ನವದೆಹಲಿ: ಭಾರತದ ಅಥ್ಲೀಟ್ ಗುಲ್ವೀರ್ ಸಿಂಗ್ ಅವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಪುರುಷರ 10 ಸಾವಿರ ಮೀಟರ್ ಓಟದಲ್ಲಿ 16 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು, ಬೆಳ್ಳಿ ಪದಕ ಗೆದ್ದರು. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದರು.
ಶನಿವಾರ ನಡೆದ ಸ್ಪರ್ಧೆಯಲ್ಲಿ 25 ವರ್ಷದ ಗುಲ್ವೀರ್ ಅವರು 27 ನಿಮಿಷ 41.81 ಸೆಕೆಂಟ್‌ನಲ್ಲಿ ಗುರಿ ತಲುಪಿದರು. ಈ ಮೂಲಕ 2008ರಲ್ಲಿ ಸುರೇಂದ್ರ ಸಿಂಗ್ (28 ನಿ.2.89 ಸೆ.) ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ಗುಲ್ವೀರ್ ಅವರ ಈ ಪ್ರಯತ್ನವು ಒಲಿಂಪಿಕ್ ಅರ್ಹತೆ ಗಳಿಸಲು ಸಾಕಾಗಲಿಲ್ಲ. ಪ್ಯಾರಿಸ್ ಕ್ರೀಡಾಕೂಟದ ಅರ್ಹತಾ ಸಮಯವನ್ನು (27 ನಿಮಿಷ) ತಲುಪಲು ಅವರಿಗೆ ಸಾಧ್ಯವಾಗಲಿಲ್ಲ.
ಭಾರತದ ಮತ್ತೊಬ್ಬ ಅಥ್ಲೀಟ್ ಕಾರ್ತಿಕ್ ಕುಮಾರ್ (28 ನಿ. 1.90 ಸೆ) ಒಂಬತ್ತನೇ ಸ್ಥಾನ ಪಡೆದರು. ಅವರು ಓಟವೂ ಹಿಂದಿನ ರಾಷ್ಟ್ರೀಯ ದಾಖಲೆಗಿಂತ ಉತ್ತಮವಾಗಿತ್ತು. ಅದೇ ಸ್ಪರ್ಧೆಯಲ್ಲಿದ್ದ ಭಾರತದ ಅವಿನಾಶ್ ಸಾಬ್ಲೆ ಅವರು 15ನೇ ಲ್ಯಾಪ್‌ನಲ್ಲಿ 6 ಸಾವಿರ ಮೀ ಮಾರ್ಕ್‌ನಲ್ಲಿ ರೇಸ್‌ನಿಂದ ಹೊರಗುಳಿದರು.
ಮಹಿಳೆಯರ 10 ಸಾವಿರ ಮೀ ಓಟದಲ್ಲಿ ಪಾರುಲ್ ಚೌಧರಿ (32 ನಿ.2.08ಸೆ.) 20ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು. ಅವರಿಗೂ ಒಲಿಂಪಿಕ್ಸ್ ಅರ್ಹತೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.