹಾಲಿ ವಿಶ್ವ ಚಾಂಪಿಯನ್‌ ಡಿಂಗ್‌ ಲಿರೆನ್‌ ಮೊದಲಿನ ಲಯದಲ್ಲಿ ಇಲ್ಲ. ಈ ವರ್ಷ ಕೆಲವು ಟೂರ್ನಿಗಳಲ್ಲಿ ನಿರಾಸೆ ಕಂಡಿದ್ದಾರೆ. ಹೀಗಾಗಿ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲೂ ಗುಕೇಶ್‌ ಅವರಿಗೆ ಚಾಂಪಿಯನ್‌ ಆಗಲು ಉತ್ತಮ ಅವಕಾಶವಿದೆ.

ವಿಶ್ವನಾಥನ್ ಆನಂದ್‌, ತಮ್ಮ ಮತ್ತು ಮುಂದಿನ ತಲೆಮಾರನ್ನು ಪ್ರಭಾವಿಸಿದಂತೆ, ಗುಕೇಶ್ ಅವರ ಗೆಲುವು ಸಹ ಎಳೆಯ ಆಟಗಾರರಿಗೆ ಪ್ರೇರಣೆ ಮೂಡಿಸಬಲ್ಲದು. ಭಾರತದಲ್ಲಿ ಚೆಸ್‌ ಕ್ರಾಂತಿ ಮುಂದುವರಿಯಲು ಈ ಗೆಲುವು ನೆರವಾಗಲಿದೆ ಎಂದರು.

ಫ್ಯಾಬಿಯಾನೊ ಕರುವಾನಾ ಅವರು ಗೆಲುವಿನ ಸ್ಥಿತಿಯಲ್ಲಿದ್ದು 2–3 ಸಲ ತಪ್ಪೆಸಗಿ ಕೊನೆಗೆ ಡ್ರಾ ಮಾಡಿಕೊಂಡಿದ್ದೂ ಗುಕೇಶ್‌ಗೆ ನೆರವಾಯಿತು. ದುರದೃಷ್ಟವಶಾತ್‌ ಅವರಿಗೆ ಕೊನೆಯ ಸುತ್ತಿನಲ್ಲಿ ಹೀಗಾಯಿತು ಎಂದರು.

‘ಈ ಸಲದ ಕ್ಯಾಂಡಿಡೇಟ್ಸ್‌ ಟೂರ್ನಿ ಅತಿ ಪ್ರಬಲವಾಗಿತ್ತು. ಕೊನೆಯ ಸುತ್ತು ಇದ್ದಾಗ ನಾಲ್ಕು ಮಂದಿಗೆ (ಗುಕೇಶ್‌, ನೆಪೊಮ್‌ನಿಷಿ, ಕರುವಾನಾ, ನಕಾಮುರಾ) ಗೆಲ್ಲುವ ಅವಕಾಶವಿತ್ತು. ಸಾಮಾನ್ಯವಾಗಿ ಇಂಥ ದೊಡ್ಡ ಟೂರ್ನಿಯಲ್ಲಿ ಕೊನೆಯ ಕೆಲವು ಸುತ್ತುಗಳಿದ್ದಾಗ ಒಬ್ಬಿಬ್ಬರ ನಡುವೆ ಪೈಪೋಟಿ ಇರುತ್ತದೆ’ ಎಂದು ಅವರು ಹೇಳಿದರು.

ಗುಕೇಶ್‌ಗೆ ಪ್ರೇರಣೆ

ಚೆನ್ನೈ: ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ವಿಶ್ವನಾಥನ್ ಆನಂದ್‌ ನಡುವಣ 2013ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯವು, ಚೆಸ್‌ ಆಟದಲ್ಲಿ ಆಸಕ್ತಿ ತಳೆಯಲು ಡಿ.ಗುಕೇಶ್‌ ಅವರಿಗೆ ಪ್ರೇರಣೆ ನೀಡಿತು.

ಅವರ ತಂದೆ ಡಾ.ರಜನೀಕಾಂತ್ ಅವರು ಇಎನ್‌ಟಿ ತಜ್ಞ. ತಾಯಿ ಪದ್ಮಾ ಕುಮಾರಿ ಅವರು ಮೈಕ್ರೊಬಯಾಲಜಿಸ್ಟ್‌.

‘ಅವನು (ಗುಕೇಶ್‌) ವಿಶ್ವ ಚಾಂಪಿಯನ್‌ಷಿಪ್ಸ್‌ಗಾಗಿ ಎದುರುನೋಡುತ್ತಿದ್ದೇವೆ. ಚೆಸ್‌ನಲ್ಲೇ ಅತಿ ದೊಡ್ಡ ಸ್ಪರ್ಧೆ. ಆದರೆ ಈಗಲೇ ಆ ಬಗ್ಗೆ ಯೋಚಿಸುವುದಿಲ್ಲ’ ಎಂದು ಸೋಮವಾರ ಬೆಳಗಿನ ಜಾವ ವಿಷಯ ತಿಳಿದ ತಕ್ಷಣ ಪದ್ಮಾ ಪ್ರತಿಕ್ರಿಯಿಸಿದರು.

ಚೆಸ್‌ಗಾಗಿ ಗುಕೇಶ್‌ 4ನೇ ತರಗತಿ ನಂತರ ಶಾಲೆಗೆ ಹೋಗುವುದನ್ನೇ ಬಿಟ್ಟರು.

ಮಗನಿಗಾಗಿ ಏಳೆಂಟು ವರ್ಷಗಳಿಂದ ತಂದೆ ಸಹ ವೈದ್ಯಕೀಯ ವೃತ್ತಿಯನ್ನು ಬಿಟ್ಟುಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.