ADVERTISEMENT

ಸಿಂಕ್ವೆಫೀಲ್ಡ್‌ ಚೆಸ್‌: ಹೆಚ್ಚಿನ ಪಂದ್ಯ ಡ್ರಾ

ಪಿಟಿಐ
Published 23 ಆಗಸ್ಟ್ 2024, 13:02 IST
Last Updated 23 ಆಗಸ್ಟ್ 2024, 13:02 IST
ಹಾಲೆಂಡ್‌ನ ಅನಿಶ್‌ ಗಿರಿ
ಎಎಫ್‌ಪಿ ಚಿತ್ರ
ಹಾಲೆಂಡ್‌ನ ಅನಿಶ್‌ ಗಿರಿ ಎಎಫ್‌ಪಿ ಚಿತ್ರ   

ಸೇಂಟ್ ಲೂಯಿ (ಅಮೆರಿಕ): ವಿಶ್ವ ಚಾಂಪಿಯನ್‌ಗೆ ಸವಾಲುಹಾಕುವ ಅರ್ಹತೆ ಪಡೆದಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಸಿಂಕ್ವೆಫೀಲ್ಡ್ ಕಪ್ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಜಾ ಫಿರೋಜ್ ಜೊತೆಗಿನ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು.

ಜಂಟಿ ಅಗ್ರಸ್ಥಾನದಲ್ಲಿರುವ ಫಿರೋಜ್‌ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರ ಸ್ವಲ್ಪ ಅನುಕೂಲಕರ ಸ್ಥಿತಿಯಲ್ಲಿದ್ದರೂ ಗೆಲುವು ಸಾಧಿಸಲು ಆಗಲಿಲ್ಲ. ಇನ್ನೊಂದೆಡೆ ಅಲಿರೇಜಾ ‘ಡ್ರಾ’ ಮಾಡಲು ಕಷ್ಟಪಡಬೇಕಾಯಿತು.

ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಹಾಲೆಂಡ್‌ನ ಅನೀಶ್ ಗಿರಿ ಜೊತೆಗಿನ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು.

ADVERTISEMENT

10 ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯಲ್ಲಿ ಇನ್ನು ಐದು ಸುತ್ತುಗಳು ಉಳಿದಿವೆ. ಗುಕೇಶ್‌, ಪ್ರಜ್ಞಾನಂದ ಅವರು ಇದುವರೆಗೆ ಆಡಿದ ನಾಲ್ಕೂ ಪಂದ್ಯಗಳನ್ನು ‘ಡ್ರಾ’ ಮಾಡಿಕೊಂಡಿದ್ದಾರೆ.

ಅಲಿರೇಜಾ ಮತ್ತು ವೆಸ್ಲಿ ಸೊ ತಲಾ ಎರಡೂವರೆ ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆರು ಮಂದಿ ಆಟಗಾರರು (ಫ್ಯಾಬಿಯಾನೊ ಕರುವಾನಾ, ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌, ಇಯಾನ್‌ ನಿಪೊಮ್‌ನಿಯಾಷಿ, ಚೀನಾ ಡಿಂಗ್ ಲಿರೆನ್‌, ಪ್ರಜ್ಞಾನಂದ ಮತ್ತು ಡಿ.ಗುಕೇಶ್‌) ತಲಾ ಎರಡು ಪಾಯಿಂಟ್ಸ್ ಪಡೆದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಡಚ್‌ ಆಟಗಾರ ಅನಿಶ್ ಗಿರಿ ಮತ್ತು ಉಜ್ಬೇಕ್‌ ಆಟಗಾರ ನಾಡಿರ್ಬೆಕ್‌ ಅಬ್ದುಸತ್ತಾರೋವ್ ತಲಾ ಒಂದೂವರೆ ಅಂಕ ಸಂಗ್ರಹಿಸಿ ಕೊನೆಯ ಸ್ಥಾನದಲ್ಲಿದ್ದಾರೆ.

ದಿನದ ಐದು ಪಂದ್ಯಗಳ ಪೈಕಿ ನಾಲ್ಕು ‘ಡ್ರಾ’ ಆದವು. ನಿರ್ಣಾಯಕ ಫಲಿತಾಂಶ ಕಂಡ ಏಕೈಕ ಪಂದ್ಯದಲ್ಲಿ ಅಮೆರಿಕದ ವೆಸ್ಲಿ ಸೊ ಅವರು ಫಿಡೆಯನ್ನು ಪ್ರತಿನಿಧಿಸುತ್ತಿರುವ ರಷ್ಯಾದ ಆಟಗಾರ ಇಯಾನ್‌ ನಿಪೊಮ್‌ನಿಯಾಷಿ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಲಿರೆನ್‌, ಕರುವಾನಾ ಜೊತೆ, ಲಗ್ರಾವ್‌ ಅವರು ಅಬ್ದುಸತ್ತಾರೋವ್‌ ಜೊತೆ ಡ್ರಾ ಮಾಡಿಕೊಂಡರು.

ಪ್ರಜ್ಞಾನಂದ ಅವರು ಕಪ್ಪುಕಾಯಿಗಳಲ್ಲಿ ಆಡಿದ್ದು, ಅನಿಶ್ ಗಿರಿ ಜೊತೆಗಿನ ಪಂದ್ಯ ಡ್ರಾ ಮಾಡಿಕೊಳ್ಳಲು ಅಷ್ಟೇನೂ ಕಷ್ಟಪಡಲಿಲ್ಲ. ಈ ಪಂದ್ಯದಲ್ಲಿ ಗಿರಿ ಒಂದೆರಡು ಬಾರಿ ಕೊಂಚ ಮೇಲುಗೈ ಪಡೆದಂತೆ ಕಂಡರೂ, ಪ್ರಜ್ಞಾನಂದ ಅವರು ಎದುರಾಳಿಯ ಗೆಲುವಿನ ಯತ್ನಗಳು ಬಲಗೊಳ್ಳದಂತೆ ತಡೆಯುವಲ್ಲಿ ಯಶಸ್ವಿ ಆದರು.

ಅಮೆರಿಕಕ್ಕೆ ಫಿರೋಜ್‌?:

ಈ ಮಧ್ಯೆ ಇರಾನ್‌ನಲ್ಲಿ ಹುಟ್ಟಿಬೆಳೆದು ಗ್ರ್ಯಾಂಡ್‌ಮಾಸ್ಟರ್ ಆದ ಮೇಲೆ ಅಲಿರೇಜಾ ಫಿರೋಜ್ ಕೆಲವು ವರ್ಷಗಳ ಹಿಂದೆ ಫ್ರಾನ್ಸ್‌ನ ಪೌರತ್ವ ಪಡೆದು ಪ್ಯಾರಿಸ್‌ನಲ್ಲಿ ನೆಲೆಸಿದ್ದಾರೆ. ಅವರಿಗೆ ಅಮೆರಿಕ ಪರ ಆಡಲು ಆಹ್ವಾನ ನೀಡಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದುವರೆಗೆ ಇದು ಅಧಿಕೃತಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.