ADVERTISEMENT

ಟಾಟಾ ಸ್ಟೀಲ್‌ ಚೆಸ್: ಗುಕೇಶ್‌ಗೆ ಸತತ ಎರಡನೇ ಜಯ

ಟಾಟಾ ಸ್ಟೀಲ್‌ ಚೆಸ್: ಆರನೇ ಸುತ್ತು

ಪಿಟಿಐ
Published 20 ಜನವರಿ 2024, 16:03 IST
Last Updated 20 ಜನವರಿ 2024, 16:03 IST
ಡಿ.ಗುಕೇಶ್
ಡಿ.ಗುಕೇಶ್   

ವಿಯ್ಕ್‌ ಆನ್ ಝೀ (ನೆದರ್ಲೆಂಡ್ಸ್‌): ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಅವರು ಟಾಟಾ ಸ್ಟೀಲ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ಹಾಲೆಂಡ್‌ನ ಜೊರ್ಡೆನ್ ವಾನ್‌ ಫೊರೀಸ್ಟ್‌ ಅವರನ್ನು ಸೋಲಿಸಿ ಸತತ ಎರಡನೇ ಜಯ ದಾಖಲಿಸಿದರು. ಅವರು ಶನಿವಾರ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಶುಕ್ರವಾರ ಇಯಾನ್ ನಿಪೊಮ್‌ನಿಯಾಚಿ ಅವರನ್ನು ಸೋಲಿಸಿದ್ದ ಗುಕೇಶ್, ಕಪ್ಪು ಕಾಯಿಗಳಲ್ಲಿ ಆಡಿ ಫೋರೀಸ್ಟ್ ಮೇಲೆ ಜಯಗಳಿಸಿದರು. ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಇನ್ನೊಂದು ಪಂದ್ಯದಲ್ಲಿ ನಿಪೊಮ್‌ನಿಯಾಚಿ ಸಂಗಡ ‘ಡ್ರಾ’ ಮಡಿಕೊಂಡರು.

ವಿದಿತ್‌ ಎಸ್‌.ಗುಜರಾತಿ ಅವರು ಸೋಲದಿದ್ದರೂ ಜಯ ಕೈಗೆಟಕಿಲ್ಲ. ಅವರು ಆರನೇ ಸುತ್ತಿನಲ್ಲಿ ಮಹಿಳಾ ವಿಶ್ವ ಚಾಂಪಿಯನ್ ಜು ವೆನ್‌ಜುನ್ ಅವರ ಜೊತೆ ಡ್ರಾ ಮಾಡಿಕೊಂಡರು. ಇದು ಅವರಿಗೆ ಆರನೇ ‘ಡ್ರಾ’.

ADVERTISEMENT

‌ಇನ್ನೂ ಏಳು ಸುತ್ತಿನ ಪಂದ್ಯಗಳು ಬಾಕಿವುಳಿದಿವೆ. ಆತಿಥೇಯ ದೇಶದ ಅನಿಶ್ ಗಿರಿ 4.5 ಅಂಕಗಳೊಂದಿಗೆ ಮುನ್ನಡೆಯನ್ನು ಉಳಿಸಿಕೊಂಡಿದ್ದಾರೆ. ಫ್ರಾನ್ಸ್‌ನ ಫಿರೋಜ್ ಅಲಿರೇಝಾ ಅವರು (4) ಎರಡನೇ ಸ್ಥಾನದಲ್ಲಿದ್ದಾರೆ. ಅನಿಶ್ ಆರನೇ ಸುತ್ತಿನಲ್ಲಿ ಇರಾನ್‌ನ ಪರ್ಹಾಮ್ ಮಘಶೂಡ್ಲು (1.5) ಜೊತೆ ಡ್ರಾ ಮಾಡಿಕೊಂಡರು. ಅಲಿರೇಝಾ, ಚೀನಾದ ವೀ ಇ (3) ಅವರನ್ನು ಸೋಲಿಸಿದರು.

ವಿಶ್ವ ಚಾಂ‍ಪಿಯನ್ ಡಿಂಗ್ ಲಿರೆನ್ (3) ಅವರು ಅಬ್ದುಸತ್ತಾರೊವ್ ಜೊತೆ ಪಾಯಿಂಟ್‌ ಹಂಚಿಕೊಂಡರು.

ಪ್ರಜ್ಞಾನಂದ, ಗುಕೇಶ್‌, ನಾಡಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ), ಮ್ಯಾಕ್ಸ್‌ ವಾರ್ಮೆರ್‌ಡ್ಯಾಮ್ (ಹಾಲೆಂಡ್) ಅವರು ತಲಾ 3.5 ಪಾಯಿಂಟ್ಸ್ ಕಲೆಹಾಕಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ವಿದಿತ್‌ ಸೇರಿದಂತೆ ನಾಲ್ವರು ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.