ಟೊರಾಂಟೊ: ಭಾರತದ ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು 14 ಸುತ್ತುಗಳ ಕ್ಯಾಂಡಿಡೇಟ್ಸ್ ಟೂರ್ನಿಯ 13ನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು ಎದುರಿಸಲಿದ್ದಾರೆ. ಈ ಟೂರ್ನಿಯಲ್ಲಿ ಪರದಾಡಿರುವ ಅಲಿರೇಝಾ ವಿರುದ್ಧ ಭಾರತದ ಆಟಗಾರ ಜಯಗಳಿಸಿದಲ್ಲಿ ಪ್ರಶಸ್ತಿಗೆ ‘ಫೊಟೊ ಫಿನಿಷ್’ ಪೈಪೋಟಿ ನಡೆಯುವ ಸಾಧ್ಯತೆಯಿದೆ.
ಕೊನೆಯ ಸುತ್ತಿನಲ್ಲಿ ಗುಕೇಶ್ ಬಿಳಿ ಕಾಯಿಗಳಲ್ಲಿ ನಕಾಮುರಾ ವಿರುದ್ಧ ಆಡಲಿದ್ದಾರೆ. ಪ್ರಸ್ತುತ ಅವರು 7.5 ಪಾಯಿಂಟ್ಸ್ ಸಂಗ್ರಹಿಸಿದ್ದು, ಅಮೆರಿಕದ ಹಿಕಾರು ನಕಾಮುರಾ ಮತ್ತು ರಷ್ಯಾದ ನೆಪೊಮ್‌ನಿಯಾಚಿ ಜೊತೆ ಸಂಯುಕ್ತವಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ವರ್ಷದ ಅತಿ ದೊಡ್ಡ ಚೆಸ್ ಟೂರ್ನಿಯಲ್ಲಿ ಇನ್ನೆರಡು ಸುತ್ತು ಉಳಿದಿವೆ.
13ನೇ ಸುತ್ತಿನ ಅತಿ ಮಹತ್ವದ ಪಂದ್ಯ ಎಂದರೆ ಎರಡು ಬಾರಿಯ ಚಾಂಪಿಯನ್ ನೆಪೊಮ್‌ನಿಯಾಚಿ ಮತ್ತು ಎರಡನೇ ಶ್ರೇಯಾಂಕದ ನಕಾಮುರಾ ನಡುವಣ. ನಿಧಾನವಾಗಿ ಕುದುರಿಕೊಂಡ ನಕಾಮುರಾ ಈಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇಲ್ಲಿ ಕೊನೆಯ ಮೂರು ಸುತ್ತಿನ ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ಇನ್ನೊಂದೆಡೆ ರಷ್ಯಾ ಆಟಗಾರ ನೆಪೊಮ್‌ನಿಯಾಚಿ ಈ ಕಠಿಣ ಟೂರ್ನಿಯಲ್ಲಿ ಸೋಲುಕಂಡಿಲ್ಲದ ಏಕಮಾತ್ರ ಆಟಗಾರ ಎನಿಸಿದ್ದಾರೆ.
ಮೇಲಿನ ಮೂವರನ್ನು ಬಿಟ್ಟರೆ, ಪ್ರಶಸ್ತಿಗೆ ಸ್ವಲ್ಪ ಅವಕಾಶ ಇರುವುದು ಅಮೆರಿಕದ ಆಟಗಾರ ಫ್ಯಾಬಿಯಾನೊ ಕರುವಾನ ಅವರಿಗೆ ಮಾತ್ರ. ಆದರೆ ಇಟಲಿ ಮೂಲದ ಅವರಿಗೆ ಮುಂದಿನ ಎರಡು ಸುತ್ತುಗಳಲ್ಲಿ ಕ್ರಮವಾಗಿ ಆರ್.ಪ್ರಜ್ಞಾನಂದ ಮತ್ತು ನೆಪೊಮ್‌ನಿಯಾಚಿ ಅವರ ಸವಾಲು ಎದುರಾಗಲಿದೆ. ಗುಕೇಶ್‌ಗೆ ಅಂತಿಮ ಸುತ್ತಿನಲ್ಲಿ ನಕಾಮುರಾ ಎದುರಾಳಿ. ಈ ಪಂದ್ಯ ಅವರ ಭವಿಷ್ಯವನ್ನು ನಿರ್ಧರಿಸಲಿದೆ.
ಶುಕ್ರವಾರ ಟೂರ್ನಿಗೆ ವಿರಾಮದ ದಿನವಾಗಿತ್ತು.
ಪ್ರಜ್ಞಾನಂದ ಟೂರ್ನಿಯ ಮಧ್ಯಮ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸ್ಥಿರತೆ ಕಾಪಾಡಲಿಲ್ಲ. ಈಗ ಅವರ ಬಳಿ ಆರು ಪಾಯಿಂಟ್‌ಗಳಿವೆ.
ಭಾರತದ ಇನ್ನೊಬ್ಬ ಆಟಗಾರ ವಿದಿತ್ ಗುಜರಾತಿ ಕೂಡ ಉತ್ತಮ ಆರಂಭ ಮಾಡಿದರೂ ನಂತರ ಅದೇ ಲಯ ಕಾಪಾಡಲಿಲ್ಲ. ನಕಾಮುರಾ ವಿರುದ್ಧ ಅವರ ಗೆಲುವು ಗಮನ ಸೆಳೆದಿತ್ತು. ಅವರು 13ನೇ ಸುತ್ತಿನಲ್ಲಿ ನಿಜತ್ ಅಬಸೋವ್ (ಅಜರ್‌ಬೈಜಾನ್) ವಿರುದ್ಧ ಆಡಲಿದ್ದಾರೆ.
ಅಲಿರೇಝಾ ಅವರು ಇಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಅವರು ಕೇವಲ 4.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಟೂರ್ನಿಯಲ್ಲಿ ಆಡುತ್ತಿರುವ ಆಟಗಾರರ ಪೈಕಿ ಕಡಿಮೆ ಕ್ರಮಾಂಕ (114) ಹೊಂದಿರುವ ಅಬಸೋವ್ ಮೂರು ಪಾಯಿಂಟ್ಸ್ ಮಾತ್ರ ಗಳಿಸಿದ್ದಾರೆ.
ಅಗ್ರಸ್ಥಾನದಲ್ಲಿ ಝೊಂಗ್‌ಯಿ: ಚೀನಾದ ಝೊಂಗ್‌ಯಿ ತಾನ್ ಮಹಿಳೆಯರ ವಿಭಾಗದಲ್ಲಿ ಎಂಟು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅದೇ ದೇಶದ ಟಿಂಗ್ಜೀ ಲೀ ಅವರು ಅರ್ಧ ಪಾಯಿಂಟ್ ಅಂತರದಿಂದ ಎರಡನೇ ಸ್ಥಾನದಲ್ಲಿದ್ದಾರೆ.
ರಷ್ಯಾದ ಇಬ್ಬರು– ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಮತ್ತು ಕ್ಯಾಥೆರಿನಾ ಲಾಗ್ನೊ ಜೊತೆ ಭಾರತದ ಕೋನೇರು ಹಂಪಿ ಅವರು ತಲಾ ಆರು ಪಾಯಿಂಟ್ಸ್ ಶೇಖರಿಸಿದ್ದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಆರ್.ವೈಶಾಲಿ (5.5) ನಂತರದ ಸ್ಥಾನದಲ್ಲಿದ್ದಾರೆ. ಅನ್ನಾ ಮುಝಿಚುಕ್ (ಉಕ್ರೇನ್) ಮತ್ತು ನುರ್ಗ್ಯುಲ್ ಸಲಿಮೋವಾ ಅವರು ಏಳೂ ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ. 12ನೇ ಸುತ್ತಿನಲ್ಲಿ ಹಂಪಿ, ಅನ್ನಾ ಮುಝಿಚುಕ್ ವಿರುದ್ಧ, ವೈಶಾಲಿ, ಟಿಂಗ್ಜೀ ಲೀ ವಿರುದ್ಧ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.