ಟೆಹರಾನ್: ಭಾರತದ ಗುಲ್ವೀರ್ ಸಿಂಗ್ ಅವರು ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ‘ಲೇನ್ ಉಲ್ಲಂಘನೆ’ಗಾಗಿ ಅನರ್ಹಗೊಂಡಿದ್ದು, ಅವರು ಪುರಷರ 3,000 ಮೀಟರ್ ಓಟದಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಕಳೆದುಕೊಂಡರು.
ಸೋಮವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ 8ನಿ.07.48 ಸೆ.ಗಳಲ್ಲಿ ಓಟ ಪೂರೈಸಿ ಅಗ್ರಸ್ಥಾನ ಪಡೆದಿದ್ದರು. ನಂತರ ಅವರನ್ನು ಲೇನ್ ಉಲ್ಲಂಘನೆಗಾಗಿ ಅನರ್ಹಗೊಳಿಸಲಾಯಿತು. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ತಡರಾತ್ರಿ ಮಾಡಿದ ಮನವಿಯನ್ನು ಸಹ ತಿರಸ್ಕರಿಸಲಾಯಿತು.
ಈ ಸ್ಪರ್ಧೆ (3000 ಮೀ. ಓಟ) ಒಲಿಂಪಿಕ್ಸ್‌ನಲ್ಲಿ ಇರುವುದಿಲ್ಲ.
‘ಗುಲ್ವೀರ್ ಸಿಂಗ್ ಅವರು ಲೇನ್ ಉಲ್ಲಂಘನೆ ಮಾಡಿದ್ದಾರೆ ಎಂದು ಅನರ್ಹಗೊಳಿಸಲಾಗಿದೆ. ಇದರ ವಿರುದ್ಧ ಎಎಫ್‌ಐ ಸಲ್ಲಿಸಿದ್ದ ಪ್ರತಿಭಟನೆಯನ್ನು ತಿರಸ್ಕರಿಸಲಾಗಿದೆ’ ಎಂದು ತಂಡದ ಜೊತೆಯಿರುವ ತರಬೇತುದಾರರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಗುಲ್ವೀರ್ ಲೇನ್ ಉಲ್ಲಂಘನೆ ಮಾಡಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ’ ಎಂದು ತೀರ್ಪುಗಾರರು ಹೇಳಿದರು.
ತಾಂತ್ರಿಕ ನಿಯಮಗಳಲ್ಲಿ 17.2 ಮತ್ತು 17.3 ಕ್ಲಾಸ್‌ಗಳು ಅಥ್ಲೀಟುಗಳ ಲೇನ್ ಉಲ್ಲಂಘನೆಯ ಬಗ್ಗೆ ತಿಳಿಸುತ್ತವೆ ಮತ್ತು ಅವರನ್ನು ಯಾವ ಸಂದರ್ಭದಲ್ಲಿ ಅನರ್ಹಗೊಳಿಸಬಾರದು ಎಂಬುದನ್ನೂ ತಿಳಿಸುತ್ತವೆ.
ಎರಡನೇ ಸ್ಥಾನ ಪಡೆದಿದ್ದ ಕಿರ್ಗಿಸ್ತಾನದ ಕೆನೆಶ್‌ಬೆಕೊವ್ ನೂರ್‌ಸುಲ್ತಾನ್ (8:08.85 ಸೆ.) ಅವರಿಗೆ ಚಿನ್ನದ ಪದಕ ನೀಡಲಾಯಿತು. ಮೂರನೇ ಸ್ಥಾನ ಪಡೆದಿದ್ದ ಇರಾನ್‌ನ ಜಲಿಲ್ ನಸೇರಿ (8:09.39) ರಜತ ಪದಕ ಹಾಗೂ ನಾಲ್ಕನೆಯವರಾಗಿ ಸ್ಪರ್ಧೆ ಪೂರೈಸಿದ ಕಜಕಸ್ತಾನದ ಫ್ರೋಲೋವ್‌ಸ್ಕಿ (8:17.17) ಅವರಿಗೆ ಕಂಚಿನ ಪದಕ ನೀಡಲಾಯಿತು.
ಭಾರತವು ಮೂರು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿತು.
ಗುಲ್ವೀರ್ ಚಿನ್ನ ಕಳೆದುಕೊಳ್ಳುವುದರೊಂದಿಗೆ ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಚಿನ್ನಗಳ ಸಂಖ್ಯೆ ಮೂರಕ್ಕೆ ಇಳಿದಿದೆ. ಷಾಟ್‌ಪಟ್ ಥ್ರೋವರ್ ತಜಿಂದರ್‌ಪಾಲ್ ಸಿಂಗ್ ತೂರ್, 100 ಮೀ. ಹರ್ಡಲ್ಸ್ ಓಟಗಾರ್ತಿ ಜ್ಯೋತಿ ಯರ‍್ರಾಜಿ ಮತ್ತು 1,500 ಮೀ. ಓಟಗಾರ್ತಿ ಹರ್ಮಿಲನ್ ಬೇನ್ಸ್ ಚಿನ್ನ ಗೆದ್ದ ಮೂವರು. ಭಾರತ ಗೆದ್ದ ಏಕೈಕ ಬೆಳ್ಳಿ ಪದಕವನ್ನು 3,000 ಮೀ. ಓಟದಲ್ಲಿ ಅಂಕಿತಾ ಗಳಿಸಿಕೊಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.