ಸಿಂಗಪುರ: ಮಧ್ಯಮಹಂತದ (ಮಿಡ್ಲ್‌ಗೇಮ್) ಆಟವನ್ನು ಸಂಕೀರ್ಣಗೊಳಿಸಲು ಹೋಗಿದ್ದು, ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರ ಪಾಲಿಗೆ ದುಬಾರಿಯಾಯಿತು. ಸೋಮವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಫೈನಲ್‌ನ ಮೊದಲ ಆಟದಲ್ಲಿ ಚೀನಾದ ಡಿಂಗ್ ಲಿರೆನ್, ಭಾರತದ ಆಟಗಾರನ ಮೇಲೆ ಜಯಗಳಿಸಿದರು.
ಲಿರೆನ್ ಈ ಗೆಲುವಿನಿಂದ 14 ಆಟಗಳಿರುವ ಫೈನಲ್‌ನಲ್ಲಿ 1–0 ಮುನ್ನಡೆ ಪಡೆದರು. ಡಿಸೆಂಬರ್ 13ರವರೆಗೆ ಈ ಚಾಂಪಿಯನ್‌ಷಿಪ್ ನಡೆಯಲಿದೆ. ಇಬ್ಬರಲ್ಲಿ ಮೊದಲು 7.5 ಪಾಯಿಂಟ್ಸ್ ಗಳಿಸುವ ಆಟಗಾರ ವಿಶ್ವ ಚಾಂಪಿಯನ್ ಕಿರೀಟ ಧರಿಸಲಿದ್ದಾರೆ.
‘ಆರಂಭದಲ್ಲಿ ಹೀಗೆ ಆಗುತ್ತದೆ. ಇದು ದೀರ್ಘ ಅವಧಿಯ ಫೈನಲ್. ನನ್ನ ಎದುರಾಳಿಯ ಫಾರ್ಮ್ ಬಗ್ಗೆ ನಾನೇನೂ ನಿರೀಕ್ಷೆ ಹೊಂದಿರಲಿಲ್ಲ. ಅವರು ಉತ್ತಮ ಆಟ ಆಡುವರೆಂದಷ್ಟೇ ಯೋಚಿಸಿದ್ದೆ. ನಮ್ಮ ಮುಂದೆ ದೀರ್ಘ ಹಾದಿಯಿದೆ’ ಎಂದು 18 ವರ್ಷ ವಯಸ್ಸಿನ ಗುಕೇಶ್ ಆಟದ ನಂತರ ಪ್ರತಿಕ್ರಿಯಿಸಿದರು.
ಕಪ್ಪುಕಾಯಿಗಳಲ್ಲಿ ಆಡಿ ಸಾಧಿಸಿದ ಗೆಲುವು, 32 ವರ್ಷ ವಯಸ್ಸಿನ ಲಿರೆನ್‌ಗೆ ಪೂರ್ಣ ಪಾಯಿಂಟ್ ಜೊತೆಗೆ ಹೆಚ್ಚಿನ ಮನೋಸ್ಥೈರ್ಯ ತಂದುಕೊಟ್ಟಿತು. ಈ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಬರುವಾಗ ಅವರು ಅಂಥ ಫಾರ್ಮಿನಲ್ಲೇನೂ ಇರಲಿಲ್ಲ. ಸಾಲದ್ದಕ್ಕೆ ಈ ವರ್ಷ ಒಂದೂ ಶಾಸ್ತ್ರೀಯ (ದೀರ್ಘ ಅವಧಿಯ) ಆಟ ಗೆದ್ದಿರಲಿಲ್ಲ.
ಅತ್ಯಂತ ಕಿರಿಯ ಚಾಲೆಂಜರ್ ಎನಿಸಿರುವ ಗುಕೇಶ್ ರಾಜನೆದುರಿನ ಕಾಲಾಳನ್ನು ಮುನ್ನಡೆಸಿ ಆಟ ಆರಂಭಿಸಿದರು. ಇದು ಆಕ್ರಮಣದ ಇರಾದೆ ಸೂಚಿಸುವಂತಿತ್ತು. ಇದನ್ನು ತಡೆಯಲು ಲಿರೆನ್ ಅನುಸರಿಸಿದ್ದು ಫ್ರೆಂಚ್ ಡಿಫೆನ್ಸ್ ಮಾದರಿಯನ್ನು. ಗುಕೇಶ್ ಅನುಸರಿಸಿದ ಮೊದಲ ಕೆಲವು ನಡೆಗಳು, ವಿಶ್ವನಾಥನ್ ಆನಂದ್ ಅವರು ತಮ್ಮ ಮೊದಲ (2001ರ) ವಿಶ್ವಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಅಲೆಕ್ಸಿ ಶಿರೋವ್ ವಿರುದ್ಧ ಆಡಿದ ರೀತಿಯಲ್ಲೇ ಇದ್ದವು.
10ನೇ ನಡೆಯಲ್ಲಿ ಗುಕೇಶ್ ಸಿದ್ಧಸೂತ್ರ ಬದಲಿಸಿ ಹೊಸ (ಪಾನ್ ಜಿ4) ನಡೆಯನ್ನಿರಿಸಿದರು. 12ನೇ ನಡೆಯವರೆಗೆ ಗುಕೇಶ್ ಪರಿಸ್ಥಿತಿ ಉತ್ತಮವಾಗೇ ಇತ್ತು. ಅವರು ಬೇಗ ಬೇಗ ನಡೆಗಳನ್ನಿರಿಸಿದರು. ಆದರೆ ನಿಧಾನವಾಗಿ ಲಿರೆನ್ ಕೂಡ ಆಕ್ರಮಣಕ್ಕೆ ತಂತ್ರ ಹೆಣೆದರು. ಎಂಟು ನಡೆಗಳ ನಂತರ– ಅವರ 20 ಮತ್ತು 21ನೇ ನಡೆ (qc4, d3) ಅತ್ಯುತ್ತಮವೆನಿಸಿದವು. ಈ ನಡೆಗಳು ಅವರಲ್ಲಿ ವಿಶ್ವಾಸ ಹೆಚ್ಚಿಸಿದವು.
ಈ ಹಂತದಲ್ಲಿ ಚೀನಾ ಆಟಗಾರ ಉತ್ತಮ ನಡೆಗಳನ್ನು ಇರಿಸತೊಡಗಿದರು. ಹೀಗಾಗಿ ಒತ್ತಡಕ್ಕೆ ಸಿಲುಕಿ ಗುಕೇಶ್ ಮಧ್ಯಮ ಹಂತದ ಆಟದಲ್ಲಿ ಎಡವಿ 42ನೇ ನಡೆಯಲ್ಲಿ ಆಟ ಬಿಟ್ಟುಕೊಟ್ಟರು.
‘ನಾನು ದೀರ್ಘ ಕಾಲದಿಂದ ಒಂದೂ ದೀರ್ಘ ಅವಧಿಯ ಆಟ ಗೆದ್ದಿರಲಿಲ್ಲ. ಈಗ ಅದು ಸಾಧ್ಯವಾಗಿದೆ. ಆದರೆ ನ್ಯಾಯೋಚಿತವಾಗಿ ಹೇಳಬೇಕಾದರೆ ನಾನು ಅದೃಷ್ಟಶಾಲಿ. ಎರಡು ಬಾರಿ ತಂತ್ರ ರೂಪಿಸುವಲ್ಲಿ ನಾನು ತಪ್ಪು ಮಾಡಿದ್ದೆ’ ಎಂದು ಲಿರೆನ್ ವಿಶ್ಲೇಷಿಸಿದರು.
‘ಇದು ಮೊದಲ ಪಂದ್ಯವಾಗಿದ್ದರಿಂದ ಆತ ಸ್ವಲ್ಪ ನರ್ವಸ್ ಆಗಿರುವ ಸಾಧ್ಯತೆಯಿತ್ತು. ಹೀಗಾಗಿ ಎಂದಿನ ಶೈಲಿಯಲ್ಲಿ ಆಡದೇ, ದೀರ್ಘ ಕಾಲದ ಬಳಿಕ ಸ್ವಲ್ಪ ಬೇರೆ ರೀತಿಯ ಆಟ ಆಡಿದ್ದೆ. ಅದು ಫಲ ನೀಡಿತು’ ಎಂದರು.
ಕ್ವೀನ್‌ಸೈಡ್‌ನಲ್ಲಿ ಕಾಲಾಳನ್ನು ಕಳೆದುಕೊಂಡ ಬಳಿಕ ಗುಕೇಶ್ ಅವರಿಗೆ ತಮ್ಮಲ್ಲಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲು ಆಗಲಿಲ್ಲ.
₹21 ಕೋಟಿ ಬಹುಮಾನದ ಫೈನಲ್‌ನ ಎರಡನೇ ಆಟ ಮಂಗಳವಾರ ನಡೆಯಲಿದ್ದು, ಲಿರೆನ್ ಬಿಳಿಕಾಯಿಗಳಲ್ಲಿ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.